ಕರ್ನಾಟಕ

ಮಹಿಳೆಯನ್ನು ಚುಡಾಯಿಸಿದ ಟೆಕಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದರು!

Pinterest LinkedIn Tumblr

techie_beaten

ಬೆಂಗಳೂರು: ಮಹಿಳೆಯನ್ನು ಚುಡಾಯಿಸಿ, ಅಸಭ್ಯವಾಗಿ ವರ್ತಿಸಿದ ಟೆಕಿಯನ್ನು ಸ್ಥಳೀಯರು ಇಲೆಕ್ಟ್ರಿಕ್ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗ ಥಳಿಸಿದ ಘಟನೆ ವರದಿಯಾಗಿದೆ. ಶುಕ್ರವಾರ ಬೆಳಗ್ಗೆ ವೆಸ್ಟ್ ಆಫ್ ಕಾರ್ಡ್ ರೋಡ್‌ನಲ್ಲಿ ಈ ಘಟನೆ ನಡೆದಿದೆ.

ಖಾಸಗಿ ಐಟಿ ಕಂಪನಿಯೊಂದರ ಉದ್ಯೋಗಿಯಾಗಿರುವ ಶ್ರೀರಾಮಮೂರ್ತಿ ಎಂಬಾತ ದಿನಾ ಬೆಳಗ್ಗೆ ಆ ದಾರಿಯಾಗಿ ಹೋಗುತ್ತಿದ್ದ ಮಹಿಳೆಯನ್ನು ಚುಡಾಯಿಸುತ್ತಿದ್ದ ಎನ್ನಲಾಗುತ್ತಿದೆ. ವಿವಾಹಿತನಾಗಿರುವ ಈತನಿಗೆ ಇಬ್ಬರು ಮಕ್ಕಳಿದ್ದಾರೆ.

ಪ್ರತೀ ದಿನವೂ ಈತ ನನ್ನನ್ನು ಚುಡಾಯಿಸುತ್ತಿದ್ದ. ಒಂದ್ಸಾರಿ ನನ್ನ ಗಂಡ ಬಂದು ಈತನಿಗೆ ಎಚ್ಚರಿಕೆ ನೀಡಿದ್ದರು ಎಂದು ಮಹಿಳೆ ಬಸವೇಶ್ವರನಗರ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಹೇಳಿದ್ದಾರೆ. ಇಷ್ಟೆಲ್ಲಾ ಆದರೂ ಶುಕ್ರವಾರ ಬೆಳಗ್ಗೆ ಮತ್ತೆ ಈತ ಮಹಿಳೆಯನ್ನು ಚುಡಾಯಿಸಿದ್ದಾನೆ, ಕೂಡಲೇ ಆ ಮಹಿಳೆ ತನ್ನ ಪತಿಗೆ ಕರೆ ಮಾಡಿದ್ದಾರೆ. ಮಹಿಳೆಯ ಪತಿ ಸ್ಥಳೀಯರನ್ನೂ ಜತೆಗೆ ಕರೆದುಕೊಂಡು ಬಂದಿದ್ದು, ಆ ಜನರ ಗುಂಪು ಶ್ರೀರಾಮಮೂರ್ತಿಯನ್ನು ಇಲೆಕ್ಟ್ರಿಕ್ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ.

ಆಮೇಲೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆದಾಗ್ಯೂ, ಟೆಕಿಯ ಕುಟುಂಬದವರು ಆತನ ವಿರುದ್ಧ ಕೇಸು ದಾಖಲಿಸಬೇಡಿ ಎಂದು ಮಹಿಳೆಯಲ್ಲಿ ಬಿನ್ನವಿಸಿಕೊಂಡ ಕಾರಣ ಕೇಸು ದಾಖಲಾಗಿಲ್ಲ. ಅದೇ ವೇಳೆ ಹಲ್ಲೆ ನಡೆಸಿದ್ದಕ್ಕೆ ಮಹಿಳೆಯ ಪತಿ ಹಾಗೂ ಸ್ಥಳೀಯರ ವಿರುದ್ಧ ಕೇಸು ದಾಖಲಿಸಲು ಟೆಕಿ ನಿರಾಕರಿಸಿದ್ದಾರೆ.

Write A Comment