ಕರ್ನಾಟಕ

ಎಸ್ಎಸ್ಎಲ್ ಸಿ ಪರೀಕ್ಷೆಯಿಂದ ವಂಚಿತರಾದ ಬೆಂಗಳೂರಿನ 35 ವಿದ್ಯಾರ್ಥಿಗಳು

Pinterest LinkedIn Tumblr

sslc

ಬೆಂಗಳೂರು: ಖಾಸಗಿ ಶಾಲೆಯ ಯಡವಟ್ಟಿನಿಂದಾಗಿ ಬೆಂಗಳೂರಿನ 35 ವಿದ್ಯಾರ್ಥಿಗಳು ಎಸ್ಎಸ್ಎಲ್ ಸಿ ಪರೀಕ್ಷೆಯಿಂದ ವಂಚಿತರಾಗಿದ್ದಾರೆ.

ಬೆಂಗಳೂರಿನ ಸಾರಾಯಿಪಾಳ್ಯದಲ್ಲಿರುವ ವಿವೇಕಾನಂದ ಶಾಲೆಯ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರವೇಶ ಪತ್ರ ನೀಡದ ಹಿನ್ನೆಲೆಯಲ್ಲಿ 35 ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆ ಬರೆಯುವ ಅವಕಾಶ ಕಳೆದುಕೊಂಡಿದ್ದಾರೆ.

ಬೆಳಗ್ಗೆ ಪ್ರವೇಶ ಪತ್ರ ಪಡೆದುಕೊಳ್ಳಲು ವಿದ್ಯಾರ್ಥಿಗಳಿಗೆ ಶಾಲೆಯ ಬಳಿ ತೆರಳಿದ್ದರು.ಆದರೆ ಈ ಶಾಲೆ ಶಿಕ್ಷಣ ಇಲಾಖೆಯಿಂದ ಮಾನ್ಯತೆ ಪಡೆಯದ ಹಿನ್ನೆಲೆಯಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ನೀಡಲು ನಿರಾಕರಿಸಿದೆ. ಶಾಲೆಯ ಈ ಯಡವಟ್ಟಿನಿಂದಾಗಿ ಏನೂ ತಪ್ಪು ಮಾಡದ ವಿದ್ಯಾರ್ಥಿಗಳು ಒಂದು ಶೈಕ್ಷಣಿಕ ವರ್ಷವನ್ನೇ ಕಳೆದುಕೊಂಡಿದ್ದಾರೆ.

ಪರೀಕ್ಷೆಗೆ ಪ್ರವೇಶ ಪತ್ರ ನೀಡಲು ಪ್ರಾಚಾರ್ಯರು ಪ್ರತಿ ವಿದ್ಯಾರ್ಥಿಯಿಂದ 5 ಸಾವಿರ ರುಪಾಯಿ ತೆಗೆದುಕೊಂಡಿದ್ದರು. ಬೆಳಗ್ಗೆಯವರೆಗೂ ಪ್ರವೇಶ ಪತ್ರ ನೀಡುವುದಾಗಿ ಹೇಳುತ್ತಾ ಬಂದಿದ್ದರು. ಆದರೆ ಈಗ ಶಾಲೆ ಮಾನ್ಯತೆ ಪಡೆದಿಲ್ಲ ಅಂತ ಬೋರ್ಡ್ ಪ್ರವೇಶ ಪತ್ರ ನೀಡಿಲ್ಲ ಎಂದು ಹೇಳುತ್ತಿರುವುದಾಗಿ ಪರೀಕ್ಷೆಯಿಂದ ವಂಚಿತನಾದ ವಿದ್ಯಾರ್ಥಿಯೊಬ್ಬ ತಿಳಿಸಿದ್ದಾರೆ.

‘ಇದು ನಮ್ಮ ತಪ್ಪಲ್ಲ. ಆದರೂ ನಾವು ಒಂದು ಮಹತ್ವದ ಶೈಕ್ಷಣಿಕ ವರ್ಷವನ್ನು ಕಳೆದುಕೊಳ್ಳುತ್ತಿದ್ದೇವೆ. ದಯವಿಟ್ಟು ಸರ್ಕಾರ ನಮಗೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು’ ಎಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.
ಇನ್ನು ಶಾಲಾ ಆಡಳಿತ ಮಂಡಳಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳು ಹಾಗೂ ಪೋಷಕರು ಶಾಲೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.

Write A Comment