ಮನೋರಂಜನೆ

ಎದೆಯಾಳದಿಂದ ಹಾಡಾಗಿ ಬರುವ ನೂರೊಂದು ನೆನಪುಗಳು

Pinterest LinkedIn Tumblr

Vishnuvardhanಆಶ್ಚರ್ಯ ಎಂದರೆ ವಿಷ್ಣು ಅಭಿನಯಿಸಿದ ಹಾಡುಗಳಲ್ಲಿ ಅನೇಕವು ಎಷ್ಟು ಚೆನ್ನಾಗಿ ನಮ್ಮ ಜೀವನಕ್ಕೆ ಹೊಂದಿಕೊಳ್ಳುತ್ತವೆ ಎನ್ನುವುದು. ನೋವು ನಲಿವಿರಬಹುದು, ಸುಖ ದುಃಖವಿರಬಹುದು, ಪ್ರೀತಿ- ಸ್ನೇಹವಿರಬಹುದು, ವಿರಸವಿರಬಹುದು, ಒಟ್ಟಿನಲ್ಲಿ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಗಳಿಗೂ, ಆ ಸಮಯದಲ್ಲಿ ನಮ್ಮ ನಮ್ಮ ಭಾವಕ್ಕೆ ಭಕುತಿಗೆ ಸರಿಹೊಂದುವಂತಹ ಹಾಡಿದೆಯೆನ್ನುವುದು ನನಗೆ ಎಂದೆಂದಿನಿಂದಲೂ ಅಚ್ಚರಿಯ ವಿಷಯ. ಅಂತಹ ಸಮಯದಲ್ಲಿ ಆ ಹಾಡನ್ನು ಕೇಳಿದರೆ ಮನಸ್ಸು ನಿರಾಳವಾಗುವುದು. ಈ ಹಾಡುಗಳಲ್ಲಿ ಕೆಲವಂತೂ ಬ್ರ್ಯಾಂಡೆಡ್ ಅಗಿಬಿಟ್ಟಿವೆ.

