ಕರ್ನಾಟಕ

ಕೆಲಸಕ್ಕೆ ಬಾರದ ಪ್ರಾಮಾಣಿಕತೆ ಎಷ್ಟಿದ್ದರೇನು?

Pinterest LinkedIn Tumblr

kimmane-ratnakar-e1458814241628ನಮ್ಮ ಶಿಕ್ಷಣ ಸಚಿವರು ಬಹುತೇಕ ಸಂದರ್ಭಗಳಲ್ಲಿ ‘ತಾನು ಪ್ರಾಮಾಣಿಕ’ ಎಂಬುದನ್ನು ಹೇಳಿಕೊಳ್ಳುತ್ತಾರೆ. ಅದರಲ್ಲೇನೂ ಅನುಮಾನವಿಲ್ಲ. ಆದರೆ ಒಂದು ಇಲಾಖೆ ನಡೆಸಲು ಸಚಿವರ ಪ್ರಾಮಾಣಿಕತೆಯೊಂದೇ ಕೆಲಸಕ್ಕೆ ಬಾರದು. ಯಾಕೆಂದರೆ ಕೆಲವೊಮ್ಮೆ ಅಪ್ರಾಮಾಣಿಕರು ಕೂಡ ಇಲಾಖೆಯನ್ನು ಅತ್ಯಂತ ಸಮರ್ಥವಾಗಿ ನಡೆಸಿಬಿಡುತ್ತಾರೆ.ಕಿಮ್ಮನೆ ರತ್ನಾಕರ ಅವರು ಪ್ರಾಮಾಣಿಕರೇ ಇರಬಹುದು. ಆದರೆ ಅವರು ಇಲಾಖೆಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ. ಯಾಕೆಂದರೆ ಪ್ರಾಮಾಣಿಕ ಸಚಿವರ ಇಲಾಖೆಯಲ್ಲಿ ಸಾಕಷ್ಟು ಅಪ್ರಾಮಾಣಿಕರು ಬಂದು ಹೋಗಿದ್ದಾರೆ. ಇದಕ್ಕೆ ಅವಕಾಶ ನೀಡುವುದು ಪ್ರಾಮಾಣಿಕತನವೇ? ಇನ್ನೂ ನಿಮ್ಮ ‘ಪ್ರಾಮಾಣಿಕತೆ’ಯಿಂದಾದ ಬಾನಗಡಿಗಳ ಲಿಸ್ಟೇ ನನ್ನ ಬಳಿ ಇದೆ. ಆರಂಭದಲ್ಲಿ ರಾಜ್‌ಕುಮಾರ್ ಖತ್ರಿ ಪಿಯು ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು.

ಅವರು ಅಧಿಕಾರ ವಹಿಸಿಕೊಳ್ಳದೇ ಮರಳಿ ಹೋದರು. ರಜನೀಶ್ ಗೋಯಲ್ ಪ್ರಭಾರಿಯಾಗಿ ಕೆಲಸ ಮಾಡಿದರು. ಕಪಿಲ್ ಮೋಹನ್ ಕೆಲ ಸಮಯ ಇದ್ದರು. ಅವರ ಬಗ್ಗೆ ಜಗತ್ತಿಗೇ ಗೊತ್ತು. ಅದರ ನಂತರ ಭರತ್‌ಲಾಲ್ ಮೀನಾ ಪ್ರಭಾರಿಯಾಗಿ ಕೆಲಸ ಮಾಡಿದರು. ನಂತರ ಅಜಯ್ ಸೇಠ್. ಅದೇ ವಿಶ್ವೇಶ್ವರ ಹೆಗಡೆ ಅವರ ಸಮಯದಲ್ಲಿ ಕುಮಾರ್ ನಾಯಕ್ ಒಬ್ಬರೇ ಐದು ವರ್ಷ ಇದ್ದರು.ಇನ್ನು ಪಿಯು ನಿರ್ದೇಶನಾಲಯಕ್ಕೆ ರಶ್ಮಿ ಅವರನ್ನು ವರ್ಗ ಮಾಡಿದ ನಂತರ ಚರ್ಕವರ್ತಿ ಮೋಹನ್ ಬಂದರು. ಅವರೇನು ತುಂಬ ಒಳ್ಳೆಯ ಹೆಸರು ಹೊಂದಿದ ಅಧಿಕಾರಿ ಆಗಿರಲಿಲ್ಲ. ಅದರ ನಂತರ ರಾಮೇಗೌಡರು ಬಂದು ಕೊಂಚ ಸರಿಪಡಿಸುವ ಪ್ರಯತ್ನ ಮಾಡಿದರು. ಅಷ್ಟರಲ್ಲಿ ಸುಷ್ಮಾ ಗೋಡಬೋಲೆ ಅವರನ್ನು ತರಲಾಯಿತು. ಅವರಿದ್ದಾಗ ಮೌಲ್ಯಮಾಪನ ಗೊಂದಲವಾಗಿದ್ದು ಗೊತ್ತೇ ಇದೆ. ನಂತರ ರಮೇಶ್‌ರನ್ನು ತಂದು, ದ್ವಿತೀಯ ಪಿಯು ಪರೀಕ್ಷೆಗೂ ಒಂದೂವರೆ ತಿಂಗಳು ಮೊದಲು ಪಲ್ಲವಿ ಆಕುರತಿ ಅವರನ್ನು ನಿರ್ದೇಶಕಿಯನ್ನಾಗಿ ಮಾಡಲಾಯಿತು. ನೀವೇನೋ ಪರೀಕ್ಷೆ ಹೊಸ್ತಿಲಲ್ಲಿ ಹೊಸ ನಿರ್ದೇಶಕರನ್ನು ಹಾಕಿದರೆ ಪರೀಕ್ಷೆಗೆ ತೊಂದರೆಯಾಗುತ್ತದೆ ಎಂದು ಪತ್ರ ಬರೆದಿರಿ.

ಆದರೆ ಅಧಿಕಾರಿ ವರ್ಗಾವಣೆ ತಡೆಯಲು ನಿಮ್ಮಿಂದ ಸಾಧ್ಯವಾಗಲಿಲ್ಲ. ನನ್ನ ಇಲಾಖೆಗೆ ಇಂಥದ್ದೇ ಅಧಿಕಾರಿಯನ್ನು ಕೊಡಿ ಎಂದು ಕೂಡ ನಾನು ಹೇಳುವುದಿಲ್ಲ ಎಂಬಷ್ಟು ಪ್ರಾಮಾಣಿಕರಾಗಲು ಹೋಗಿ, ವಿದ್ಯಾರ್ಥಿಗಳಿಗೆ ತೊಂದರೆ ಮಾಡಿದ್ದು ನಿಮ್ಮ ಈ ನಿಲುವೇ ಅಲ್ಲವೇ?ಒಂದು ಇಲಾಖೆಗೆ ಈ ಪ್ರಮಾಣದಲ್ಲಿ ಅಧಿಕಾರಿಗಳು ಬದಲಾದರೆ ಕೆಲಸ ಸುಸೂತ್ರವಾಗಿ ನಡೆಯಲು ಹೇಗೆ ಸಾಧ್ಯ ಸಚಿವರೇ? ಪದೇ ಪದೆ ಅಧಿಕಾರಿಗಳನ್ನು ಬದಲಾಯಿಸುವುದು, ಅದರಲ್ಲೂ ಪ್ರಾಮಾಣಿಕ ಹಾಗೂ ಧಕ್ಷರನ್ನು ಆಯ್ಕೆ ಮಾಡಿಕೊಳ್ಳಲು ಆಗದಿರುವುದು ನಿಮ್ಮ ವೈ-ಲ್ಯವೇ ಅಲ್ಲವೇ? ಒಂದು ಅಧಿಕಾರಿಯನ್ನು ಆ ಹುದ್ದೆಯಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಇರಲು ಬಿಡುತ್ತಿಲ್ಲ. ಇದೂ ಪ್ರಾಮಾಣಿಕತೆಯ ಲಕ್ಷಣವೇ?ಇಷ್ಟು ಪ್ರಾಮಾಣಿಕತೆ ಬಗ್ಗೆ ಮಾತನಾಡುವ ಸಚಿವರು ಸಂಬಂಧವೇ ಇಲ್ಲದೆ ಪಿಯು ನಿರ್ದೇಶನಾಲಯದ 43 ಅಧಿಕಾರಿಗಳನ್ನು ಅಮಾನತು ಮಾಡಿದ್ದು ಯಾವ ನ್ಯಾಯ? ಉದಾಹರಣೆಗೆ, ಮಾನ್ಯ ಸಿದ್ದರಾಮಯ್ಯನವರ ಮೇಲೆ ಏನಾದರೂ ಆರೋಪ ಬಂದರೆ ನಿಮ್ಮ ಅಧಿಕಾರವನ್ನು ಕಿತ್ತುಕೊಂಡರೆ ಹೇಗಾಗುತ್ತದೆಯೋ ಹಾಗೇ ಆಗಿದೆ ಈಗ. ಅಮಾನತಾದವರಲ್ಲಿ ಒಬ್ಬರು ಅವತ್ತೇ ನಿವೃತ್ತರಾಗುವವರಿದ್ದರು. ಇನ್ನು ಕೆಲವರು ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತ ಬಂದವರು. ಕೆಲವರು ಅಂಕಪಟ್ಟಿ ವಿಭಾಗದವರು.

