ಕರ್ನಾಟಕ

ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಮತ್ತೆ ಕಾಂಗ್ರೆಸ್‌ಗೆ ಅಧಿಕಾರ !

Pinterest LinkedIn Tumblr

C M Siddaramaiah addressing during the Joint session at Vidhana Soudha in Bangalore on Thursday, January 23, 2014.

ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತದೆ. ಬಿಜೆಪಿ ವಿರೋಧ ಪಕ್ಷದಲ್ಲೇ ಇರಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿಂದು ಹೇಳಿದ್ದು ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು.

ಬಜೆಟ್ ಮೇಲಿನ ಭಾಷಣ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡುತ್ತಿದ್ದಾಗ ಮಧ್ಯ ಪ್ರವೇಶಿಸಿದ ಬಿಜೆಪಿಯ ಸಿ.ಟಿ. ರವಿ ಹಾಗೂ ಬಸವರಾಜ ಬೊಮ್ಮಾಯಿ ಹಿಂದೆ ಸ್ಥಿರ ಬೆಲೆ ಮೇಲೆ ಜಿಎಸ್‌ಡಿಪಿಯನ್ನು ಲೆಕ್ಕ ಹಾಕಲಾಗುತ್ತಿತ್ತು. ಈಗ ಮಾರುಕಟ್ಟೆ ದರದ ಮೇಲೆ ಜಿಎಸ್‌ಡಿಪಿಯನ್ನು ಲೆಕ್ಕ ಹಾಕುತ್ತಿರುವುದರಿಂದ ರಾಜ್ಯದ ಜಿಎಸ್‌ಡಿಪಿ ಏರಿದೆ ಅಷ್ಟೆ ಎಂದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ, ಹೌದು ನಿಮ್ಮ ಮಾತನ್ನು ಒಪ್ಪಿಕೊಳ್ಳುತ್ತೇನೆ. ನೀವು ಬುದ್ಧಿವಂತರು, ನಿಮ್ಮ ಮುಂದೆ ನಾನು ಏನೇನೂ ಇಲ್ಲ ಎಂದು ನಗುತ್ತಾ ಹೇಳಿದಾಗ, ಅದಕ್ಕೆ ಪ್ರತ್ಯುತ್ತರ ನೀಡಿದ ಬಸವರಾಜ ಬೊಮ್ಮಾಯಿ ನೀವು ಹಾಗೆ ಹೇಳಬೇಡಿ, ನೀವು ವಕೀಲರಾಗಿ ಬುದ್ಧಿವಂತರಾಗಿರುವುದರಿಂದಲೇ ಕಾಂಗ್ರೆಸ್‌ನಲ್ಲಿ ದೊಡ್ಡವರನ್ನೆಲ್ಲಾ ಹಿಂದಿಕ್ಕಿ ಇಲ್ಲಿ ಬಂದು ಕುಳಿತಿದ್ದೀರಿ ಎಂದಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜನರ ಆಶೀರ್ವಾದ ನನ್ನ ಮೇಲಿದೆ. ಜತೆಗೆ ಹೈಕಮಾಂಡ್ ಸಹ ಆಶೀರ್ವಾದ ಮಾಡಿದೆ. ಹಾಗಾಗಿ ಇಲ್ಲಿ ಬಂದು ಕುಳಿತಿದ್ದೇನೆ. 2018ರಲ್ಲೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ನೀವು ವಿರೋಧ ಪಕ್ಷದಲ್ಲಿ ಕೂರುವುದು ಖಚಿತ. ಅಧಿಕಾರಕ್ಕೆ ಬರುತ್ತೇವೆ ಎಂಬುದು ನಿಮ್ಮ ಭ್ರಮೆಯಷ್ಟೆ ಎಂದರು.

ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಜಗದೀಶ್‌ಶೆಟ್ಟರ್, ಮುಂದಿನ ಚುನಾವಣೆಯಲ್ಲಿ ಜನ ನಿಮಗೆ ಪಾಠ ಕಲಿಸುತ್ತಾರೆ. ಸ್ಪಷ್ಟವಾಗಿ ಇದು ಗೋಡೆ ಮೇಲಿನ ಬರಹ. ನೀವು ಅಧಿಕಾರಕ್ಕೆ ಬರುವುದಿಲ್ಲ ಎಂದರು.