ಪ್ರೀತಿಯಲ್ಲಿ ಬಿದ್ದವರು ನೋವುಂಡಾಗ ಬಂಧನ ಚಿತ್ರದ ‘ನೂರೊಂದು ನೆನಪು ಎದೆಯಾಳದಿಂದ’ ಹಾಡು, ಯಾರ ಸಹವಾಸವೂ ಬೇಡವೆಂದು ತಮ್ಮ ಪಾಡಿಗೆ ತಾವು ಆರಾಮಾಗಿರುವವರಿಗೆ ಸುಪ್ರಭಾತ ಚಿತ್ರದಿಂದ ‘ನನ್ನ ಹಾಡು ನನ್ನದು’, ತಮಗೊದಗಿದ ಸಂಕಷ್ಟದ ಪರಿಸ್ಥಿತಿಗೆ ಮರುಕ ಪಡುವವರನ್ನು ಸಮಾಧಾನಪಡಿಸಲು ‘ತುತ್ತು ಅನ್ನ ತಿನ್ನೋಕೆ’, ಕನ್ನಡ ಸಭೆ ಸಮಾರಂಭಗಳಲ್ಲಿ ‘ಕನ್ನಡವೇ ನಮ್ಮಮ್ಮ’ ತಮ್ಮ ಪುಟ್ಟ ಮಕ್ಕಳನ್ನು ಮಿಸ್ ಮಾಡಿಕೊಂಡಾಗ ಲಾಲಿ ಚಿತ್ರದ ‘ಚಂದನ ಕಂಪ ಲಾಲಿ’, ಇನ್ನು ಶಾಲಾ ಕಾಲೇಜುಗಳ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ‘ಕನ್ನಡ ನಾಡಿನ ಜೀವನದಿ’ ಹಾಡು ಅದೆಷ್ಟು ಬಾರಿ ಕೇಳಲ್ಪಟ್ಟಿದೆಯೋ, ಹೇಳುತ್ತಾ ಹೋದರೆ ಈ ಪಟ್ಟಿಗೆ ಕೊನೆಯೇ ಇಲ್ಲವೇನೋ. ಈ ಪಟ್ಟಿ ಎಂದೂ ಮುಗಿಯದಿರುವುದು ಒಂದು ವಿಚಾರವಾದರೆ, ಇಲ್ಲಿ ನಾನು ನೀಡಿದ ಸಂದರ್ಭಕ್ಕೆ ಹೊಂದುವ ಹಾಡಿಗಿಂತ ಅದೇ ಸಂದರ್ಭಕ್ಕೆ ತಕ್ಕಂತೆ ನಿಮಗೆ ಇನ್ಯಾವುದೋ ಹಾಡು ಅತ್ಯಂತ ಸೂಕ್ತ ಅಂತ ಅನ್ನಿಸಬಹುದು. ಅದಕ್ಕೇ ಹೇಳಿದ್ದು ಅವರವರ ಭಾವಕ್ಕೆ ಅವರವರ ಭಕುತಿಗೆ ಹೊಂದುವಂತಹ ಹಾಡುಗಳಿವೆ ಎಂದು. ಇವುಗಳಲ್ಲಿ ಒಂದಕ್ಕಿಂತ ಒಂದು ಮಧುರವಾದ ಹಾಡುಗಳು. ಎಲ್ಲವಕ್ಕೂ ಇರುವ ಒಂದು ಸಮಾನ ಗುಣವೆಂದರೆ ಎಲ್ಲವಕ್ಕೂ ಅದರದ್ದೇ ಆದ ಶ್ರೇಷ್ಠತೆ ಇದೆ, ಘನತೆ ಇದೆ. ಈ ಘನತೆಯನ್ನು ಒದಗಿಸಿದವರು ಬೇರಾರೂಅಲ್ಲ ಅಭಿಮಾನಿಗಳಾದ ನೀವುಗಳೇ.