ಪ್ರಶ್ನೆ ಪತ್ರಿಕೆಯ ಎಲ್ಲ ಪ್ರಕ್ರಿಯೆಗಳೂ ನಿರ್ದೇಶಕರ ಕಚೇರಿಯ ಜವಾಬ್ದಾರಿ. ನಿರ್ದೇಶಕರ ನೇರ ಉಸ್ತುವಾರಿಯಲ್ಲಿ ಎಲ್ಲವೂ ನಡೆಯುತ್ತವೆ. ಹೀಗಿರುವಾಗ ಪಲ್ಲವಿ ಆಕುರತಿ ಅವರನ್ನು ಅಮಾನತು ಮಾಡದೇ ಉಳಿದವರನ್ನು ಅಮಾನತು ಮಾಡಿರುವುದು ನಿಮ್ಮ ಪ್ರಾಮಾಣಿಕತೆಯೇ? ಇದಕ್ಕೇನಿದೆ ಉತ್ತರ? ನೀವು ಮತ್ತು ಪಲ್ಲವಿ ಆಕುರತಿ ಅವರು ಪಾರಾಗಲು 43 ಜನರನ್ನು ಅಮಾನತು ಮಾಡಿದ್ದೀರಿ.ಆಶ್ಚರ್ಯವೆಂದರೆ ಪಿಯು ನಿರ್ದೇಶನಾಲಯದಲ್ಲಿರುವ ಕೆಲವು ಭ್ರಷ್ಟರು ಅಮಾನತಾಗದೇ ‘ಯಪ್ಪಾ ನಾವ್ ಬಚಾವ್ ಗುರೂ’ ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಸರಿ ತಪ್ಪು ನೋಡದೇ ಸಾರಾಸಗಟಾಗಿ 43 ಮಂದಿಯನ್ನು ಅಮನಾನತು ಮಾಡಿದ್ದೀರಲ್ಲ, ಯಾವ ಆಧಾರದ ಮೇಲೆ ಮಾಡಿದ್ರಿ? ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆ ಇಂದು ನಿನ್ನೆಯದಲ್ಲ. ಹಲವಾರು ವರ್ಷಗಳ ಇತಿಹಾಸವೇ ಇದೆ. ಈ ವರ್ಷ ರಸಾಯನ ಶಾಸ ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ಮರುಪರೀಕ್ಷೆ ನಡೆಸಲಾಗುತ್ತಿದೆ. ಈಗ ಬಹುತೇಕ ಎಲ್ಲ ಪ್ರಶ್ನೆಪತ್ರಿಕೆಗಳೂ ಸೋರಿಕೆಯಾಗಿದ್ದವು ಎಂಬ ಮಾಹಿತಿ ಹೊರಬಿದ್ದಿದೆ.

