ಕರಾವಳಿ

ಬಿಸಿಲಿನ ತಾಪ- ದರ ಏರಿಕೆ ಪ್ರತಾಪ; ಗ್ರಾಹಕರ ಹಿಡಿಶಾಪ-ಯುನಿಟ್‌ಗೆ 48 ಪೈಸೆ ಹೆಚ್ಚಳ

Pinterest LinkedIn Tumblr

BULB

ಬೆಂಗಳೂರು: ರಾಜ್ಯದ ಜನತೆಗೆ ಸರ್ಕಾರ ವಿದ್ಯುತ್ ದರ ಹೆಚ್ಚಿಸಿ ಶಾಕ್ ನೀಡಿದೆ. ಈಗಾಗಲೇ ಅನಿಯಮಿತ ಲೋಡ್ ಶೆಡ್ಡಿಂಗ್‌ನಿಂದ ಬೇಸತ್ತಿರುವ ಜನತೆಗೆ ಇದೀಗ ವಿದ್ಯುತ್ ದರ ಹೆಚ್ಚಳವಾಗಿರುವುದು ನುಂಗಲಾರದ ತುತ್ತಾಗಿದೆ.

ರಾಜ್ಯದ ನಾಲ್ಕು ನಿಗಮಗಳ ವ್ಯಾಪ್ತಿಯಲ್ಲೂ ವಿದ್ಯುತ್ ದರ ಏರಿಕೆಯಾಗಿದ್ದು, ಏಪ್ರಿಲ್ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದ ಬಳಕೆದಾರರು, ನೀರಾವರಿ ಪಂಪ್‌ಸೆಟ್‌ಗಳು, ಕೈಗಾರಿಕೆ, ವಿದ್ಯಾಸಂಸ್ಥೆಗಳು ಮತ್ತು ಆಸ್ಪತ್ರೆಗಳು ಸೇರಿದಂತೆ ವಿವಿಧ ಬಳಕೆದಾರರಿಗೆ ಪ್ರತಿ ಯುನಿಟ್ ವಿದ್ಯುತ್ ದರವನ್ನು 15 ಪೈಸೆಯಿಂದ 50 ಪೈಸೆಯವರೆಗೆ ಹೆಚ್ಚಿಸಿ ಕರ್ನಾಟಕ ವಿದ್ಯುತ್‌ಚ್ಛಕ್ತಿ ನಿಯಂತ್ರಣ ಆಯೋಗ ದರ ಪರಿಷ್ಕರಣೆ ಮಾಡಿ ಇಂದು ಆದೇಶ ಪ್ರಕಟಿಸಿದೆ.

* ಪ್ರತಿ ಯುನಿಟ್‌ಗೆ ವಿದ್ಯುತ್‌ಗೆ 15 ಪೈಸೆಯಿಂದ 50 ಪೈಸೆ ದರ ಏರಿಕೆ.
* ನಗರ ಪ್ರದೇಶದಲ್ಲಿ 2 ರೂ. 70 ಪೈಸೆಯಿಂದ 3 ರೂ.ಗೆ ಹೆಚ್ಚಳ.
* ಗ್ರಾಮಾಂತರ ಪ್ರದೇಶದಲ್ಲಿ 2 ರೂ. 60 ಪೈಸೆಯಿಂದ 2 ರೂ. 90 ಪೈಸೆಗೆ ಹೆಚ್ಚಳ.
* ಕೈಗಾರಿಕಾ ಬಳಕೆದಾರರಿಗೆ ಪ್ರತಿ ಯುನಿಟ್‌ಗೆ 15 ರಿಂದ 30 ಪೈಸೆ ಹೆಚ್ಚಳ.
* ವಾಣಿಜ್ಯ ಬಳಕೆದಾರರಿಗೆ ಯುನಿಟ್‌ಗೆ 20 ಪೈಸೆ ಏರಿಕೆ.
* ಕುಡಿಯುವ ನೀರು ಸರಬರಾಜು ಮತ್ತು ಬೀದಿದೀಪದ ವಿದ್ಯುತ್‌ಗೆ 3 ರೂ.40 ಪೈಸೆಯಿಂದ 3 ರೂ. 90 ಪೈಸೆ ಹಾಗೂ 4 ರೂ. 10 ಪೈಸೆಯಿಂದ 4. ರೂ. 50 ಪೈಸೆಗೆ ಏರಿಕೆ
* ಎಲ್‌ಇ‌ಡಿ ಇಂಡಕ್ಷನ್ ಬೀದಿದೀಪಗಳಿಗೆ 4. ರೂ. ಪೈಸೆ ರಿಯಾಯಿತಿ ದರಲ್ಲಿ ವಿದ್ಯುತ್.
* ವಿದ್ಯಾ ಸಂಸ್ಥೆಗಳು ಮತ್ತು ಆಸ್ಪತ್ರೆಗಳಿಗೆ 20 ಪೈಸೆಯಿಂದ 40 ಪೈಸೆಗೆ ಹೆಚ್ಚಳ.

ಹೊಸ ವಿದ್ಯುತ್ ದರ ಏ.1ರಿಂದ ಜಾರಿಗೆ ಬರಲಿದ್ದು, ಸರಾಸರಿ ಪ್ರತಿ ಯುನಿಟ್‌ಗೆ 48 ಪೈಸೆಯಷ್ಟು ಹೆಚ್ಚಳವಾಗಿದೆ.

ರಾಜ್ಯದ ವಿವಿಧ ಹೆಸ್ಕಾಂಗಳು ವಿದ್ಯುತ್ ದರವನ್ನು ಪ್ರತಿ ಯುನಿಟ್‌ಗೆ 1 ರೂ. 2 ಪೈಸೆಗೆ ಹೆಚ್ಚಿಸುವಂತೆ ಸಲ್ಲಿಸಿದ್ದ ಬೇಡಿಕೆಯ ಹಿನ್ನೆಲೆಯಲ್ಲಿ ಆಯೋಗ ಸರಾಸರಿ 15 ಪೈಸೆಯಿಂದ 50 ಪೈಸೆವರೆಗೆ ಹೆಚ್ಚಿಸಿದೆ ಎಂದು ಆಯೋಗದ ಅಧ್ಯಕ್ಷ ಎಂ.ಕೆ.ಶಂಕರಲಿಂಗೇಗೌಡ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಹುಕ್ಕೇರಿ ಗ್ರಾಮೀಣ ಸಹಕಾರ ಸಂಘ ಪ್ರತಿ ಯುನಿಟ್‌ಗೆ 60 ಪೈಸೆ ಹೆಚ್ಚಿಸುವಂತೆ ಮನವಿ ಮಾಡಿತ್ತು. ಆಯೋಗ 25 ಪೈಸೆ ಹೆಚ್ಚಿಸಿದೆ. ಇದಲ್ಲದೆ ಎಲ್‌ಟಿ ಮತ್ತು ಎಚ್‌ಟಿ ಗ್ರಾಹಕರಿಗೆ ಪ್ರತಿ ಕಿಲೋ ವ್ಯಾಟ್, ಎಚ್.‌ಪಿ ಹಾಗೂ ಕೆವಿಎಗೆ 10 ರೂ.ನಿಂದ ಕನಿಷ್ಠ ಏರಿಕೆಗೆ ಅನುಮೋದನೆ ನೀಡಿದ್ದು, ಒಟ್ಟಾರೆ ವಿದ್ಯುತ್‌ಚ್ಛಕ್ತಿ ದರದಲ್ಲಿ ಸರಾಸರಿ 9ರಷ್ಟು ಏರಿಕೆ ಮಾಡಲಾಗಿದೆ ಎಂದು ಹೇಳಿದರು.