ನೀವುಗಳು ಇಷ್ಟಪಟ್ಟಿದ್ದಕ್ಕೇ ಅವು ಚಿರಸ್ಥಾಯಿಯಾಗಿ ಉಳಿದುಕೊಂಡಿ ರುವುದು ಅನ್ನೋದು ನನ್ನ ಅಭಿಪ್ರಾಯ. ಅವರನ್ನು ಬೆಳೆಸಿದವರು ನೀವೇ. ಅದಕ್ಕೇ ಅವರು ಕೊನೆಯವರೆಗೂ ನಿಮ್ಮನ್ನು ತಮ್ಮ ಹೃದಯಲ್ಲಿಟ್ಟುಕೊಂಡರು. ಅಷ್ಟೊಂದು ಪ್ರೀತಿ ಕೊಟ್ಟಿರಿ ನೀವು ಅವರಿಗೆ. ಅಭಿಮಾನಿಗಳಿಗೆ ಕನ್ನಡದ ಸಂಕೇತ ಅವರಾದರು. ತೆರೆಯ ಮೇಲೇ ಇರಲಿ, ನಿಜ ಬದುಕಿನಲ್ಲೇ ಇರಲಿ ವಿಷ್ಣು ಆಡಿದ ಮಾತಿಗೆ ಬೆಲೆ ಇರುತ್ತಿತ್ತು. ಅವರು ಹೇಳಿದ್ದು ಅಂತಲೇ ಅವರಾಡಿದ ಮಾತನ್ನು ಹಚ್ಚೆ ಹಾಕಿಸಿಕೊಂಡು ತಮ್ಮ ಜೀವನದಲ್ಲೂ ಅದನ್ನು ಪರಿಪಾಲಿಸುವವರಿದ್ದಾರೆ. ಹಾಗಾಗಿಯೇ ಅವರು ಮಾತಾಡುವಾಗಲೆಲ್ಲ ಅಚಾತುರ್ಯವಾಗದಂತೆ ಬಹಳ ಎಚ್ಚರ ವಹಿಸುತ್ತಿದ್ದರು. ಅವರು ಚಿತ್ರಗಳಲ್ಲಿ ನಟಿಸುವಾಗಲೂ ಅಷ್ಟೆ, ಪಾತ್ರದ ಕುರಿತು ಕೂಲಂಕಷವಾಗಿ ತಿಳಿದುಕೊ ಳ್ಳುತ್ತಿದ್ದರು. ಸಮಾಜಕ್ಕೆ ತಮ್ಮ ಪಾತ್ರದಿಂದಾಗಲಿ, ಸಿನಿಮಾದಿಂದಾಗಲಿ ತಪ್ಪು ಸಂದೇಶ ಹೋಗಬಾರದು ಅನ್ನೋ ಕಾಳಜಿ ಅವರಿಗಿತ್ತು. ಅವರು ಯಾವತ್ತೂ ಹೇಳುತ್ತಿದ್ದರು ತಮ್ಮ ಜೀವನದಲ್ಲಿ ತಾವು ಸಂಪಾದಿಸಿದ ಅಮೂಲ್ಯ ಆಸ್ತಿಯೆಂದರೆ ಅಭಿಮಾನಿಗಳು ಅಂತ. ಎಷ್ಟು ಸತ್ಯವಾದ ಮಾತಲ್ಲವೆ.