ಒಂದು ವರ್ಷವಂತೂ ಐದು ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿ ಮರುಪರೀಕ್ಷೆ ನಡೆಸಲಾಗಿತ್ತು. ಆಂಗತೂ ಬುದ್ಧಿ ಕಲಿಯಲಿಲ್ಲ. ಈಗಲೂ ಬುದ್ಧಿ ಕಲಿಯುವ ಲಕ್ಷಗಳು ಗೋಚರಿಸುತ್ತಿಲ್ಲ.ಯಾಕೆಂದರೆ ಮುಂದೆ ಪಿಯು ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗದಿರಲು ಏನು ಮಾಡಬೇಕು ಎಂಬ ಬಗ್ಗೆ ಯಾರೂ ಯೋಚನೆ ಮಾಡುತ್ತಿಲ್ಲ. ನಮ್ಮದು ಹೆಸರಿಗೆ ಸಿಲಿಕಾನ್ ಸಿಟಿ. ಐಟಿ ನಗರಿ. ಆದರೆ ಪಿಯು ಪ್ರಶ್ನೆಪತ್ರಿಕೆ ಮಾತ್ರ ಇನ್ನೂ ಹಳೆಯ ಪದ್ಧತಿಯಲ್ಲೇ ಇದೆ. ಇಂದಿನ ತಂತ್ರಜ್ಞಾನವನ್ನು ಪಿಯು ಪ್ರಶ್ನೆ ಪತ್ರಿಕೆ ತಯಾರಿಗೆ ಅಳವಡಿಸಿದರೆ ಸೋರಿಕೆಗೆ ಅವಕಾಶವೇ ಇಲ್ಲ. ಅದನ್ನು ಅಳವಡಿಸಲು ಮನಸ್ಸು ಬೇಕಷ್ಟೆ.ಈಗಾಗಲೇ ಗೋ ಮಧುಸೂದನ್ ಹಾಗೂ ಶಾಸಕ ಪಿ. ರಾಜೀವ್ ಅವರು ಕೆಲವು ಸಲಹೆಗಳನ್ನು ನೀಡಿದ್ದಾರೆ. ಆದರೆ ಗೋ. ಮಧುಸೂದನ್ ಅವರ ಹೇಳಿದಂತೆ ಒಂದೆರಡು ತಾಸಿನ ಮೊದಲು ಇ-ಮೇಲ್ ಮಾಡಿದರೆ, ಅದರಲ್ಲಿ ಸುರಕ್ಷೆಗೆ ಅವಕಾಶ ಕಡಿಮೆ. ಇಮೇಲ್ ಮತ್ಯಾರಿಗಾದರೂ -ರ್ವರ್ಡ್ ಆದರೆ ಅದನ್ನು ಹುಡುಕುತ್ತ ಹೋಗಬೇಕು. ಹ್ಯಾಕ್ ಆಗಿದೆ ಎಂದು ಹೇಳಲೂ ಅವಕಾಶವಿರುತ್ತದೆ.ಅದರ ಬದಲು ಪಿಯು ನಿರ್ದೇಶನಲಾಯವೇ ಒಂದು ಸರ್ವರ್ ಸ್ಥಾಪಿಸಬೇಕು. ಆ ಸರ್ವರ್‌ಗೆ ಇಷ್ಟೂ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಫೀಡ್ ಮಾಡಿ, ಅವುಗಳನ್ನು ಸುಲಭ ಪ್ರಶ್ನೆಗಳು, ಕಠಿಣ ಮತ್ತು ಅತಿ ಕಠಿಣ ಪ್ರಶ್ನೆಗಳು ಎಂದು ವಿಭಾಗಿಸಬೇಕು. ಈ ಎಲ್ಲ ಪ್ರಶ್ನೆಗಳ ಬ್ಯಾಂಕ್ ಇರಿಸಿಕೊಂಡು ಕಂಪ್ಯೂಟರ್ ಒಂದು ಪ್ರಶ್ನೆ ಪತ್ರಿಕೆ ತಯಾರಿಸುವಂತಹ ಸಾ-ವೇರ್ ತಯಾರಿಸಬೇಕು. ಈ ಸಾ-ವೇರ್ ಸುಲಭ, ಕಠಿಣ ಹಾಗೂ ಅತಿ ಕಠಿಣ ಪ್ರಶ್ನೆಗಳ ಮಿಶ್ರಣ ಹೊಂದಿದ ಪ್ರಶ್ನೆ ಪತ್ರಿಕೆ ತಯಾರಿಸುವಂತಾಗಬೇಕು.ಆಗ ಯಾರಿಗೂ ಯಾವ ರೀತಿಯ ಪ್ರಶ್ನೆಗಳು ಬರುತ್ತವೆ, ಯಾರು ತಯಾರಿಸುತ್ತಾರೆ ಯಾವುದೂ ಗೊತ್ತಿರುವುದಿಲ್ಲ. ಪರೀಕ್ಷೆ ದಿನ ಬೆಳಗ್ಗೆ ಪರೀಕ್ಷಾ ಸಮಯಕ್ಕಿಂತ ಎರಡು ತಾಸು ಮೊದಲು ಕಂಪ್ಯೂಟರ್ ಪ್ರಶ್ನೆ ಪತ್ರಿಕೆ ತಯಾರಿಸಬೇಕು.

