ಕರ್ನಾಟಕ

ದಲಿತರಿಗೆ ದೇವಾಲಯ ಪ್ರವೇಶ ಕುರಿತ ವಿವಾದ : ಬಿದರನಹಳ್ಳಿಯಲ್ಲಿ ನಿಷೇಧಾಜ್ಞೆ ಜಾರಿ

Pinterest LinkedIn Tumblr

daliಹಾಸನ, ಏ.2-ದಲಿತರಿಗೆ ದೇವಸ್ಥಾನ ಪ್ರವೇಶ ಸಂಬಂಧ ಕಳೆದ ಕೆಲವು ತಿಂಗಳಿನಿಂದ ವಿವಾದಕ್ಕೆ ಒಳಗಾಗಿರುವ ಹೊಳೆನರಸೀಪುರ ತಾಲೂಕಿನ ಬಿದರನಹಳ್ಳಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ದಲಿತರು ದೇವಸ್ಥಾನ ಪ್ರವೇಶಿಸಿದರೆಂದು ಕಳೆದ 5 ತಿಂಗಳಿನಿಂದ ಬೀಗ ಹಾಕಿದ್ದು, ಜಾತ್ರೆ ಪ್ರಯುಕ್ತ ಬೀಗ ತೆಗೆದು ಮತ್ತೆ ದಲಿತರ ಪ್ರವೇಶ ನಿರ್ಬಂಧಿಸಿ ಗ್ರಾಮದ ಸವರ್ಣೀಯರು ದೇವಾಲಯಕ್ಕೆ ಬೀಗ ಜಡಿದಿದ್ದಾರೆ.

ಘಟನೆ ವಿವರ:

ಬಿದರನಹಳ್ಳಿ ಗ್ರಾಮದಲ್ಲಿ ಬಸವೇಶ್ವರ ದೇಗುಲವಿದ್ದು, ದಲಿತರು ಪ್ರವೇಶ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ನಾಲ್ವರು ದಲಿತ ಮಹಿಳೆಯರು ದೇವಾಲಯ ಪ್ರವೇಶಿಸಿದ್ದು, ಸವರ್ಣೀಯರು ಪಂಚಾಯ್ತಿ ನಡೆಸಿ ಅವರಿಗೆ 1 ಸಾವಿರ ರೂ.ದಂಡ ವಿಧಿಸಿದ್ದರು. ಇದನ್ನು ವಿರೋಧಿಸಿ ದಲಿತರು ಪ್ರತಿಭಟನೆ ನಡೆಸಿದರೆ ಅವರಿಗೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದವು. ಈ ವೇಳೆ ಶಾಸಕ ಎಚ್.ಡಿ.ರೇವಣ್ಣ ಅವರ ಅಧ್ಯಕ್ಷತೆಯಲ್ಲಿ ಎರಡು ಸಭೆಗಳು ನಡೆದರೂ ಅವು ವಿಫಲಗೊಂಡಿದ್ದವು.

ಕಳೆದ 2-3 ತಿಂಗಳ ಹಿಂದೆ ಅಧಿಕಾರಿಗಳು ಸೇರಿ ದಲಿತರಿಗೂ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡಿ ಪೂಜೆ ನಡೆಸಿದ್ದರು. ಆಗ ಸವರ್ಣೀಯರು ದೇವಾಲಯಕ್ಕೆ ಬೀಗ ಜಡಿದಿದ್ದು, ನಿನ್ನೆಯಿಂದ ಜಾತ್ರೆ ನಡೆಯಬೇಕಿದ್ದರಿಂದ ಕಳೆದ ತಿಂಗಳ 25 ರಂದು ದೇವಸ್ಥಾನದ ಬಾಗಿಲು ತೆರೆದು ಶುದ್ಧೀಕರಣ ಮಾಡಿ ಸವರ್ಣೀಯರು ಪೂಜೆ ಆರಂಭಿಸಿದ್ದರು. ಮಾ.30ರಂದು ಗ್ರಾಮದ ದಲಿತರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಏ.1ರ ಜಾತ್ರೆ ವೇಳೆ ತಮಗೂ, ದೇವಾಲಯ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕೆಂದು ಕೋರಿದ್ದರು.

ಅದರಂತೆ ನಿನ್ನೆ ಎಎಸ್‌ಪಿ ಶೋಭಾರಾಣಿ, ಡಿವೈಎಸ್ಪಿ ಕಿಶೋರ್‌ಬಾಬು, ಎಸಿ ವಿಜಯ, ತಹಶೀಲ್ದಾರ್ ರೇಣುಕುಮಾರ್ ಅವರು ಗ್ರಾಮಕ್ಕೆ ಆಗಮಿಸಿ ಜಾತ್ರೆಯಲ್ಲಿ ಪಾಲ್ಗೊಂಡು ದೇವಾಲಯಕ್ಕೆ ಬರುವಂತೆ ದಲಿತರಿಗೆ ಆಹ್ವಾನ ನೀಡಿದ್ದಾರೆ. ಆದರೆ ದಲಿತರು ಸವರ್ಣೀಯರಿಂದ ಒಪ್ಪಿಗೆ ಕೊಡಿಸಿ ಎಂದು ಅಧಿಕಾರಿಗಳಲ್ಲಿ ಕೋರಿದ್ದಾರೆ. ಆಗ ಅಧಿಕಾರಿಗಳು ಸವರ್ಣೀಯರ ಬಳಿ ತೆರಳಿ ದಲಿತರಿಗೆ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡುವಂತೆ ಮನವೊಲಿಸಲು ಯತ್ನಿಸಿದರೂ ಪ್ರಯೋಜನವಾಗಿಲ್ಲ.

ಈ ವೇಳೆ ಸವರ್ಣೀಯರು ಸ್ಥಳದಲ್ಲಿದ್ದ ಪತ್ರಕರ್ತರು, ಅಧಿಕಾರಿಗಳು ಹಾಗೂ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದಾಗಿ ಪತ್ರಕರ್ತರಾದ ಕೃಷ್ಣ, ವಸಂತಯ್ಯ, ಪೊಲೀಸ್ ಕಾನ್‌ಸ್ಟೆಬಲ್‌ಗಳಾದ ಸರ್ದಾಜ್ ಪಾಷ, ಹರೀಶ್, ಯತೀಶ್ ಅವರುಗಳು ಗಾಯಗೊಂಡಿದ್ದು, ಹೊಳೆನರಸೀಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಎಲ್ಲಾ ಘಟನೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸೋಮವಾರದವರೆಗೂ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

Write A Comment