ಕರ್ನಾಟಕ

ಯುಗಾದಿ ಎಫೆಕ್ಟ್ : ಕಸದ ಸಮಸ್ಯೆಯಿಂದ ಮತ್ತೆ ಗಬ್ಬೆದ್ದು ನಾರಲಿದೆ ಬೆಂಗಳೂರು

Pinterest LinkedIn Tumblr

vatಬೆಂಗಳೂರು, ಏ.7-ನಗರದಲ್ಲಿ ಮತ್ತೆ ಕಸದ ಸಮಸ್ಯೆ ತಲೆದೋರುವ ಲಕ್ಷಣಗಳು ಕಂಡು ಬರುತ್ತಿದ್ದು, ಈಗಾಗಲೇ ಎಲ್ಲೆಂದರಲ್ಲಿ ಕಸದ ರಾಶಿ ಕಾಣಿಸುತ್ತಿದೆ. ಯುಗಾದಿ ಹಬ್ಬದ ನಂತರ ಮತ್ತಷ್ಟು ಬಿಗಡಾಯಿಸಲಿದೆ. ಈಗಾಗಲೇ ಮಂಡೂರು ಮತ್ತು ಟೆರ್ರಾಫಾರಂ ಕಸ ವಿಲೇವಾರಿ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ. ಬಾಕಿ ಉಳಿದಿರುವ ಕಸವಿಲಾವಾರಿ ಕೇಂದ್ರಗಳಲ್ಲಿ ಕಸ ಸಂಗ್ರಹಿಸುವ ಸಾಮರ್ಥ್ಯ ಕಡಿಮೆ ಇರುವುದರಿಂದ ಸಮಸ್ಯೆ ಹೆಚ್ಚಾಗಲಿದೆ.

ನಗರದಲ್ಲಿ ಪ್ರತಿ ನಿತ್ಯ ನಾಲ್ಕುವರೆ ಸಾವಿರ ಟನ್ ಕಸ ಸಂಗ್ರಹವಾಗುತ್ತದೆ. ಇಷ್ಟೂ ಕಸವನ್ನು ವಿಲೇವಾರಿ ಕೇಂದ್ರಗಳಿಗೆ ಸಾಗಿಸಲೇಬೇಕು. ಆದರೆ ಈ ಕೇಂದ್ರಗಳ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತೆ ಪ್ರತಿಭಟನೆ ಹಾದಿ ಹಿಡಿದಿದ್ದಾರೆ. ಕನ್ನಹಳ್ಳಿ ಕಸ ವಿಲೇವಾರಿ ಕೇಂದ್ರದ ಸುತ್ತಮುತ್ತಲಿನ ರೈತರು ಕಸ ಹಾಕಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿರುವುದರಿಂದ 144 ಸೆಕ್ಷನ್ ಜಾರಿಗೊಳಿಸಿ ಪೊಲೀಸ್ ಬಂದೋಬಸ್ತ್‌ನಲ್ಲಿ ಕಸ ಹಾಕಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ದೊಡ್ಡಬಿದರಕಲ್ಲಿನಲ್ಲಿನ ಕಸವಿಲೇವಾರಿ ಕೇಂದ್ರ ಅತಿ ಚಿಕ್ಕದು. ಉಳಿದ ಕಸ ವಿಲೇವಾರಿ ಕೇಂದ್ರಗಳಲ್ಲೂ ಜಾಗದ ಅಭಾವ ಎದ್ದು ಕಾಣುತ್ತಿದೆ. ನಾಳೆ ಯುಗಾದಿ ಹಬ್ಬ. ತಳಿರು ತೋರಣ ಬಾಳೆಕಂದಿನದ್ದೇ ಮಹತ್ವದ ಪಾತ್ರ ಇರುತ್ತದೆ. ಎಲ್ಲೆಂದರಲ್ಲಿ ಮಾವು, ಬೇವು, ಬಾಳೆಕಂದು ಮಾರಾಟ ಮಾಡುವ ರೈತರು ಉಳಿದದ್ದನ್ನು ಅಲ್ಲಲ್ಲೇ ಬಿಟ್ಟು ಹೋಗುತ್ತಾರೆ. ಮನೆಗಳವರ ಕೂಡ ತಾವು ಬಳಸಿದ ಈ ತ್ಯಾಜ್ಯವನ್ನು ತಂದು ಹಾಕುತ್ತಾರೆ. ಹಾಗಾಗಿ ರಾಶಿ ರಾಶಿ ಕಸ ರಸ್ತೆಯಲ್ಲಿರುತ್ತದೆ. ಯುಗಾದಿ ಹಬ್ಬದ ನಂತರ ಮಳೆ ಬರುವ ಸಾಧ್ಯತೆ ಇದೆ. ಒಂದು ವೇಳೆ ಮಳೆ ಬಂದರಂತೂ ತ್ಯಾಜ್ಯ ಕೊಳೆತು ರಾಡಿಯಾಗಿ ನಗರದ ರಸ್ತೆಗಳು ಗಬ್ಬೆದ್ದು ನಾರುವುದು ಖಂಡಿತ.

Write A Comment