ಪ್ರತಿ ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಗೆ ಒಂದು ಲಾಗಿನ್ ಐಡಿ ಹಾಗೂ ಪಾಸ್‌ವರ್ಡ್ ಕೊಡಬೇಕು. ಪಾಸವರ್ಡ್ ಹಾಕಿ ಲಾಗಿನ್ ಆಗುವಾಗ ಅದಕ್ಕೆ ಮೊಬೈಲ್ ಆಧಾರಿತ ಒಟಿಪಿ (ಒನ್ ಟೈಂ ಪಾಸ್‌ವರ್ಡ್) ಹಾಕುವ ವ್ಯವಸ್ಥೆಯೂ ಇರಬೇಕು. ಆಗ ಯಾರೂ ತಾನು ಲಾಗಿನ್ ಆಗಿಲ್ಲ, ನನ್ನ ಯೂಸರ್ ಐಡಿ ಪಾಸವರ್ಡನ್ನು ಇನ್ಯಾರೋ ಬಳಸಿದ್ದಾರೆ ಎನ್ನುವಂತೆಯೂ ಇಲ್ಲ. ಅವರು ಪ್ರಶ್ನೆಪತ್ರಿಕೆ ಲೋಡ್ ಮಾಡಿ, ಅಗತ್ಯವಿರುವಷ್ಟು ಪ್ರಿಂಟ್ ತೆಗೆದುಕೊಂಡರಾಯಿತು.ಪ್ರಶ್ನೆ ಪತ್ರಿಕೆಯೇ ಕೇವಲ ಎರಡು ತಾಸು ಮೊದಲು ಸಿದ್ಧಗೊಳ್ಳುವುದರಿಂದ ಸೋರಿಕೆಯ ಪ್ರಶ್ನೆಯೇ ಇಲ್ಲ. ಅಕಸ್ಮಾತ್ ಸೋರಿಕೆಯಾದರೂ ಕೇವಲ ಒಂದೂವರೆ ತಾಸು ಅವಧಿ ಮಾತ್ರ ಇರುತ್ತದೆ ಮತ್ತು ಸೋರಿಕೆ ಮಾಡಿದವರನ್ನು ಕ್ಷಣಾರ್ಧದಲ್ಲಿ ಕಂಡುಹಿಡಿಬಹುದು.

ಯಾರು, ಎಲ್ಲಿ, ಯಾವಾಗ ಲಾಗಿನ್ ಆಗಿದ್ದಾರೆಂಬುದು ಥಟ್ಟನೆ ಗೊತ್ತಾಗುತ್ತದೆ. ಹಾಗಾಗಿ ಯಾರೂ ಸೋರಿಕೆ ಮಾಡುವ ಗೋಜಿಗೆ ಹೋಗುವುದಿಲ್ಲ.ಈ ಪ್ರಸ್ತಾವನೆ ಮುಂದಿಟ್ಟರೆ ನಮ್ಮ ಅಧಿಕಾರಿಗಳು, ರಾಜಕಾರಣಿಗಳಲ್ಲಿ ಕೆಲವರು ಇಂಟರ್‌ನೆಟ್ ಇರುವುದಿಲ್ಲ. ವಿದ್ಯುತ್ ಇರುವುದಿಲ್ಲ. ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಇನ್ನು ಒಟಿಪಿ ಎಲ್ಲಿಂದ ಅಂತೆಲ್ಲ ನೆಪ ಹೇಳಬಹುದು. ಅದಕ್ಕೂ ಉತ್ತರವಿದೆ. ರಾಜ್ಯದಲ್ಲಿ 1032 ಪಿಯು ಪರೀಕ್ಷೆ ಕೇಂದ್ರಗಳವೆ. ಇದರಲ್ಲಿ ಒಂದು ಕೇಂದ್ರ ಕೂಡ ಭಾರೀ ಭಯಂಕರ ಗ್ರಾಮೀಣ ಕ್ಷೇತ್ರದಲ್ಲಿಲ್ಲ. ಆದ್ದರಿಂದ ಮೊಬೈಲ್ ನೆಟ್‌ವರ್ಕ್, ಇಂಟರ್‌ನೆಟ್ ಸಮಸೆ ಖಂಡಿತ ಆಗುವುದಿಲ್ಲ. ಅದೆಲ್ಲ ಅಧಿಕಾರಿಗಳು ಹೊಸದೊಂದು ವ್ಯವಸ್ಥೆ ತರಲು ಮನಸಿಲ್ಲದೆ ಹೇಳುವ ನೆಪ.