ರಾಷ್ಟ್ರೀಯ

ಬಂಕಿಮರ ಆ ಗೀತೆ ದೇಶಭಕ್ತರ ಆತ್ಮ ಗೀತೆಯಾಗಿತ್ತು!

Pinterest LinkedIn Tumblr

BAKIMನಮ್ಮ ದೇಶದ ಸಾಂಸ್ಕೃತಿಕ ಚಹರೆಯನ್ನು ವಿಶ್ವಕ್ಕೆ ತೋರಿಸಿದ ಸ್ವಾಮಿ ವಿವೇಕಾನಂದರ ಗುರುಗಳಾದ ರಾಮಕೃಷ್ಣ ಪರಮಹಂಸರ ಅಂದಿನ ಬಾಲವಿವೇಕರಾದ ನರೇಂದ್ರನನ್ನು ಸ್ವತಃ ಪರಮಹಂಸರೇ ಒಬ್ಬ ಧಿಮಂತ ಮತ್ತು ಮಹಾ ದೇಶಭಕ್ತನ ಬಳಿ ಪಾಠ ಹೇಳಿಸಿಕೊಳ್ಳಲು ಕಳಿಸುತ್ತಿದ್ದರು. ಅವರ ವೈಚಾರಿಕತೆಯ ಪ್ರಭಾವದಿಂದ ಇಂದು ಸ್ವಾಮಿವಿವೇಕಾನಂದರು ವಿಶ್ವಮಾನವರಾಗಿ ಕಂಗೊಳಿಸದರು ಎಂದರೆ ಅದು ಸುಳ್ಳಲ್ಲ. ಹೀಗೆ ರಾಷ್ಟ್ರಭಕ್ತಿಯ ಬೀಜವನ್ನು ಬಿತ್ತಿ ಸ್ವಾತಂತ್ರ ಸಂಗ್ರಾಮದ ಹೋರಾಟಕ್ಕೆ ಬೆಂಕಿಯಂಥ ಘೋಷವಾಕ್ಯವನ್ನು ನೀಡಿದ ಆ ಮಹಾನ್ ಪುರುಷ ನಮ್ಮಿಂದ ಕಣ್ಮರೆಯಾಗಿ ಇಂದಿಗೆ 122 ವರ್ಷಗಳು ಕಳೆದು ಹೋಗಿದೆ. ಜಾತಿಯಿಂದ ಬ್ರಾಹ್ಮಣರಾದರು ಬಂಗಾಲಿ ಭಾಷೆಯ ಇವರ ವಿದ್ವತ್ತು ಬಾಲ್ಯದಲ್ಲೇ ಅನಾವರಣಗೊಂಡಿತ್ತು.

ಇಂತಹ ದೇಶಭಕ್ತನ ಹೃದಯದಿಂದ ಚಿಮ್ಮಿದ ವಂದೇ ಮಾತರಂ ಎಂಬ ಗೀತೆ ಮುಂದೆ ಬಡ ಭಾರತೀಯರ, ಸೈನಿಕರ ರಣಘೋಷಣೆಯಾಗಿ ಬ್ರಿಟೀಷರ ಹೃದಯವನ್ನೇ ಅಲ್ಲೋಲಕಲ್ಲೋಲಗೊಳಿಸಿ ಭಾರತವನ್ನು ಬಿಟ್ಟು ಓಡಿಹೋಗುವಷ್ಟು ಪ್ರತಿಧ್ವನಿಸಿತು. ಅಂತಹ ಮೇರು ಕವಿ ಮತ್ತು ರಾಷ್ಟ್ರಭಕ್ತ ಬಂಕಿಮ ಚಂದ್ರ ಚಟೋಪಾದ್ಯ. (ಚಟರ್ಜಿ).ಆದರೆ ಇಡೀ ವಿಶ್ವದಲ್ಲಿ ಹೆಣ್ಣಿನ ಮೂಲ ಇರುವುದು ಭಾರತದಲ್ಲಿ. ನಮ್ಮ ರಾಷ್ಟ್ರಕವಿಗಳಾದ ಕುವೆಂಪುರವರು ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ಎಂದು ನಮ್ಮ ನಾಡಿನ, ದೇಶದ ಎಲ್ಲ ರೀತಿಯ ಸಂಪತ್ತು, ಸಮಸ್ತ ಇತಿಹಾಸ, ಇತಿಹಾಸ ಪುರುಷರ ಸಾಧನೆಗಳು ಸಕಲವೂ ನಿನ್ನದೇ, ನಿನ್ನಿಂಲೇ, ನೀನೇ ಇದೆಲ್ಲದರ ಜನನಿ ಎಂದು ನಮ್ಮ ನಾಡಿಗೆ ನಾಡಗೀತೆಯನ್ನು ಬರೆದಿದ್ದಾರೆ. ಹೀಗೆ ಜನನೀ ಜನ್ಮಭೂಮಿ ಎಂಬ ವೇದಘೋಷವನ್ನೇ ದೇಶವೆಂದರೆ ಅದು ತಾಯಿ, ಅವಳೇ ಭಾರತಮಾತೆ ಎಂಬ ಪರಿಕಲ್ಪನೆಯನ್ನು ನೀಡಿದ ಭಾರತೀಯರಿಗೆ ನೀಡಿದ ಮೊದಲಿಗರಾದರು ಬಂಕಿಮರು.

