ಕರ್ನಾಟಕ

ಚೀನಾ ಮೂಲದ ಸಂಸ್ಥೆ ಕಾಮಗಾರಿ ವಿರೋಧಿಸಿ ಪ್ರತಿಭಟನೆ

Pinterest LinkedIn Tumblr

raiಗುಂಡ್ಲುಪೇಟೆ: ತೆರಕಣಾಂಬಿ ಸಮೀಪದ ಕಗ್ಗಳದಹುಂಡಿ ಗ್ರಾಮದ ಹೊರವಲಯದಲ್ಲಿ ಚೀನಾ ಮೂಲದ ಸಂಸ್ಥೆಯೊಂದು ಅಕ್ರಮವಾಗಿ ಚೆಂಡು ಹೂ ಸಂಸ್ಕರಣೆ ಘಟಕವನ್ನು ಸ್ಥಾಪಿಸುತ್ತಿರುವುದನ್ನು ವಿರೋಧಿಸಿ ರೈತರು ಮತ್ತು ತ್ರಿಯಂಬಕಪುರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ತಾಲೂಕಿನ ಇತಿಹಾಸ ಪ್ರಸಿದ್ಧ ಸ್ಕಂದಗಿರಿ ಪಾರ್ವತಾಂಭ ದೇವಸ್ಥಾನ ಸಮೀಪದ ಒಂಟಿಗುಡ್ಡಕ್ಕೆ ಹೊಂದಿಕೊಂಡಂತೆ ಇರುವ ಜಾಗದಲ್ಲಿ ಚೆಂಡು ಹೂವು ಕಾರ್ಖಾನೆ ನಿರ್ಮಾಣ ಕಾರ್ಯ ಅಕ್ರಮವಾಗಿ ನಡೆಸಲಾಗುತ್ತಿದ್ದು, ಈ ಬಗ್ಗೆ ತಾಲೂಕು ಆಡಳಿತ, ಪರಿಸರ ಇಲಾಖೆ ಮತ್ತು ಸಂಬಂಧಿಸಿದ ಗ್ರಾಮ ಪಂಚಾಯಿತಿ ಆಡಳಿತದಿಂದ ಯಾವುದೇ ಅನುಮತಿಯನ್ನೇ ಪಡೆದುಕೊಳ್ಳದೆ ಕಾಮಗಾರಿ ನಡೆಸಲಾಗುತ್ತಿದೆ. ಆದ್ದರಿಂದ ಕೂಡಲೇ ಕಾರ್ಖಾನೆ ನಿರ್ಮಾಣಕ್ಕೆ ತಡೆ ನೀಡಬೇಕು ಎಂದು ಆಗ್ರಹಿಸಿದರು.
ಕಾರ್ಖಾನೆ ಮುಚ್ಚಿಸುವಂತೆ ಹೇಳಿದ್ದರೂ ಮತ್ತೆ ಪ್ರಾರಂಭಿಸಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದ್ದು, ಕಾರ್ಖಾನೆ ನಡೆಸುವ ಜಾಗದಲ್ಲಿ ಚೆಂಡು ಹೂವನ್ನು ಅವೈಜ್ಞಾನಿಕವಾಗಿ ಕೊಳೆಯಿಸಿ, ಒಣಗಿಸಿದ ನಂತರ ಬಣ್ಣದಪುಡಿ ತಯಾರಿಸುವ ದೊಡ್ಡ ಪ್ರಮಾಣದ ಕಾರ್ಖಾನೆ ನಿರ್ಮಾಣವಾಗುತ್ತಿದೆ. ಇದಕ್ಕಾಗಿ ಈಗಾಗಲೇ ಪ್ರತಿ ದಿನವೂ ಹತ್ತಾರು ಯಂತ್ರಗಳು, ನೂರಾರು ಕಾರ್ಮಿಕರು ಭೂಮಿಯನ್ನು ಸಮತಟ್ಟುಗೊಳಿಸುವ, ಭೂಮಿಯಾಳದಲ್ಲಿ ದೊಡ್ಡ ಸಿಮೆಂಟ್ ತೊಟ್ಟಿಗಳು ಹಾಗೂ ಕೊಳವೆ ಬಾವಿ ಕೊರೆಸಲಾಗಿದೆ. ಇದರಿಂದ ಮಳೆಗಾಲದಲ್ಲಿ ನೀರು ಹರಿಯುವ ಸರಕಾರಿ ಹಳ್ಳ ಕೊಳ್ಳಗಳು ಮುಚ್ಚಿ ಹೋಗಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಭೂ ಮಾಲೀಕರಿಂದ ಕೇವಲ ಖರೀದಿ ಒಪ್ಪಂದವನ್ನು ಮಾತ್ರ ಮಾಡಿಕೊಂಡಿದ್ದು, ಖಾತೆ ವರ್ಗಾವಣೆ ಹಾಗೂ ಭೂಪರಿವರ್ತನೆ ಮುಂತಾದ ಯಾವುದೇ ಪ್ರಕ್ರಿಯೆಗಳನ್ನೂ ನಡೆಸಿಲ್ಲ. ಆದರೆ ಭೂಮಾಲೀಕತ್ವ ಬದಲಾವಣೆಯಾಗುವ ಮೊದಲೇ ಕೆಲಸೂರು ಗ್ರಾಮ ಪಂಚಾಯಿತಿಯಿಂದ ಕಾಮಗಾರಿ ನಡೆಸಲು ತಮ್ಮದೇನೂ ತಕರಾರು ಇಲ್ಲವೆಂಬ ಬಗ್ಗೆ ಅನುಮತಿ ಪತ್ರವನ್ನು ಪಡೆದುಕೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Write A Comment