ಕರ್ನಾಟಕ

ಪಿಯು ಪ್ರಶ್ನೆ ಪತ್ರಿಕೆ ಸೋರಿಕೆಗೆ ಮೈಸೂರಿನ ನಂಟು

Pinterest LinkedIn Tumblr

myಮೈಸೂರು,- ಪಿಯು ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಬಹಿರಂಗದ ಕದಂಬ ಬಾಹುಗಳು ಸಾಂಸ್ಕೃತಿಕ ರಾಜಧಾನಿ ಮೈಸೂರಿಗೂ ಚಾಚಿಕೊಂಡಿದ್ದು, ಮಾಜಿ ಸಚಿವರೊಬ್ಬರತ್ತ ಬೊಟ್ಟು ಮಾಡಿವೆ. ಪ್ರಶ್ನೆ ಪತ್ರಿಕೆ ಹಗರಣವನ್ನು ಕ್ಷಿಪ್ರವಾಗಿ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರಿಗೆ ಮಾಜಿ ಸಚಿವರೊಬ್ಬರ ಆಪ್ತ ಸಹಾಯಕ ಆರೋಪಗಳೊಂದಿಗೆ ಮಾತನಾಡಿರುವ ವೀಡಿಯೋ ದೊರಕಿದೆ ಎಂದು ಹೇಳಲಾಗುತ್ತಿದ್ದು, ಪ್ರಕರಣ ಮತ್ತಷ್ಟು ತಿರುವು ಪಡೆದುಕೊಂಡಿದೆ.

ಕಾಂಗ್ರೆಸ್ ಸರ್ಕಾರದಲ್ಲಿ ಪ್ರಭಾವಿ ಎಂದು ಗುರುತಿಸಿಕೊಂಡಿರುವ ಮಾಜಿ ಸಚಿವರ ಸಕಲ ವ್ಯವಹಾರಗಳನ್ನು ನೋಡಿಕೊಳ್ಳುವ ಆಪ್ತ ಸಹಾಯಕರೊಬ್ಬರು ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಪ್ರಮುಖ ಆರೋಪಿ ಜತೆ ದೂರವಾಣಿಯಲ್ಲಿ ಮಾತನಾಡಿದ್ದು, ಎಚ್ಚರ ತಪ್ಪಿ ಪೊಲೀಸರಿಗೆ ಸಿಕ್ಕಿ ಬಿದ್ದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಹಗರಣದಲ್ಲಿ ನೀವು ಬಂಧನಕ್ಕೊಳಗಾಗಿರುವ ಸುದ್ದಿಯನ್ನು ಕೇಳಿ ಭಾಸ್ ಬೇಜಾರಾಗಿದ್ದಾರೆ. ಮೊದಲೇ ಹುಷಾರಾಗಿರಬೇಕಿತ್ತು. ಈಗ ಆಗಿದ್ದು ಆಗಿ ಹೋಗಿದೆ. ಮುಂದೆ ಎಚ್ಚರಿದಿಂದ ಇರಿ ಎಂದು ಹೇಳಿರುವ ಆಡಿಯೋ ರೆಕಾರ್ಡ್ ಸಿಐಡಿ ಪೊಲೀಸರ ಬಳಿ ಇದೆ ಎನ್ನಲಾಗುತ್ತಿದೆ.

ಇದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದ್ದು, ಪೊಲೀಸರ ತನಿಖೆ ಇನ್ನಷ್ಟು ಚುರುಕುಗೊಂಡಿದೆ.ಶೀಘ್ರವೇ ಸಿಐಡಿ ಅಧಿಕಾರಿಗಳ ತಂಡ ಮೈಸೂರಿಗೆ ತೆರಳಲಿದ್ದು, ಮಾಜಿ ಸಚಿವರ ಆಪ್ತ ಸಹಾಯಕರನ್ನು ವಿಚಾರಣೆಗೆ ಒಳಪಡಿಸಲಿದೆ. ಅಗತ್ಯ ಕಂಡು ಬಂದರೆ ಮಾಜಿ ಸಚಿವರನ್ನೂ ಪ್ರಶ್ನಿಸುವ ಸಾಧ್ಯತೆಗಳಿವೆ ಎಂದು ಸಿಐಡಿ ಉನ್ನತ ಮೂಲಗಳು ತಿಳಿಸಿವೆ. ಪ್ರಶ್ನೆ ಪತ್ರಿಕೆ ಹಗರಣ ರಾಜ್ಯಾದ್ಯಂತ ಸದ್ದು ಮಾಡುತ್ತಿದ್ದು, ಇದರ ಬೇರುಗಳು ಎಲ್ಲಿಂದ ಎಲ್ಲಿಗೆ ಹರಡಿದೆ ಇದನ್ನು ಪತ್ತೆ ಹಚ್ಚುವುದು ದೊಡ್ಡ ಸವಾಲಾಗಿದೆ. ಸಿಐಡಿ ಪೊಲೀಸರು ಈ ಹಗರಣವನ್ನು ಭೇದಿಸಿದಷ್ಟು ಬೇರುಗಳು ಬಿಚ್ಚಿಕೊಳ್ಳುತ್ತಲೇ ಹೋಗುತ್ತಿವೆ.

ಮೈಸೂರಿನ ಪ್ರಭಾವಿ ರಾಜಕಾರಣಿಯನ್ನು ಪ್ರಶ್ನಿಸುವುದು ಸಿಐಡಿ ಪೊಲೀಸರಿಗೆ ಧರ್ಮಸಂಕಟಕ್ಕೆ ಸಿಲುಕಿಸಿದೆ. ಆದರೂ ಪ್ರಕರಣದಲ್ಲಿ ಯಾವುದೇ ಮುಲಾಜಿಲ್ಲದೆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಕಟ್ಟಪ್ಪಣೆ ಮಾಡಿರುವುದರಿಂದ ಸಿಐಡಿ ಪೊಲೀಸರು ಒಂದು ಹೆಜ್ಜೆ ಮುಂದಿಟ್ಟಿದ್ದಾರೆ ಎನ್ನಲಾಗಿದೆ.

Write A Comment