ಈಗಿರುವ ಪದ್ಧತಿಯಲ್ಲಿ ಹೊರ ರಾಜ್ಯದ ಮುದ್ರಣಾಲಯದಲ್ಲಿ ಪ್ರಶ್ನೆ ಪತ್ರಿಕೆ ಮುದ್ರಿಸಿ, ಅದನ್ನು ಎಲ್ಲ ಕಡೆ ಸಾಗಿಸುವುದಕ್ಕೆ ಬೇಕಾಗುವಷ್ಟು ವೆಚ್ಚದಲ್ಲಿ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಕಂಪ್ಯೂಟರ್, ಪ್ರಿಂಟರ್ ಹಾಗೂ ವಿದ್ಯುತ್ ಕೈಕೊಟ್ಟರೂ ತೊಂದರೆಯಾಗದಂತೆ ಯುಪಿಎಸ್ ನೀಡಬಹುದು. ಇಷ್ಟು ಮಾಡುವುದರಿಂದ ಪ್ರಶ್ನೆಪತ್ರಿಕೆ ಸೋರಿಕೆ, ಅದನ್ನು ತಯಾರಿಸುವ ದೊಡ್ಡ ಪ್ರಕ್ರಿಯೆ, ಅದನ್ನು ಮುದ್ರಿಸುವುದು ಪ್ರತಿಯೊಂದು ಪ್ರಕ್ರಿಯೆಯೂ ಇಲ್ಲವಾಗುತ್ತದೆ.ಉತ್ತಮ ಸರ್ವರ್‌ಗಳನ್ನು ಹಾಕುವುದೊಂದೇ ಖರ್ಚಿನ ಕೆಲಸ. ಆದರೆ ಅದರಿಂದಾಗುವ ಉಪಯೋಗಗಳ ಮುಂದೆ ಈ ವೆಚ್ಚ ಏನೇನೂ ಅಲ್ಲ. ಇನ್ನು ಸರ್ವರ್ ಫೇಲ್ ಆದರೆ? ಫೇಲ್ ಆಗದ ಅಥವಾ ಫೇಲ್ ಆದರೂ ಕೆಲವೇ ಕ್ಷಣದಲ್ಲಿ ಬದಲಿ ವ್ಯವಸ್ಥೆ ಜಾರಿಯಾಗುವ ತಂತ್ರಜ್ಞಾನಗಳು ಬಂದಿವೆ. ಜಾರಿ ಮಾಡುವ ಆಸಕ್ತಿ ಇರಬೇಕಷ್ಟೇ.ಅದಕ್ಕೆ ಹೇಳೋದು ಕೇವಲ ಪ್ರಾಮಾಣಿಕತೆ ಇದ್ದರೆ ಸಾಲದು, ದೂರದೃಷ್ಟಿಯೂ ಬೇಕು. ಜತೆಗೆ ಇಚ್ಛಾಶಕ್ತಿಯೂ ಇದ್ದರೆ ಮುಂದೆಂದೂ ಪ್ರಶ್ನೆಪತ್ರಿಕೆ ಸೋರಿಕೆಯಾಗದಂತೆ ಮಾಡಬಹುದು. ಈ ಅರ್ಹತೆ ಇದೆಯೋ ಇಲ್ಲವೋ ಸಚಿವರೇ ‘ಪ್ರಾಮಾಣಿಕ’ವಾಗಿ ಅವಲೋಕಿಸಿಕೊಳ್ಳಲಿ.

Write A Comment