ರಾಷ್ಟ್ರೀಯ

ಸೀಮಾಂಧ್ರ, ಮತ್ತು ತೆಲಂಗಾಣದಲ್ಲಿ ಬಿಸಿಲಿನ ರುದ್ರನರ್ತನಕ್ಕೆ 100ಕ್ಕೂ ಹೆಚ್ಚು ಮಂದಿ ಬಲಿ..!

Pinterest LinkedIn Tumblr

bisiluಹೈದರಾಬಾದ್, ಏ.7- ಸೂರ್ಯದೇವನ ರುದ್ರ ತಾಂಡವಕ್ಕೆ ಸಿಕ್ಕಿ ಅವಿಭಜಿತ ಆಂಧ್ರ ಪ್ರದೇಶದಲ್ಲಿ ಒಂದುನೂರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಸೀಮಾಂಧ್ರದಲ್ಲಿ 66 ಜನ ಮೃತಪಟ್ಟರೆ, ತೆಲಂಗಾಣದಲ್ಲಿ 35 ಜನ ಜೀವ ತೆತ್ತಿದ್ದಾರೆ. ಕಳೆದೊಂದು ಶತಮಾನದಲ್ಲಿಯೇ ಇಂತಹ ಭಯಂಕರ ಬಿಸಿಲನ್ನು ಕಂಡೂ ಇಲ್ಲ, ಕೇಳಿಯೂ ಇಲ್ಲ ಎನ್ನುತ್ತದೆ ಹವಾಮಾನ ಇಲಾಖೆ. ಗರಿಷ್ಠ ಮಟ್ಟಕ್ಕೇರಿರುವ ಉಷ್ಣಾಂಶದ ಝಳದಲ್ಲಿ ಜಲ ಪತಂಗಗಳಂತೆ ಸತ್ತು ಬೀಳುತ್ತಿದ್ದಾರೆ.

ಆಂಧ್ರದಲ್ಲಿ ಬಿಸಿಲಿನ ಪ್ರತಾಪ ಎಷ್ಟರ ಮಟ್ಟಿಗೆ ಇದೆಯೆಂದರೆ, ಬಿಸಿಲಿನ ಝಳಕ್ಕೆ ಜನರ ಮೈ ಮೇಲೆ ಬೊಬ್ಬೆಗಳು ಏಳುತ್ತಿವೆ. ಆದ್ದರಿಂದ ಜನ ಮನೆ ಬಿಟ್ಟು ಹೊರಹೋಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸರ್ಕಾರ ಸೂಚನೆ ನೀಡಿದೆ. ಬೊಬ್ಬೆಗಳು ಮೈ ಮೇಲೆ ಕಾಣಿಸಿಕೊಳ್ಳುತ್ತಿದ್ದಂತೆಯೇ ಸಮೀಪದ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯುವಂತೆ ಜನತೆಗೆ ಸಲಹೆ ನೀಡಲಾಗಿದೆ. ವಯಸ್ಸಾದವರು, ಮಕ್ಕಳು, ಗರ್ಭಿಣಿಯರು ಎಚ್ಚರಿಕೆಯಿಂದಿರುವಂತೆ ತಿಳಿಸಲಾಗಿದೆ. ಬಿಸಿ ನೀರು: ರೆಫ್ರಿಜಿರೇಟರ್‌ಗಳನ್ನು ಕೊಳ್ಳಲಾರದ ಬಡವರು ಮಡಕೆಗಳಲ್ಲಿ ನೀರು ಹಾಕಿಟ್ಟುಕೊಳ್ಳುವುದು, ತಣ್ಣನೆಯ ನೀರು ಕುಡಿಯುವುದು ಸಾಮಾನ್ಯ. ಆದರೆ, ಈ ಬಾರಿ ಬಿಸಿಲಿಗೆ ಸೋರೆ, ಮಡಕೆಗಳಲ್ಲಿನ ನೀರೂ ಬಿಸಿಯಾಗಿ ಶ್ರೀಸಾಮಾನ್ಯರಿಗೆ ಕುಡಿಯಲು ತಣ್ಣನೆಯ ನೀರೂ ಸಿಗದಂತಾಗಿದೆ.

ಬಿಸಿಲಿನ ತಾಪದಿಂದ ರಕ್ಷಣೆ ಪಡೆಯಲು, ಅಗತ್ಯ ನೆರವು ಒದಗಿಸುವುದಾಗಿಯೂ ಸರ್ಕಾರ ಜನರಿಗೆ ಅಭಯ ನೀಡಿದೆ. ಪರೀಕ್ಷೆಗಳು ಮುಗಿದು ಶಾಲೆಗಳಿಗೆ ರಜೆ ಇರುವುದರಿಂದ ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸದಂತೆ ಸೂಚಿಸಲಾಗಿದೆ. ಬೆಳಗ್ಗೆ 10-11 ಗಂಟೆಯ ಒಳಗಾಗಿ ಮನೆ ಹೊರಗಿನ ಕೆಲಸಗಳನ್ನು ಮುಗಿಸಿಕೊಂಡು ಮನೆ ಸೇರುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ. ಪುನಃ ಸಂಜೆ 5 ಗಂಟೆ ನಂತರ ಮನೆಯಿಂದ ಹೊರಬರುವಂತೆಯೂ ಸೂಚಿಸಲಾಗಿದೆ.

ಆಂಧ್ರ ಪ್ರದೇಶದಲ್ಲಿ ಸಹಜವಾಗಿಯೇ ಸ್ವಲ್ಪ ಬಿಸಿಲು ಹೆಚ್ಚು. ಪ್ರತಿ ಬೇಸಿಗೆಯಲ್ಲೂ ಬಿಸಿಲಿನ ಝಳ ಅಧಿಕವಾಗಿಯೇ ಇರುತ್ತದೆ. ಆದರೆ, ಈ ಬಾರಿ ಮಾತ್ರ ಎಲ್ಲೆಲ್ಲೂ ಬಿಸಿಲಿನ ರೌದ್ರಾವತಾರವೇ ಮೆರೆದಿದ್ದರೂ, ಆಂಧ್ರದಲ್ಲಿ ಮಾತ್ರ ಅದು ಇಮ್ಮಡಿಯಾಗಿದೆ. ಬಿಸಿಲಿನಿಂದ ರಕ್ಷಣೆ ಪಡೆಯಲು ಹಲವಾರು ತಂತ್ರಗಳನ್ನು ಮಾಡುತ್ತಿದ್ದಾರೆ. ಎಲ್ಲೆಲ್ಲೂ ರಸ್ತೆಗಳು ಜನರಿಲ್ಲದೆ ಬಿಕೋ ಎನ್ನುತ್ತಿವೆ.

Write A Comment