ನಾವು ದುಡ್ಡಿಗೆ ಕೊಡುವ ಮಹತ್ವವನ್ನು ಸಂಬಂಧಗಳಿಗೆ ನೀಡಿದರೆ ಬದುಕು ಎಷ್ಟು ಸುಂದರವಾಗುತ್ತದಲ್ಲವೆ? ಎಲ್ಲೋ ಓದಿದ ನೆನಪು, ನಾವಿಂದು ಗೋಡೆಗಳನ್ನು ಹೆಚ್ಚು ಹೆಚ್ಚು ಕಟ್ಟುತ್ತಿದ್ದೇವೆ, ಇದೇ ಕಾರಣಕ್ಕೆ ನಾವಿಂದು ಸಂಘಜೀವಿಯಾಗಿ ಉಳಿದಿಲ್ಲ, ಸಣ್ಣ ಸಣ್ಣ ಗುಂಪುಗಳನ್ನು ಮಾಡಿಕೊಂಡು ಆ ಪುಟ್ಟ ವರ್ತುಲದೊಳಗೆ ಬದುಕು ಸಾಗಿಸುತ್ತಿದ್ದೇವೆ. ಇಂದು ನಮ್ಮ ಸುತ್ತ ನಾವೇ ಕಟ್ಟಿಕೊಂಡ ಗೋಡೆಗಳನ್ನು ಒಡೆದುಹಾಕಬೇಕಾಗಿದೆ. ಗೋಡೆಗಳ ಬದಲಿಗೆ ಸೇತುವೆಗಳನ್ನು ಕಟ್ಟುವ ಕೆಲಸ ಆಗಬೇಕಿದೆ. ಅದನ್ನೇ ವಿಷ್ಣು ಮುಂಚಿನಿಂದಲೂ ಹೇಳುತ್ತಾ ಬಂದರು. ಅಭಿಮಾನಿಗಳಿಗೆಲ್ಲ ಅವರು ಸಾಹಸ ಸಿಂಹ ವಿಷ್ಣುವರ್ಧನ್, ಆದರೆ ನನಗೆ ಅವರು ವಿಷ್ಣು. ನನ್ನ ಪ್ರೀತಿಯ ವಿಷ್ಣು. ನಿಮಗೆ ಅವರ ಸಿನಿಮಾ ಬದುಕು ಮಾತ್ರ ಪರಿಚಯವಿದ್ದೀತು, ಅಂದರೆ ಮನೆಯಲ್ಲಿ ಅವರು ಹೇಗಿರುತ್ತಿದ್ದರು ಎನ್ನುವುದರ ಬಗ್ಗೆ ಗೊತ್ತಿರಲಿಕ್ಕಿಲ್ಲ. ಮನೆಯಲ್ಲಿ ಅವರೊಬ್ಬ ಆದರ್ಶ ಪತಿ, ಮಗಳಿಗೆ ಆದರ್ಶ ತಂದೆ, ಅಳಿಯನಿಗೆ ಮಾವ, ಮೊಮ್ಮಕ್ಕಳಿಗೆ ತಾತ. ವ್ಯಕ್ತಿಯಾಗಿ ಅವರ ಕುರಿತು ಹೇಳಲು ನನ್ನಲ್ಲಿ ಪದಗಳಿಲ್ಲ. ಏಕೆಂದರೆ ನೀವು ನಂಬಲಿಕ್ಕಿಲ್ಲ ಮನೆಯಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಂತಿರುತ್ತಿದ್ದರು. ಅಭಿಮಾನಿಗಳು ಅವರನ್ನು ಸಾಹಸ ಸಿಂಹ ಎಂಬ ಬಿರುದು ಕೊಟ್ಟು ಸಂಭ್ರಮಿಸಿದರು. ಅದೇನೋ ಸರಿ, ಆದರೆ ಅಚ್ಚರಿಯೆಂದರೆ ಅವರೆಷ್ಟು ದೃಢ ಸ್ವಭಾವದವರೋ ಅಷ್ಟೇ ಇತರರ ಕಷ್ಟಗಳಿಗೆ ಮಿಡಿಯುತ್ತಿದ್ದರು. ಯಾರಾದರೂ ಸಹಾಯ ಕೇಳಿ ಬಂದಾಗ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದರು. ಹೇಳಬೇಕೆಂದರೆ ಅವರದು ನಿಜಕ್ಕೂ ಹೆಂಗರುಳು. ನಿಮಗೆ ಇನ್ನೊಂದು ಅಚ್ಚರಿಯ ವಿಷಯ ಹೇಳಬೇಕು. ಅವರದು ಹೆಂಗರುಳು ಎಂದೆನಲ್ಲ, ಶಾಲೆಯಲ್ಲಿ ಓದುತ್ತಿದ್ದಾಗ ಇಂಗ್ಲಿಷ್ ನಾಟಕಗಳಲ್ಲಿ ಹೆಣ್ಣಿನ ಪಾತ್ರವನ್ನು ಅವರಿಗೇ ವಹಿಸಲಾಗುತ್ತಿತ್ತು. ಏನು ಕಾಕತಾಳೀಯ ನೋಡಿ! ನೋಡಲು ಮುದ್ದು ಮುದ್ದಾಗಿದ್ದ ವಿಷ್ಣು, ಹೆಣ್ಣಿನ ಪಾತ್ರಕ್ಕೆ ಸರಿಯಾಗಿ ಹೊಂದುತ್ತಾನೆಂದು ಶಿಕ್ಷಕರಿಗೆ ಅನ್ನಿಸಿದ್ದರಿಂದ ಹೆಣ್ಣಿನ ಪಾತ್ರ ಅವರಿಗೇ ಕೊಡುತ್ತಿದ್ದರಂತೆ.