ಹೆಣ್ಣು ಅಥವಾ ಮಹಿಳೆಯ ಸಂಕೇತವಾಗಿರುವ ಭಾರತದ ಸ್ವಾತಂತಸಂಗ್ರಾಮದಲ್ಲಿ ಬ್ರಿಟಿಷರ ದಬ್ಬಾಳಿಕೆಯ ಮತ್ತು ಗುಲಾಮಗಿರಿಯ ವಿರುದ್ಧ ದಂಗೆ ಏಳಲು, ಧಿಕ್ಕಾರ ಕೂಗಲು ಭಾರತೀಯರಿಗೊಂದು ನೈತಿಕ ಧೈರ್ಯ, ಕಿಚ್ಚು, ಹುಮ್ಮಸ್ಸು ತಂದು ಕೊಟ್ಟಿದ್ದು ಒಂದೇ ಗೀತೆ -‘ವಂದೇ ಮಾತರಂ’ ಎಂಬ ಸ್ವಾಭಿಮಾನದ ಗೀತೆ. ದುರ್ಗಾಮಾತೆ ಅಥವಾ ಭಾರತಾಂಬೆಯನ್ನು ಬಣ್ಣಿಸುವ ಈ ಗೀತೆಯ ಸಂಪೂರ್ಣ ಅರ್ಥವನ್ನು ತಿಳಿದುಕೊಂಡರೆ ಸ್ವಾಭಿಮಾನದ ಕಿಚ್ಚು ಉಕ್ಕುತ್ತದೆ. ಅಂದು ಒಬ್ಬ ಭಾರತೀಯ ವಂದೇ ಮಾತರಂ ಎಂದು ಕೂಗಿದರೆ ಅದು ಲಕ್ಷಾಂತರ ಭಾರತೀಯರ ಧನಿಯಲ್ಲಿ ಪ್ರತಿಧ್ವನಿಸುತ್ತಿತ್ತು, ಸಾವಿರಾರು ಲಾಠಿಯ ಏಟುಗಳನ್ನು ತಪ್ಪಿಸುತ್ತಿತ್ತು. ಅಂತಹ ಮಹಾಶಕ್ತಿ ಇರುವ ಗೀತೆಯನ್ನು ಕೊಟ್ಟ ಬಂಕಿಮ ಚಂದ್ರ ಚಟರ್ಜಿಯವರನ್ನು ಇತಿಹಾಸದಲ್ಲಿ ಒಬ್ಬ ರಾಷ್ಟ್ರಕವಿಯನ್ನಾಗಿ ಕಾಣಲೇ ಇಲ್ಲವೆಂಬುದು ದುರಂತ.

