ಕರ್ನಾಟಕ

ಅಪಮಾನ ಮಾಡಿದ ರಾಜ್ಯಪಾಲರನ್ನು ಕೇಂದ್ರ ಸರ್ಕಾರ ತಕ್ಷಣವೇ ವಾಪಸ್ ಕರೆಸಿಕೊಳ್ಳಬೇಕು : ವೈಎಸ್‌ವಿ ದತ್ತ

Pinterest LinkedIn Tumblr

dattaಬೆಂಗಳೂರು,ಏ.7-ಭ್ರಷ್ಟಾಚಾರ ನಿಗ್ರಹದಳ ರಚನೆ ವಿರುದ್ಧ ಮನವಿ ಪತ್ರ ನೀಡಲು ರಾಜಭವನಕ್ಕೆ ಆಗಮಿಸಿದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಶಾಸಕರಿಗೆ ಅಪಮಾನ ಮಾಡಿರುವ ರಾಜ್ಯಪಾಲರನ್ನು ಕೇಂದ್ರ ಸರ್ಕಾರ ತಕ್ಷಣವೇ ವಾಪಸ್ ಕರೆಸಿಕೊಳ್ಳಬೇಕೆಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ವೈಎಸ್‌ವಿ ದತ್ತ ಆಗ್ರಹಿಸಿದರು. ಬೆಂಗಳೂರು ಮಹಾನಗರ ಜೆಡಿಎಸ್ ಘಟಕ ಶೇಷಾದ್ರಿ ರಸ್ತೆಯಲ್ಲಿರುವ ಗಾಂಧಿ ಪ್ರತಿಮೆ ಬಳಿ ನಡೆಸಿದ ಧರಣಿಯಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿಯನ್ನು ಭೇಟಿ ಮಾಡುವ ಸೌಜನ್ಯ ತೋರಲಿಲ್ಲ. ಇದು ವಾರ್ಡ್‌ನ ಜನತೆಗೆ ಮಾಡಿದ ಅವಮಾನವಾಗಿದೆ. ಪಕ್ಷಾತೀತ ವೇದಿಕೆ ನಿರ್ಮಿಸಿ ದೊಡ್ಡ ಮಟ್ಟದ ಹೋರಾಟ ಮಾಡಬೇಕಾಗಿದೆ. ಇದು ಕೇವಲ ಜೆಡಿಎಸ್‌ಗೆ ಆದ ಅಪಮಾನ ಅಲ್ಲ ಎಂದರು.

ರಾಜ್ಯಪಾಲರ ಸ್ಥಾನಮಾನ, ಘನತೆಯ ಇತಿಮಿತಿ ಅರಿವಿದೆ. ಸಂವಿಧಾನದ ಮುಖ್ಯಸ್ಥರಾದರೂ ಸವಾರಿ ಮಾಡುವಂತಿಲ್ಲ. ಕನ್ನಡಿಗರದ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದಾರೆ. ಇಡೀ ರಾಜ್ಯ ಒಗ್ಗೂಡಿ ರಾಜ್ಯಪಾಲರ ನಡೆ ಖಂಡಿಸಿ ಹೋರಾಟ ಮಾಡಬೇಕಿತ್ತು. ನಾಡಿನ ಜಲನೆಲ ಬಗ್ಗೆ ದನಿ ಎತ್ತುವ ಸಂಘಟನೆಗಳು ಈ ಅಪಾಮನ ಖಂಡಿಸಿ ಹೋರಾಟ ನಡೆಸಬೇಕು ಎಂದರು. ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಮಾತನಾಡಿ, ಇನ್ನೆರಡು ದಿನಗಳಲ್ಲಿ ರಾಜ್ಯಪಾಲರು ತಾವು ನಡೆದುಕೊಂಡ ರೀತಿಗೆ ಕ್ಷಮಾಪಣೆ ಕೇಳಬೇಕು ಇಲ್ಲದಿದ್ದರೆ ಕೇಂದ್ರ ಸರ್ಕಾರ ಇವರನ್ನು ವಾಪಸ್ ಕರೆಸಿಕೊಳ್ಳಬೇಕೆಂದು ಆಗ್ರಹಿಸಿದರು.

ರಾಜ್ಯಪಾಲರು ತೋರಿದ ಅಗೌರವ ಬಗ್ಗೆ ರಾಷ್ಟ್ರಪತಿಗಳಿಗೂ ಶಾಸಕರ ನಿಯೋಗ ಮನವಿ ಸಲ್ಲಿಸಲಿದೆ ಎಂದರು.ರಾಜಭವನಕ್ಕೆ ಪ್ರವೇಶವಿಲ್ಲ ಎಂಬ ಫಲಕ ಹಾಕಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ರಾಜಭವನ ಇರುವುದು ಐಷಾರಾಮಿ ಜೀವನಕ್ಕಲ್ಲ , ಗುಜರಾತಿ ಅಧಿಕಾರಿಗಳನ್ನು ನೇಮಕ ಮಾಡಿಕೊಂಡಿದ್ದಾರೆ. ಗುಜರಾತಿಗಳಿಗೆಮುಕ್ತ ಅವಕಾಶ ನೀಡುತ್ತಾರೆ. ಶಾಸಕರನ್ನು ಬಾಗಿಲಲ್ಲಿ ನಿಲ್ಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ಗೋಪಾಲಯ್ಯ ಮಾತನಾಡಿ, ರಾಜಭವನ ಗುಜರಾತ್ ಭವನ ಆಗಿದೆ. ಗುಜರಾತ್‌ನ ಅಧಿಕಾರಿಗಳನ್ನೇ ನೇಮಿಸಿಕೊಂಡಿದ್ದಾರೆ. ನಾಡಿನ ಜನರ ಕಷ್ಟಸುಖ ವಿಚಾರಿಸಬೇಕು, ರಾಜ್ಯಪಾಲರ ಇಂಥ ವರ್ತಿಸಿ ಸಹಿಸಲಾಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Write A Comment