ಕರ್ನಾಟಕ

ಕೆಆರ್‌ಎಸ್‌ನಲ್ಲಿ ಕಾಲುಭಾಗಕ್ಕೆ ಇಳಿದ ನೀರು : ಮಳೆ ಬಾರದಿದ್ದರೆ ತಪ್ಪಿದ್ದಲ್ಲ ಸಂಕಷ್ಟ..

Pinterest LinkedIn Tumblr

krsಬೆಂಗಳೂರು, ಏ.7- ಸತತ ಬರಗಾಲದಿಂದ ರಾಜ್ಯದಲ್ಲಿ ಕುಡಿಯುವ ನೀರಿನ ಅಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಜಧಾನಿ ಬೆಂಗಳೂರಿಗೂ ಇದರ ಬಿಸಿ ತಟ್ಟಲಿದೆ. ತಾಪಮಾನ ಏರಿಕೆಯಿಂದಾಗಿ ಬಿಸಿಲು ನೆತ್ತಿ ಸುಡುತ್ತಿದ್ದರೆ ದಾಹ ತೀರಿಸಿಕೊಳ್ಳಲು ನೀರಿಗೆ ಪರದಾಡಬೇಕಾದ ಪರಿಸ್ಥಿತಿ ಹಲವು ಕಡೆ ಸಾಮಾನ್ಯವಾಗಿದೆ. ಮುಂಗಾರು-ಹಿಂಗಾರಿನಂತೆ ಪೂರ್ವ ಮುಂಗಾರು ಮಳೆಯೂ ಕೂಡ ವಾಡಿಕೆ ಪ್ರಮಾಣದಲ್ಲಿ ಬಿದ್ದಿಲ್ಲ. ಜನವರಿಯಿಂದ ಇಂದಿನವರೆಗೆ ರಾಜ್ಯದಲ್ಲಿ 16 ಮಿಲಿ ಮೀಟರ್‌ನಷ್ಟು ಮಳೆಯಾಗಬೇಕಿತ್ತು. ಆದರೆ, ಆಗಿರುವುದು ಕೇವಲ 10 ಮಿಲಿ ಮೀಟರ್ ಮಾತ್ರ. ಶೇ.39ರಷ್ಟು ಮಳೆ ಕೊರತೆ ಉಂಟಾಗಿದೆ. ಬೆಂಗಳೂರಿನ ಪ್ರಮುಖ ನೀರಿನ ಮೂಲವಾಗಿರುವ ಕಾವೇರಿ ನದಿಯಲ್ಲೂ ಕೂಡ ನೀರಿನ ಕೊರತೆ ಕಾಡತೊಡಗಿದೆ.

ಕೃಷ್ಣರಾಜಸಾಗರ ಜಲಾಶಯದಲ್ಲಿ ಕಾಲುಭಾಗದಷ್ಟು ಮಾತ್ರ ನೀರಿದೆ. ಮಳೆ ಬಾರದಿದ್ದರೆ ಈ ಬಾರಿಯ ಬೇಸಿಗೆಯಲ್ಲಿ ಸಂಕಷ್ಟ ತಪ್ಪಿದ್ದಲ್ಲ. ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ಅಕಾಲಿಕ ಅಥವಾ ಮುಂಗಾರು ಪೂರ್ವ ಮಳೆ ಸಾಕಷ್ಟು ಪ್ರಮಾಣದಲ್ಲಿ ಬಂದಿತ್ತು. ಜಲಾಶಯದಲ್ಲೂ ಕೂಡ ಸಾಕಷ್ಟು ನೀರಿತ್ತು. ಹೀಗಾಗಿ ಕಳೆದ ವರ್ಷ ಕುಡಿಯುವ ನೀರಿನ ಸಮಸ್ಯೆ ಬೆಂಗಳೂರಿಗರಿಗೆ ತಟ್ಟಲಿಲ್ಲ. ಆದರೆ, ಈ ಬಾರಿ ಮಳೆ ಅಭಾವದಿಂದ ಜಲಾಶಯವೂ ಭರ್ತಿಯಾಗಲಿಲ್ಲ. 49.45 ಟಿಎಂಸಿ ಅಡಿ ಸಾಮರ್ಥ್ಯದ ಕೆಆರ್‌ಎಸ್‌ನಲ್ಲಿ ಈಗಿರುವುದು ಕೇವಲ 12 ಟಿಎಂಸಿ ಅಡಿ ಮಾತ್ರ.