ನಗರ ಪ್ರದೇಶದ ಗ್ರಾಹಕರು 30 ಯುನಿಟ್ ಒಳಗೆ ಬಳಸುವವರಿಗೆ ಪ್ರತಿ ಯುನಿಟ್‌ಗೆ 2.70 ರೂ.ನಿಂದ 3 ರೂ.ಗೆ ಹೆಚ್ಚಿಸಲಾಗಿದೆ. 31 ರಿಂದ 100 ಯುನಿಟ್ ಬಳಸುವವರಿಗೆ 4 ರೂ.ನಿಂದ 4.40ಕ್ಕೆ 101 ರಿಂದ 200 ಯುನಿಟ್ ಬಳಸುವವರಿಗೆ 5.40 ರಿಂದ 5.90 ರೂ.ಗೆ, 200 ಯುನಿಟ್‌ಗಳಿಗೂ ಮೀರಿದ ಪ್ರತಿ ಯುನಿಟ್‌ಗೆ 6 ರೂ. 40 ಪೈಸೆಯಿಂದ 6 ರೂ. 90 ಪೈಸೆಗೆ ಹೆಚ್ಚಿಸಲಾಗಿದೆ ಎಂದರು.

ಗ್ರಾಮಾಂತರ ಪ್ರದೇಶಗಳಲ್ಲಿ 30 ಯುನಿಟ್‌ ಒಳಗಿನ ಬಳಕೆದಾರರಿಗೆ ಪ್ರತಿ ಯುನಿಟ್‌ಗೆ 2 ರೂ. 60 ಪೈಸೆಯಿಂದ 2 ರೂ. 90 ಪೈಸೆಗೆ ಹೆಚ್ಚಳ. 31 ರಿಂದ 100 ಯುನಿಟ್‌ ಒಳಗಿರುವವರಿಗೆ 3.70 ರಿಂದ 4 ರೂ. 10 ಪೈಸೆಗೆ ಹೆಚ್ಚಳ. 101 ರಿಂದ 200 ಯುನಿಟ್ ಬಳಕೆದಾರರಿಗೆ 5 ರೂ. 10 ಪೈಸೆಯಿಂದ 5 ರೂ. 60 ಪೈಸೆಗೆ ಹೆಚ್ಚಳ. 200 ಯುನಿಟ್ ಮೀರಿದವರಿಗೆ ಪ್ರತಿ ಯುನಿಟ್ ಗೆ 5 ರೂ. 90 ಪೈಸೆಯಿಂದ 6 ರೂ. 40 ಪೈಸೆಗೆ ಹೆಚ್ಚಿಸಲಾಗಿದೆ ಎಂದರು.

ಕೈಗಾರಿಕಾ ಬಳಕೆದಾರರಿಗೆ ಪ್ರತಿ ಯುನಿಟ್‌ಗೆ 15 ಪೈಸೆಯಿಂದ 30 ಪೈಸೆಗೆ ಹೆಚ್ಚಿಸಲಾಗಿದೆ. ಮಹಾನಗರ ಪಾಲಿಕೆ, ಬೆಸ್ಕಾಂ, ನಗರ ಪ್ರದೇಶಗಳ ವ್ಯಾಪ್ತಿಯ ಎಲ್‌ಟಿ ಕೈಗಾರಿಕಾ ಬಳಕೆದಾರರಿಗೆ ಮೊದಲ 500 ಯುನಿಟ್‌ ಬಳಕೆಗೆ ಪ್ರತಿ ಯುನಿಟ್‌ಗೆ 5 ರೂ. 10 ಪೈಸೆ ಹಾಗೂ 500 ಯುನಿಟ್ ಮೀರಿದ ಬಳಕೆದಾರರಿಗೆ 6 ರೂ. 30 ಪೈಸೆ ಹೆಚ್ಚಳ ಮಾಡಲಾಗಿದೆ. ಬೆಸ್ಕಾಂ ಹೊರತುಪಡಿಸಿ ಇತರ ಹೆಸ್ಕಾಂ ವ್ಯಾಪ್ತಿಯಲ್ಲಿ ಬರುವ ಬಳಕೆದಾರರಿಗೆ 500 ಯುನಿಟ್‌ವರೆಗೆ ಪ್ರತಿ ಯುನಿಟ್‌ಗೆ 4 ರೂ. 90 ಪೈಸೆ, 500 ಯುನಿಟ್ ಮೀರಿದವರಿಗೆ 5 ರೂ. 85 ಪೈಸೆ ದರ ನಿಗದಿಪಡಿಸಲಾಗಿದೆ ಎಂದು ಹೇಳಿದರು.

