ಕರ್ನಾಟಕ

ಕೇರಳ ದೇಗುಲ ಅಗ್ನಿ ದುರಂತಕ್ಕೆ ಸಹಾಯ ಹಸ್ತ…ಅಗತ್ಯ ಔಷಧಗಳೊಂದಿಗೆ 10 ವೈದ್ಯರ ತಂಡ ಕೇರಳ ರಾಜ್ಯಕ್ಕೆ ರವಾನೆ: ಯು.ಟಿ. ಖಾದರ್

Pinterest LinkedIn Tumblr

UT Khader

ಬೆಂಗಳೂರು: ಕೇರಳ ರಾಜ್ಯದ ಮೂಕಾಂಬಿಕ ದೇಗುಲದಲ್ಲಿ ಸಂಭವಿಸಿದ ಭಾರೀ ಅಗ್ನಿ ಅನಾಹುತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನೆರವಿನ ಹಸ್ತ ಚಾಚಿದ್ದು, ಅಗತ್ಯ ಔಷಧಗಳೊಂದಿಗೆ 10 ವೈದ್ಯರ ತಂಡವನ್ನು ಕೇರಳಕ್ಕೆ ಕಳುಹಿಸಲು ತೀರ್ಮಾನಿಸಿದೆ ಎಂದು ಭಾನುವಾರ ತಿಳಿದುಬಂದಿದೆ.

ಈ ಕುರಿತಂತೆ ಮಾತನಾಡಿರುವ ಆರೋಗ್ಯ ಸಚಿವ ಯು.ಟಿ ಖಾದರ್ ಅವರು, ಕೇರಳದಲ್ಲಿ ಸಂಭವಿಸಿದ ಅಗ್ನಿ ಅನಾಹುತ ಪ್ರಕರಣಕ್ಕೆ ಸಂಬಂಧಿಸಿ ಕೇರಳ ರಾಜ್ಯಕ್ಕೆ ನೆರವು ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಈಗಾಗಲೇ ಅಗತ್ಯ ಔಷಧಿಗಳೊಂದಿಗೆ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು, ಡಾ. ಸ್ಮಿತಾ ನೇತೃತ್ವದಲ್ಲಿ 10 ವೈದ್ಯರ ತಂಡ ಹಾಗೂ ಪ್ಯಾರಾ ಮೆಡಿಕಲ್ ಸಿಬ್ಬಂದಿಯ ತಂಡವನ್ನು ಕೇರಳಕ್ಕೆ ರವಾನೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಗಾಯಾಳುಗಳಿಗೆ ನಿರಂತರವಾಗಿ ಚಿಕಿತ್ಸೆ ನೀಡುವಂತೆ ವೈದ್ಯರ ತಂಡಕ್ಕೆ ನಿರ್ದೇಶನ ನೀಡಲಾಗಿದೆ. ಔಷಧಿಗಳ ಕೊರತೆಯುಂಟಾದರೆ, ಮಾರುಕಟ್ಟೆಯಲ್ಲಿ ಕೊಂಡು ಚಿಕಿತ್ಸೆ ನೀಡುವುದಾಗಿ ಹೇಳಲಾಗಿದೆ. ವೈದ್ಯರು ಮಾರುಕಟ್ಟೆಯಲ್ಲಿ ಕೊಂಡ ಔಷಧಿಗಳ ಬಿಲ್ ನ್ನು ನೀಡಿದರೆ, ವೆಚ್ಚವನ್ನು ರಾಜ್ಯ ಸರ್ಕಾರ ನೋಡಿಕೊಳ್ಳುತ್ತದೆ. ಒಂದು ವೇಳೆ ಮತ್ತಷ್ಟು ವೈದ್ಯರ ಅಗತ್ಯಬಿದ್ದರೆ ಕಳುಹಿಸಿಕೊಡಲಾಗುತ್ತದೆ ಎಂದು ಹೇಳಿದ್ದಾರೆ.

ಕೊಲ್ಲಂ ಜಿಲ್ಲೆಯಲ್ಲಿನ ಪಾರವೂರ್ ನಲ್ಲಿರುವ ಮೂಕಾಂಬಿಕ ದೇಗುಲದಲ್ಲಿ ವಾರ್ಷಿಕೋತ್ಸವ ಸಮಾರಂಭವನ್ನು ನಡೆಸಲಾಗುತ್ತಿತ್ತು. ಪ್ರತೀ ಬಾರಿಯಂತೆ ಈ ಬಾರಿಯೂ ದೇಗುಲದಲ್ಲಿ ಬಾಣಬಿರುಸುಗಳ ಪ್ರದರ್ಶನದ ನಡೆಸಲಾಗಿದೆ. ಆದರೆ, ಆಕಾಶದಲ್ಲಿ ಹಾರುವ ಬದಲು ಪಟಾಕಿಗಳು ನೆಲದಲ್ಲೇ ಸಿಡಿದ ಪರಿಣಾಮ ಘಟನೆಯಲ್ಲಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿ, 350ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

Write A Comment