ಈಗಿರುವ ನೀರನ್ನು ಮಿತವಾಗಿ ಬಳಸಿದರೆ ಕಾವೇರಿ ಜಲಾನಯನ ಭಾಗದ ನಗರ, ಪಟ್ಟಣ ಹಾಗೂ ಬೆಂಗಳೂರಿಗೆ ಇನ್ನೆರಡು ತಿಂಗಳು ಬಳಸಬಹುದು. ಕಳೆದ ವರ್ಷ ಇದೇ ಅವಧಿಯಲ್ಲಿ 20 ಟಿಎಂಸಿ ಅಡಿ ನೀರು ಜಲಾಶಯದಲ್ಲಿತ್ತು. ಆದರೆ, ಈ ವರ್ಷ ಕಳೆದ ವರ್ಷಕ್ಕಿಂತ 8 ಟಿಎಂಸಿ ಅಡಿ ನೀರು ಕಡಿಮೆ ಇದೆ. ಹಾಗೆಯೇ 96 ಅಡಿಯಷ್ಟು ಕಳೆದ ವರ್ಷ ನೀರು ಸಂಗ್ರಹವಾಗಿತ್ತು. ಈ ವರ್ಷ ಅದು 82 ಅಡಿಗಳಿಗೆ ಇಳಿಕೆಯಾಗಿದೆ. ಹೀಗಾಗಿ ಬೇಸಾಯವಿರಲಿ, ಕುಡಿಯುವ ನೀರಿನ ಸಮಸ್ಯೆ ನೀಗಿದರೆ ಸಾಕು ಎಂಬುದು ಜನರು ಹಾಗೂ ಅಧಿಕಾರಿಗಳ ಅನಿಸಿಕೆಯಾಗಿದೆ.

ಬೆಂಗಳೂರಿನ ಇತರೆ ಜಲಮೂಲಗಳಾಗಿದ್ದ ಹೆಸರಘಟ್ಟ ಜಲಾಶಯದಲ್ಲಿ ನೀರೇ ಇಲ್ಲ. ಇನ್ನು ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಸ್ವಲ್ಪ ನೀರಿದ್ದರೂ ಅದು ಕುಡಿಯಲು ಯೋಗ್ಯವಾಗಿಲ್ಲ. ಕೊಳಚೆ ನೀರು ಬೆರೆತು ಕಲುಷಿತವಾಗಿದೆ. ಕಳೆದ ಎರಡು ವರ್ಷಗಳಿಂದಲೂ ಈ ಜಲಾಶಯದ ನೀರು ಬಳಸುವುದನ್ನು ಬೆಂಗಳೂರು ಜಲಮಂಡಳಿ ನಿಲ್ಲಿಸಿದೆ. ಹೀಗಾಗಿ ಕಾವೇರಿ ನೀರಿನಿಂದಲೇ ಜಲಮಂಡಳಿ ನಿತ್ಯ ಒಂದು ಸಾವಿರಕ್ಕೂ ಹೆಚ್ಚು ಎಂಎಲ್‌ಡಿ ನೀರನ್ನು ನಗರಕ್ಕೆ ಪೂರೈಸಬೇಕಾಗಿದೆ. ವಿದ್ಯುತ್ ಅಭಾವ ತಲೆದೋರಿದರೆ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ. ಈಗಾಗಲೇ ಏಪ್ರಿಲ್ ಮೊದಲ ವಾರ ಕಳೆದರೂ ಕಾವೇರಿ ಜಲಾನಯನ ಭಾಗದಲ್ಲಿ ಉತ್ತಮ ಮಳೆಯಾಗಿಲ್ಲ.

ಮಾರ್ಚ್‌ನಲ್ಲೇ ಮುಂಗಾರು ಪೂರ್ವ ಮಳೆ ಬೀಳುವುದು ವಾಡಿಕೆಯಾಗಿದ್ದರೂ ಈ ಬಾರಿ ವರುಣ ಕೂಡ ಮುನಿಸಿಕೊಂಡಂಡಿರುವಂತಿದೆ. ಬಿಸಿಲು ಕೂಡ ಹಿಂದೆಂದೂ ಕಾಣದಷ್ಟು ಹೆಚ್ಚಾಗಿದ್ದು, 38 ರಿಂದ 40 ಡಿಗ್ರಿ ಸೆಲ್ಷಿಯಸ್‌ವರೆಗೂ ಗರಿಷ್ಠ ತಾಪಮಾನವಿದೆ. ಇದರಿಂದ ಜನ ತತ್ತರಿಸಿ ಹೋಗುತ್ತಿದ್ದಾರೆ. ಮಳೆಗಾಗಿ ಆಕಾಶದತ್ತ ಮುಖ ಮಾಡಿ ಕಾತರದಿಂದ ನೋಡುತ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆಗೆ ಸದ್ಯಕ್ಕಿರುವುದು ಮಳೆಯದ್ದೇ ಪರಿಹಾರ. ಬೇರಾವುದೇ ಪರಿಹಾರವೂ ಸದ್ಯಕ್ಕೆ ಉಪಯೋಗಕ್ಕೆ ಬರುತ್ತಿಲ್ಲ. ಅಂತರ್ಜಲವೂ ಕೂಡ ಪಾತಾಳವನ್ನು ನೋಡುತ್ತಿದೆ. ಹೀಗಾಗಿ ನಗರದ ಜನತೆ ನೀರಿನ ಕೊರತೆಯನ್ನು ಎದುರಿಸಲೇಬೇಕಾದ ಅನಿವಾರ್ಯತೆ ಉಂಟಾಗುತ್ತದೆ.

Write A Comment