ಮನೋರಂಜನೆ

ಅಮಿತಾಬ್‌ ಬಚ್ಚನ್‌ಗೆ ಹಾಡಬೇಕು: ಎಸ್ಪೀಬಿ ಆಸೆ

Pinterest LinkedIn Tumblr

spವಯಸ್ಸು ಎಪ್ಪತ್ತು ವರ್ಷ, ಚಿತ್ರಸಂಗೀತ ಯಾನಕ್ಕೆ 50 ವರ್ಷ. ಸುಮಾರು 50ಸಾವಿರಕ್ಕೂ ಹೆಚ್ಚು ಹಾಡಿದ ಕೀರ್ತಿ. ದಕ್ಷಿಣ ಭಾರತದ ಎಲ್ಲ ನಾಯಕ ನಟರಿಗೂ ಹಾಡಿದ ಹಿರಿಮೆ. ಎಸ್ಪಿಬಿಗೆ ಇಷ್ಟಾದರೂ ಒಂದೇ ಒಂದು ಕನಸು ಮಾತ್ರ ಈಡೇರಿಲ್ಲವಂತೆ.

ಅದುವೇ ಅಮಿತಾಭ್‌ ಬಚ್ಚನ್‌ಗೆ ಹಾಡಬೇಕು ಅನ್ನೋದು. “ಎಲ್ಲರಿಗೂ ಹಾಡಿದ್ದೇನೆ. ಅವರಿಗೆ ಮಾತ್ರ ಹಾಡುವ ಅವಕಾಶ ಸಿಗಲಿಲ್ಲ. ಅವರ ಚಿತ್ರಕ್ಕೂ ಹಾಡಿದ್ದೇನೆ. ಆದರೆ, ಅದು ಬೇರೆ ಪಾತ್ರಕ್ಕೆ. ದೊಡ್ಡ ನಟ. ಅವರಿಗೆ ಹಾಡಬೇಕೆಂಬ ಆಸೆ ಇದೆ. ಅವರು ನನ್ನ ಸ್ನೇಹಿತರು’ ಎನ್ನುತ್ತಾರೆ ಎಸ್‌.ಪಿ. ಬಾಲಸುಬ್ರಹ್ಮಣ್ಯಂ.

ಅವರು 50 ವರ್ಷಗಳ ಪಯಣದ ನೆನಪಿಗಾಗಿ ಇಡೀ ಪ್ರಪಂಚ ಸುತ್ತುವ ಯೋಜನೆ ಹಾಕಿಕೊಂಡಿದ್ದಾರೆ. ಮುಂದಿನ ಮೇ ತಿಂಗಳಿಂದ ಈ ಯೋಜನೆ ಪ್ರಾರಂಭವಾಗುತ್ತದೆ. ಸತತ 1 ವರ್ಷಗಳ ಕಾಲ ಪ್ರಪಂಚಾದ್ಯಂತ ಅನೇಕ ಕಾರ್ಯಕ್ರಮ ಕೊಡಲಿದ್ದಾರೆ. ಆಮೇಲೆ ನಮ್ಮ ದೇಶದ ಪ್ರಮುಖ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಕೊಡಲಿದ್ದಾರೆ. “ಇಡೀ ರಾಷ್ಟ್ರದಲ್ಲಿ ನಮ್ಮನ್ನು ಹೆಚ್ಚಾಗಿ ಪ್ರೀತಿಸೋದು ಕರ್ನಾಟಕದ ಜನ. ಏಕೆ ಅಂತ ಗೊತ್ತಿಲ್ಲ. ಅವರ ಪ್ರೀತಿ ಮುಂದೆ ನನ್ನ ಸಾಧನೆ ಏನೇನೂ ಇಲ್ಲ ಅನಿಸುತ್ತದೆ. ಅದಕ್ಕಾಗಿ ನನ್ನ ಮಗ ಚರಣ್‌ ಈ ರೀತಿಯ ಪ್ರಪಂಚ ಸಂಗೀತ ಪರ್ಯಟನೆ ಮಾಡುತ್ತಿದ್ದಾನೆ. ಈ ಮೂಲಕ ಅಭಿಮಾನಿಗಳಿಗೆ ಕೃತಜ್ಞತೆ ಅರ್ಪಿಸುವ ಯೋಜನೆ ಇದೆ’ ಎನ್ನುತ್ತಾರೆ ಎಸ್ಪಿಬಿ.

ಅವರ ಪ್ರಕಾರ ಐವತ್ತು ವರ್ಷಗಳ ಕಾಲ ಸಂಗೀತ ಪಯಣ ಮಾಡಿದ್ದು ಸಾಧನೆ ಅಲ್ಲ. ಸುಶೀಲಮ್ಮ, ಜಾನಕಿ, ಏಸುದಾಸ್‌ ಇವರೆಲ್ಲಾ ಇದ್ದಾರೆ. ಅವರ ಮುಂದೆ ನಾನೇನು ಮಾಡಿಲ್ಲ. ಇದನ್ನು ಸಾಧನೆ ಅನ್ನೋಕ್ಕಿಂತ ಸಂಭ್ರಮ ಅನ್ನೋದೇ ಸೂಕ್ತ ಅಂತಾರೆ ಎಸ್ಪಿಬಿ. ಇಷ್ಟು ವಯಸ್ಸಾದರೂ ಲವಲವಿಕೆಯಿಂದ ಹಾಡ್ತೀರಿ. ಏನಿದರ ಗುಟ್ಟು? ಅಂದರೆ ಎಸ್ಪಿ ಹೇಳಿದರು: “ನಾನು ಏನೇ ಮಾಡಿದರೂ ಪ್ರೀತಿಯಿಂದ, ಶ್ರದ್ಧೆಯಿಂದ ಇಷ್ಟ ಪಟ್ಟು ಮಾಡ್ತೀನಿ. ಇಷ್ಟವಿಲ್ಲದ ಕೆಲಸ ಮಾಡೋದೇ ಇಲ್ಲ. ಯಾವತ್ತು ಕೇಳುಗರ ಕಿವಿಗೆ ನನ್ನ ಹಾಡು ಕೇಳುವುದು ಕಷ್ಟ ಆಗುತ್ತಿದೆ ಅನಿಸುತ್ತದೋ ಆವತ್ತು ನಿಲ್ಲಿಸುತ್ತೇನೆ. ಅವರಕಿವಿಗೆ ಕಷ್ಟ ಕೊಡೊಲ್ಲ’ ಅಂತಾರೆ ಎಸ್ಪಿಬಿ.
-ಉದಯವಾಣಿ

Write A Comment