ಕರ್ನಾಟಕ

ಹೇಮಾವತಿ ನಾಲಾ ಕಾಮಗಾರಿ ಶೀಘ್ರವೇ ಪ್ರಾರಂಭ : ಟಿ.ಬಿ.ಜಯಚಂದ್ರ

Pinterest LinkedIn Tumblr

jayaಚಿಕ್ಕನಾಯಕನಹಳ್ಳಿ, ಏ.7- ತಾಲೂಕಿನ 24 ಕೆರೆಗಳಿಗೆ ನೀರು ಹಾಯಿಸುವ ಬಹು ನಿರೀಕ್ಷಿತ ಹೇಮಾವತಿ ನಾಲಾ ಕಾಮಗಾರಿಗೆ ಭೂಮಿ ಕಳೆದುಕೊಂಡಿರುವ 28 ರೈತರಿಗೆ ಪರಿಹಾರದ ಚೆಕ್ ವಿತರಣೆಯಾಗಿ ಕಾಮಗಾರಿ ಶೀಘ್ರವೇ ಪ್ರಾರಂಭವಾಗುವ ಲಕ್ಷಣ ಕಾಣುತ್ತಿದೆ. ತಾಲೂಕಿನ ಗೋಪಾಲನಹಳ್ಳಿಯಲ್ಲಿ ಕಂದಾಯ ಅದಾಲತ್ ಮಾದರಿಯಲ್ಲಿ ಹೇಮಾವತಿ ನಾಲೆಗೆ ಜಮೀನು ನೀಡಿರುವ 28 ರೈತರಿಗೆ ಮೊದಲ ಹಂತದ ಭಾಗವಾಗಿ 1.75ಕೋಟಿ ರೂ. ಮೊತ್ತದ ಪರಿಹಾರ ಚೆಕ್ ವಿತರಿಸಲಾಯಿತು.

ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ನಮ್ಮ ಸರ್ಕಾರ 73ಕಿಮೀ ಹೇಮಾವತಿ ನಾಲೆಯ ಅಗಲೀಕರಣಕ್ಕಾಗಿ 563 ಕೋಟಿ ಹಣವನ್ನು ಒಂದೇ ಹಂತದಲ್ಲಿ ಬಿಡುಗಡೆ ಮಾಡಿದೆ. ಆರು ತಿಂಗಳ ಗಡುವು ಇಟ್ಟುಕೊಂಡು ಕಾರ್ಯ ಆರಂಭವಾಗಿದ್ದು, ಜೂನ್ ಕೊನೆಯ ವೇಳೆಗೆ ಕಾಮಗಾರಿ ಪೂರ್ಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹೇಮಾವತಿಯಿಂದ ತುಮಕೂರು ಜಿಲ್ಲೆಗೆ 25 ಟಿಎಂಸಿ ನೀರಿನ ಲಭ್ಯವಿದೆ. ಆದರೆ, 18 ರಿಂದ 19 ಟಿಎಂಸಿ ಮಾತ್ರ ಬಳಸಿಕೊಳ್ಳಲು ಸಾಧ್ಯವಾಗುತ್ತಿದೆ. ಹೇಮಾವತಿ ಅಣೆಕಟ್ಟೆಯ ಸಂಗ್ರಹ ಸಾಮರ್ಥ್ಯ 65 ಟಿಎಂಸಿ ಆದರೆ 85 ಟಿಎಂಸಿವರೆಗೂ ನೀರು ಸಂಗ್ರಹವಾಗುತ್ತಿದೆ. ಇದರಲ್ಲಿ ಹಾಸನದ ಪಾಲು 18 ರಿಂದ 19 ಟಿಎಂಸಿಯಾದರೆ 40 ಟಿಎಂಸಿವರೆಗೂ ಹಾಸನ ಜಿಲ್ಲೆ ಬಳಸಿಕೊಳ್ಳುತ್ತಿದೆ. ಹೆಚ್ಚುವರಿ 20 ಟಿಎಂಸಿ ನೀರು ತುಮಕೂರು ಜನರ ಹಕ್ಕು ಎಂದು ಹೇಳಿದರು.