ವಾಣಿಜ್ಯ ಬಳಕೆದಾರರಿಗೆ ಪ್ರತಿ ಯುನಿಟ್‌ಗೆ 20 ಪೈಸೆ ಹೆಚ್ಚಳ ಮಾಡಲಾಗಿದೆ. ಮೊದಲ 50 ಯುನಿಟ್‌ಗಳಿಗೆ ಪ್ರತಿ ಯುನಿಟ್‌ಗೆ 7 ರೂ. 15 ಪೈಸೆ, ಗ್ರಾಮಾಂತರ ಪ್ರದೇಶದ ಬಳಕೆದಾರರಿಗೆ 6 ರೂ. 65 ಪೈಸೆ, ಬೆಸ್ಕಾಂ ವ್ಯಾಪ್ತಿಯ ಹಾಗೂ ಇತರ ಪ್ರದೇಶಗಳಿಗೆ 7 ರೂ. 80 ಪೈಸೆಯಿಂದ 8 ರೂ. 15 ಪೈಸೆಗೆ ಹೆಚ್ಚಿಸಲಾಗಿದೆ ಎಂದರು.

ಕುಡಿಯುವ ನೀರು ಮತ್ತು ವಿದ್ಯುತ್‌ದೀಪಗಳಿಗೆ ಬಳಕೆಯಾಗುವ ಎಲ್‌ಟಿ ವಿದ್ಯುತ್‌ ಬಳಕೆಗೆ ಪ್ರತಿ ಯುನಿಟ್‌ಗೆ 3. 40 ರೂ.ನಿಂದ 3.90 ರೂ ಹಾಗೂ ಎಚ್‌ಟಿ ಬಳಕೆಗೆ 4 ರೂ. 10 ಪೈಸೆಯಿಂದ 4 ರೂ. 50 ಪೈಸೆ ಹೆಚ್ಚಿಸಲಾಗಿದೆ ಎಂದರು.

ಎಲ್‌ಇಡಿ, ಇಂಡಕ್ಷನ್ ಬೀದಿದೀಪಗಳಿಗೆ ವಿದ್ಯುತ್ ರಿಯಾಯಿತಿ ನೀಡಲು ಪ್ರತಿ ಯುನಿಟ್ ಗೆ 4 ರೂ. 50 ಪೈಸೆ ದರ ಮುಂದುವರಿಸಲಾಗಿದೆ ಎಂದರು.

ವಿದ್ಯಾ ಸಂಸ್ಥೆಗಳು ಮತ್ತು ಆಸ್ಪತ್ರೆಗಳಿಗೆ ಮೊದಲ 200 ಯುನಿಟ್ ಬಳಕೆಗೆ 6 ರೂ. 25 ಪೈಸೆ ಅದಕ್ಕಿಂತ ಹೆಚ್ಚಿನ ಬಳಕೆಗೆ 7 ರೂ. 45 ಪೈಸೆ ನಿಗದಿಪಡಿಸಲಾಗಿದೆ ಎಂದರು. ಇದಲ್ಲದೆ ವಿಶೇಷ ಆರ್ಥಿಕ ವಲಯಕ್ಕೆ ವಿದ್ಯುತ್ ಕೊಂಡುಕೊಳ್ಳುವವರಿಗೆ ಪ್ರತಿ ಯುನಿಟ್‌ಗೆ 6 ರೂ. 50 ಪೈಸೆಯಿಂದ 6 ರೂ. 55 ಪೈಸೆಗೆ ಹೆಚ್ಚಿಸಲಾಗಿದೆ ಎಂದು ಹೇಳಿದರು.

Write A Comment