ಹೀಗೆ ಇತಿಹಾಸದಲ್ಲಿ ಮಾತೃಸಮನಾದ ಭಾರತಾಂಬೆಯ, ಭಾರತಮಾತೆಯನ್ನು ಕೊಂಡಾಡುವ ಭಾರತೀಯರ ಹೃದಯ ಗೀತೆಯನ್ನೇ ತಿರಸ್ಕರಿಸಿದ ಇತಿಹಾಸ ಮತ್ತು ದೇಶದ್ರೋಹಿಗಳು, ಅಂದು ಹೆಣ್ಣಿಗೆ ಸಿಗಲೇ ಬೇಕಿದ್ದ ಒಂದು ಮಹತ್ತರವಾದ ಅವಕಾಶ ಮತ್ತು ಅತ್ಯುನ್ನತ ಸ್ಥಾನವನ್ನು ಪ್ರಜ್ಞಾಪೂರ್ವಕವಾಗಿ ಕೈತಪ್ಪಿಸಿದರು. ದೌರ್ಭಾಗ್ಯವೆಂದರೆ ಇಂದೂ ಸಹ ವಂದೇ ಮಾತರಂ ಗೀತೆ ಕೆಲ ಸಮುದಾಯಗಳಿಗೆ, ರಾಜಕೀಯ ಪಕ್ಷಗಳಿಗೆ ಅಸಹ್ಯ ಮತ್ತು ಮುಜಗರಗೊಳಿಸುವಂತೆ ಆಗುತ್ತಿದೆ. ಎರಡು ವರ್ಷಗಳ ಹಿಂದೆ ಸಂಸತ್ತಿನಲ್ಲಿ ಮುಸ್ಲಿಂ ಸಂಸದನೊಬ್ಬ ವಂದೇ ಮಾತರಂ ಗೀತೆಯನ್ನು ಧಿಕ್ಕರಿಸಿದಾಗ ಆಡಳಿತದಲ್ಲಿರುವ ಇದೇ ಕಾಂಗ್ರೆಸ್ ಸರ್ಕಾರ ಮೌನವಹಿಸಿತ್ತು.

ಒಟ್ಟಿನಲ್ಲಿ ಕೈಕಾಲನ್ನು ನೇರವಾಗಿ ನೀಡಿ, ತಲೆಬಾಗಿ ಮೌನವಾಗಿ, ಸ್ತಬ್ಧಬಾಗಿ ನಿಲ್ಲುವಂತೆ ಮಾಡುವ ಸಂವಿಧಾನಾತ್ಮಕ ರಾಷ್ಟ್ರಗೀತೆಯಾದರೂ, ಸ್ವಾಭಿಮಾನದ ಮತ್ತು ರಾಷ್ಟ್ರಾಭಿಮಾನದ ಪ್ರತೀಕವಾಗಿ ಮಾರ್ದನಿಸಿ ನರನಾಡಿಗಳಲ್ಲಿ ವಿದ್ಯುತ್ ಸಂಚರಿಸುವಂತೆ ರೋಮಾಂಚನಗೊಳಿಸುವ ವಂದೇ ಮಾತರಂ ಗೀತೆ ಭಾರತೀಯರ ಆತ್ಮಗೀತೆಯೇ ಹೌದು. ಇಂತಹ ಅಮರ ಆತ್ಮಗೀತೆಯನ್ನು ಸೃಷ್ಠಿಸಿದ ಮಹಾನ್ ರಾಷ್ಟ್ರಭಕ್ತರಾಗಿದ್ದ ಬಂಕಿಮಚಂದ್ರ ಚಟರ್ಜಿಯವರು ಇಂದು ಬದುಕಿದ್ದರೆ ಇಂದಿನ ದೇಶದ್ರೋಹಿ ವಿದ್ಯಾರ್ಥಿಗಳ, ಓವೈಸಿಗಳಂಥ, ಇವರನ್ನು ಸಮರ್ಥಿಸುವ ಬುದ್ದಿಜೀವಿಗಳೆಂಬ ನಿರುಪಯುಕ್ತರನ್ನು ಗಡಿಪಾರು ಮಾಡಲು ಮತ್ತೊಂದು ಸಂಗ್ರಾಮಕ್ಕೆ ನಾಂದಿ ಹಾಡುತ್ತಿದ್ದರೇನೋ.

Write A Comment