ರಾಜ್ಯ ಸರ್ಕಾರ ರೈತರಿಂದ ಕೊಬ್ಬರಿಯನ್ನು ನಫೆಡ್ ಮೂಲಕ ಖರೀದಿಸುತ್ತಿದ್ದು, 30 ರಿಂದ 40 ಕೋಟಿ ನಷ್ಟವಾದರೂ ರೈತರ ಹಿತ ರಕ್ಷಣೆಗೆ ಮಧ್ಯೆ ಪ್ರವೇಶಿಸುತ್ತಿದೆ ಎಂದರು. ಪರಿಹಾರದ ಹಣ ಸಿಗುವುದೋ, ಇಲ್ಲವೋ ಎಂಬ ಅನುಮಾನ ರೈತರಲ್ಲಿ ಇದೆ.ಯಾವುದೇ ಕಾರಣಕ್ಕೂ ಅನುಮಾನ ಬೇಡ. ಗಡಬನಹಳ್ಳಿಯಿಂದ ಸಾಸಲು ಕೆರೆವರೆಗೆ ನಾಲೆ ನಿರ್ಮಾಣಕ್ಕೆ 150 ಎಕರೆ ಜಮೀನು ಬೇಕು. ಪರಿಹಾರಕ್ಕಾಗಿ 25ಕೋಟಿ ರೂ.ಅಗತ್ಯವಿದೆ. ಈಗ ಹಣ ಹಾಗೂ ಕಾನೂನಿನ ತೊಡಕಿಲ್ಲ. ಜಮೀನು ಬಿಟ್ಟುಕೊಟ್ಟ 15ದಿನಗಳ ಒಳಗಾಗಿ ಪರಿಹಾರ ನಿಮ್ಮ ಕೈ ಸೇರುತ್ತಿದೆ. ಬೇರೆ ಯಾರ ಮಾತನ್ನೂ ಕೇಳಬೇಡಿ, ನನ್ನ ಮೇಲೆ ಭರವಸೆ ಇಡಿ ಎಂದರು.

ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಸರ್ಕಾರದ ಮೇಲೆ ರೈತರ ನಂಬಿಕೆ ಉಳಿಸಿಕೊಳ್ಳಲು ಸಾಂಕೇತಿಕವಾಗಿ ಚೆಕ್ ವಿತರಣೆ ಮಾಡಲಾಗುತ್ತಿದೆ. ಯೋಜನೆಗೆ 700 ರೈತರ ಜಮೀನು ಕಳೆದುಕೊಳ್ಳುತ್ತಿದ್ದಾರೆ. ಕಾನೂನಿನ ತೊಡಕು ದೂರವಾಗಿದ್ದು, ಎಲ್ಲರಿಗೂ ಪರಿಹಾರ ದೊರೆಯುತ್ತದೆ ಎಂದು ಭರವಸೆ ನೀಡಿದರು. ಶಾಸಕ ಸಿ.ಬಿ.ಸುರೇಶ್‌ಬಾಬು ಮಾತನಾಡಿ, ಜಮೀನು ಬಿಟ್ಟು ಕೊಟ್ಟ ಗೋಪಾಲನಹಳ್ಳಿ ಹಾಗೂ ಸಾಸಲು ಗ್ರಾಮಗಳ 48 ರೈತರಿಗೆ ಹಣ ಬಿಡುಗಡೆಯಾಗಿದೆ. 28 ರೈತರಿಗೆ ಪರಿಹಾರದ ಚೆಕ್ ವಿತರಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ, ತಮ್ಮಡಿಹಳ್ಳಿ ಮಠದ ಅಭಿನವ ಮಲ್ಲಿಕಾರ್ಜುನ ದೇಶೀಕೇಂದ್ರ ಸ್ವಾಮೀಜಿ, ಗೋಡೆಕೆರೆ ಮಠದ ಶ್ರೀ ಮೃತ್ಯುಂಜಯ ದೇಶಿಕೇಂದ್ರ ಸ್ವಾಮಿಜಿ, ಮಾಧಿಹಳ್ಳಿ ಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿದರು. ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ಅನಿತಾ, ತಹಸೀಲ್ದಾರ್ ಗಂಗೇಶ್, ಜಿ.ಪಂ,ಸದಸ್ಯ ಕಲ್ಲೇಶ್, ಹೊನ್ನವಳ್ಳಿ ಜಿ.ಪಂ.ಸದಸ್ಯ ನಾರಾಯಣ್, ಮಾಜಿ ಶಾಸಕ ಬಿ.ಲಕ್ಕಪ್ಪ, ಕಾಂಗ್ರೇಸ್ ಮುಖಂಡ ಸಿಮೇಎಣ್ಣೆ ಕೃಷ್ಣಯ್ಯ, ಶೆಟ್ಟಿಕೆರೆ ಗ್ರಾ,ಪಂ,ಅಧ್ಯಕ್ಷೆ ನಾಗಮಣಿ, ತಾ.ಪಂ.ಸದಸ್ಯೆ ಜಯಮ್ಮ ಉಪಸ್ಥಿತರಿದ್ದರು.

Write A Comment