ಶಿಕ್ಷಕರ ಎಣಿಕೆಯಂತೆಯೇ ಹೆಣ್ಣುಡುಗೆ ತೊಟ್ಟ ವಿಷ್ಣು ನಾಟಕಗಳಲ್ಲಿ ಚೆನ್ನಾಗಿಯೇ ಅಭಿನಯಿಸುತ್ತಿದ್ದರಂತೆ. ಮನೆಯ ಹೊರಗಡೆ ಅವರಿಗೆ ಸಿಗುತ್ತಿದ್ದ ಗೌರವ, ಕೀರ್ತಿ ಎಷ್ಟೇ ಇರುತ್ತಿದ್ದರೂ ಅವೆಲ್ಲ ಹೆಗ್ಗಳಿಕೆಗಳನ್ನು ಮನೆಯೊಳಗೆ ತರುತ್ತಿರಲಿಲ್ಲ, ಅವನ್ನು ಹೊರಗಡೆ ಬಿಟ್ಟು ಬರುತ್ತಿದ್ದರು. ಮನೆಯಲ್ಲಿ ಅವರು ಮಗುವಾಗಿರುತ್ತಿದ್ದರು. ನಾನು ಉತ್ಪ್ರೇಕ್ಷೆ ಮಾಡುತ್ತಿದ್ದೇನೆ ಅಂತನ್ನಿಸಬಹುದು, ಆದರೆ ಅವರಿದ್ದಿದ್ದೇ ಹಾಗೆ. ಮನೆಯವರ ಬಗ್ಗೆ ತುಂಬಾ ಕಾಳಜಿ, ತುಂಬಾ ವಿಚಾರಿಸಿಕೊಳ್ಳುತ್ತಿದ್ದರು. ಒಂದು ವೇಳೆ ಯಾವುದೋ ಒಂದು ಕೆಲಸವನ್ನು ನಾವೇನಾದರೂ ಅವರಿಗೆ ಹೇಳುವುದು ಬೇಡ ಎಂದು ನಾವೇ ಮಾಡಿಕೊಳ್ಳೋಣವೆಂದು ಸುಮ್ಮನಿದ್ದರೆ ಅದು ಹೇಗೋ ತಾವಾಗಿಯೆ ತಿಳಿದುಕೊಂಡು ಅದನ್ನು ಮಾಡಿಬಿಡೋರು. ಅವರೊಂದಿಗೆ ಕಳೆದ ಪ್ರತಿಯೊಂದು ಕ್ಷಣ ಕೂಡ ಬಂಗಾರದ ಕ್ಷಣಗಳು. ಇಂದು ಅವರ ಅನುಪಸ್ಥಿತಿ ಕೇವಲ ಭೌತಿಕವಾದುದು. ಆದರೆ ಆಧ್ಯಾತ್ಮಿಕವಾಗಿ ಅವರು ನಮ್ಮ ಜೊತೆಯೇ ಇದ್ದಾರೆ, ನಮ್ಮ ನಡುವೆಯೇ ಇದ್ದಾರೆ. ನಾವು ಅವರನ್ನು ನೋಡಲು ಸಾಧ್ಯವಾಗುತ್ತಿಲ್ಲ, ಅವರನ್ನು ಮಾತನಾಡಿಸಲು ಸಾಧ್ಯವಾಗುತ್ತಿಲ್ಲ ಅಷ್ಟೆ. ಹೀಗಾಗಿ ಅವರು ನಮ್ಮನ್ನು ಅಗಲಿದ್ದಾರೆ ಎಂದು ನಾನು ತಿಳಿಯುವುದಿಲ್ಲ.

ಆದರೆ, ಕೆಲವು ಬಾರಿ ಅವರು ಬಿಟ್ಟು ಹೋದ ನೂರೊಂದು ನೆನಪುಗಳು ನನ್ನನ್ನು ಮುತ್ತಿಕೊಳ್ಳುತ್ತವೆ. ಆ ಸಮಯದಲ್ಲಿ, ಲಾಲಿ ಚಿತ್ರದಲ್ಲಿ ಅವರು ಮಗುವನ್ನು ಎತ್ತಿ ಆಡಿಸುತ್ತಾ ಜೋಗುಳ ಹಾಡುವ ‘ಚಂದನ ಕಂಪ ಲಾಲಿ’ ಹಾಡಿನ ಸಾಲನ್ನು ಗುನುಗುತ್ತೇನೆ. ಆಗ ಆ ಮಗುವಿನ ಸ್ಥಾನದಲ್ಲಿ ನಾನಿರುತ್ತೇನೆ!

Write A Comment