ಇದಕ್ಕೆ ದ್ವನಿಗೂಡಿಸಿದ ಸಿ.ಟಿ. ರವಿ ನಿಮ್ಮದೇ ಪಕ್ಷದ ಮಾಜಿ ಮುಖ್ಯಮಂತ್ರಿಯೊಬ್ಬರು ನಿಮ್ಮ ಮೇಲೆ ಹೈಕಮಾಂಡ್‌ಗೆ ಚಾರ್ಜ್‌ಶೀಟ್ ಹಾಕಿ ಬಂದಿದ್ದಾರೆ ಎಂದು ಮಾತಿನ ಬಾಣ ಬಿಟ್ಟರು.
ಏನೇ ಹೇಳಿ, ನಾವೇ ಅಧಿಕಾರಕ್ಕೆ ಬರುವುದು. ಯಡಿಯೂರಪ್ಪ ನಿಮ್ಮ ಪಕ್ಷದಿಂದ ಹೊರ ಹೋದ ಮೇಲೆ ನೀವು ಗೆದ್ದಿದ್ದು ಕೇವಲ 40 ಸೀಟುಗಳು ಮಾತ್ರ ಎಂದು ಸಿದ್ದರಾಮಯ್ಯ ಮಾತಿನ ಬಾಣ ಬಿಟ್ಟರು.

ಆಗ ಜಗದೀಶ್‌ಶೆಟ್ಟರ್, ನಮ್ಮಗಳ ಒಳ ಜಗಳದಿಂದ ನೀವು ಅಧಿಕಾರಕ್ಕೆ ಬಂದಿದ್ದೀರಿ. ಇಲ್ಲದಿದ್ದರೆ ಸಾಧ್ಯವೇ ಇರಲಿಲ್ಲ ಎಂದರು.

ಇದಕ್ಕೆ ಬೆಂಬಲವಾಗಿ ಮಾತನಾಡಿದ ಸಿ.ಟಿ. ರವಿ, ಬಿಜೆಪಿ, ಕೆಜೆಪಿ ಹಾಗೂ ಬಿಎಸ್ಆರ್ ಸೇರಿಸಿದರೆ ನಾವೇ ಹೆಚ್ಚು ಮತಗಳನ್ನು ಪಡೆದಿರುವುದು ಎಂದಾಗ, ಸಿದ್ದರಾಮಯ್ಯ, ನಿಮ್ಮ ಕನಸು ನನಸಾಗುವುದಿಲ್ಲ. ಪಂಚಾಯ್ತಿ ಚುನಾವಣೆಯಲ್ಲಿ ಶೇ. 12 ರಷ್ಟು ಮತ ಕಾಂಗ್ರೆಸ್‌ಗೆ ಬಂದಿದೆ ಎಂದಾಗ, ಬಸವರಾಜ ಬೊಮ್ಮಾಯಿ ಲೋಕಸಭಾ ಚುನಾವಣೆಯಲ್ಲಿ ನಾವೇ ಹೆಚ್ಚು ಮತ ಪಡೆದಿದ್ದು ಎಂದರು.

ಈ ಸಂದರ್ಭದಲ್ಲಿ ಗದ್ದಲದ ವಾತಾವರಣ ಉಂಟಾಯಿತು. ಆಗ ಸಭಾಧ್ಯಕ್ಷರು ಬೇರೆ ಚರ್ಚೆ ಬೇಡ. ಬಜೆಟ್ ಮೇಲೆ ಮಾತನಾಡಿ ಎಂದು ತಾಕೀತು ಮಾಡಿದಾಗ, ಗದ್ದಲದಲ್ಲೇ ಮಾತನಾಡಿದ ಶೆಟ್ಟರ್‌ರವರು. ಸಿದ್ದರಾಮಯ್ಯನವರೆ ಕಾಂಗ್ರೆಸ್ ಮುಖ್ಯಮಂತ್ರಿ. ಈಗ ಭಾರತವನ್ನು ಕಾಂಗ್ರೆಸ್ ಮುಕ್ತ ಮಾಡಿದ್ದೇವೆ. ಮುಂದೆ ರಾಜ್ಯವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎಂದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಇದೆಲ್ಲಾ ನಿಮ್ಮ ಭ್ರಮೆ ಎಂದು ಬಜೆಟ್ ಮೇಲಿನ ಭಾಷಣವನ್ನು ಮುಂದುವರೆಸಿದರು.

Write A Comment