ಕರ್ನಾಟಕ

ಪ್ರಶ್ನೆಪತ್ರಿಕೆ ಸೋರಿಕೆಯ ಕಿಂಗ್ ಪಿನ್ ಶಿವಕುಮಾರ್ ಸ್ವಾಮಿ ವೃತ್ತಾಂತ

Pinterest LinkedIn Tumblr

shivakumar

ಬೆಂಗಳೂರು: ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ದಂಧೆಯ ಇಬ್ಬರು ಪ್ರಮುಖ ಶಂಕಿತರ ಪತ್ತೆಗಾಗಿ ಸಿಐಡಿ ವ್ಯಾಪಕ ಬಲೆ ಬೀಸಿದೆ. ಪ್ರಮುಖ ಆರೋಪಿಗಳಾದ ಶಿವಕುಮಾರ ಸ್ವಾಮಿ ಮತ್ತು ಆತನ ಪುತ್ರ ದಿನೇಶ್ ತಲೆಮರೆಸಿಕೊಂಡಿದ್ದಾರೆ.

ಶಿವಕುಮಾರ್ ಮೂಲತಃ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಕಗ್ಗೆರೆ ಗ್ರಾಮದವನು. ಆತ ಈ ಹಿಂದೆ ಬೆಂಗಳೂರಿನಲ್ಲಿ ಸರ್ಕಾರಿ ಶಾಲೆಯೊಂದರಲ್ಲಿ ಅಧ್ಯಾಪಕನಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಹೊಂದಿದ್ದನು. ನಂತರ ರಾಜ್ಯದ ಅನೇಕ ನಗರಗಳಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗಾಗಿ ಕೋಚಿಂಗ್ ಕೇಂದ್ರಗಳನ್ನು ತೆರೆದಿದ್ದನು.

ಈತನನ್ನು 2008 ಜೂನ್ ತಿಂಗಳಲ್ಲಿ ಮೊದಲ ಸಲ ಬಂಧಿಸಲಾಗಿತ್ತು. ವಿದ್ಯಾರ್ಥಿಗಳು ಮತ್ತು ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಪಿಯು ಮಂಡಳಿ ಅಧಿಕಾರಿಗಳು ಮತ್ತು ಪೊಲೀಸರು ಶಿವಕುಮಾರ್ ನಡೆಸುತ್ತಿದ್ದ ಕೋಚಿಂಗ್ ಸೆಂಟರ್ ಮೇಲೆ ದಾಳಿ ನಡೆಸಿದಾಗ ಆತ ಸೋರಿಕೆಯಾದ ಪ್ರಶ್ನೆಪತ್ರಿಕೆಗಳನ್ನು ಪೂರಕ ಪರೀಕ್ಷೆ ಬರೆಯುವವರಿಗೆ ಹಂಚುತ್ತಿರುವುದು ಗೊತ್ತಾಯಿತು. ಆಗ ಬಂಧಿಸಿದ್ದ ಶಿವಕುಮಾರ್ ನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

ನಂತರ 2011ರಲ್ಲಿ ಮತ್ತೊಮ್ಮೆ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಗುಬ್ಬಿ ಪೊಲೀಸರು ಶಿವಕುಮಾರ್ ನನ್ನು ಬಂಧಿಸಿದ್ದರು. ಮತ್ತೆ ಜಾಮೀನು ಪಡೆದು ಹೊರಬಂದಿದ್ದ. 2012ರಲ್ಲಿ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2013ರಲ್ಲಿ ಸಿಸಿಬಿ ಪೊಲೀಸರು ಆತನನ್ನು ಬಂಧಿಸಿದ್ದರು. ಮತ್ತೆ ಶಿವಕುಮಾರ್ ಗೆ ಜಾಮೀನು ಸಿಕ್ಕಿತ್ತು.

ಇಲ್ಲಿ ಇನ್ನೊಂದು ಆಸಕ್ತಿಕರ ಸಂಗತಿಯೆಂದರೆ 2011ರಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 95ರಷ್ಟು ಅಂಕ ಪಡೆದಿದ್ದ ಶಿವಕುಮಾರ್ ಪುತ್ರ ದಿನೇಶ್ ಮೆಡಿಕಲ್ ಸೀಟು ಗಿಟ್ಟಿಸಿಕೊಂಡಿದ್ದ. ಆದರೆ ಎಂಬಿಬಿಎಸ್ ಪರೀಕ್ಷೆ ಪಾಸು ಮಾಡಲು ಸಾಧ್ಯವಾಗದೆ ಕಾಲೇಜಿನಿಂದ ಹೊರಹಾಕಲ್ಪಟ್ಟಿದ್ದ. ಪೊಲೀಸ್ ಮೂಲಗಳ ಪ್ರಕಾರ, ಪ್ರಶ್ನೆ ಪತ್ರಿಕೆ ಸೋರಿಕೆ ದಂಧೆಯಲ್ಲಿ ದಿನೇಶ್ ಆತನ ತಂದೆಗೆ ಸಹಾಯ ಮಾಡುತ್ತಿದ್ದ.

ಆರೋಪಿ ಶಿವಕುಮಾರ್ ಹತ್ತನೇ ತರಗತಿಯಿಂದ ಹಿಡಿದು ವೈದ್ಯಕೀಯ, ಇಂಜಿನಿಯರಿಂಗ್, ಕೆಪಿಎಸ್ ಸಿ ಹೀಗೆ ವಿವಿಧ ಹಂತಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿದ್ದ ಎಂದು ಮೂಲಗಳು ತಿಳಿಸಿವೆ.

ಶಿವಕುಮಾರ್ ಪ್ರಸ್ತುತ ಬೆಂಗಳೂರಿನ ನಂದಿನಿ ಲೇ ಔಟ್ ನಿವಾಸಿಯಾಗಿದ್ದು, ನಿನ್ನೆಯವರೆಗೆ ಅವನನ್ನು ಪೊಲೀಸರಿಗೆ ಹಿಡಿಯಲು ಸಾಧ್ಯವಾಗಿಲ್ಲ.

Write A Comment