ಕರ್ನಾಟಕ

ಸತ್ತರೂ ಬಿಡದ ಪ್ರೇಮಿಯ ಕಾಟ

Pinterest LinkedIn Tumblr

FFFF

ಚಿತ್ರ : ಜೆಸ್ಸಿ
ನಿರ್ದೇಶಕ: ಪವನ್ ಒಡೆಯಾರ್
ತಾರಾಗಣ: ಧನಂಜಯ್,ಪಾರೂಲ್ ಯಾದವ್,ರಘು ಮುಖರ್ಜಿ,ಸುಮಲತಾ ಅಂಬರೀಶ್,ರಾಮಕೃಷ್ಣ,ಸುಧಾ ಬೆಳವಾಡಿ, ಗೌತಮಿ,ಸಾಧು ಕೋಕಿಲಾ ಮತ್ತಿತರು
ರೇಟಿಂಗ್: **

ಪ್ರಾಣ ಹೋಗುವಾಗ ಹುಡುಗಿ ನೋಡಿ ಮನಸ್ಸಾದ ಹುಡುಗನ ಅತ್ಮವೊಂದು ಪ್ರಾಣ ಹೋದ ಮೇಲೂ ಆಕೆಯನ್ನು ಕಾಡಿ ಬೇಡಿ ಕಾಟ ಕೊಡುವ ಕತೆಯ ಹಂದರ ಹೊಂದಿರುವ ಚಿತ್ರ “ಜೆಸ್ಸಿ”.

ಬಹಳ ವರ್ಷಗಳ ಹಿಂದೆ ತೆರೆಗೆ ಬಂದಿದ್ದ “ನಿನ್ಯಾರೆ”,ಇತ್ತೀಚಿನ “ಶಿವಲಿಂಗ” ಹಾಗು ಆಪ್ತಮಿತ್ರ ಚಿತ್ರದ ಒಂದಷ್ಟು ತಿರುಳು ಸೇರಿಸಿದರೆ ಅದುವೇ ” ಜೆಸ್ಸಿ”. ಒಂದರ್ಥದಲ್ಲಿ ಕನ್ನಡ ಚಿತ್ರಗಳದ್ದೇ ರಿಮೇಕ್.

ಮೊದಲಾರ್ದ “ನಿನ್ಯಾರೆ” ಚಿತ್ರವನ್ನು ಕಣ್ಣಮುಂದೆ ತಂದರೆ, ಉಳಿದಾರ್ಧದಲ್ಲಿ ಶಿವಲಿಂಗ ಮತ್ತು ಆಪ್ತಮಿತ್ರ ಚಿತ್ರಗಳೇ ಕಾಣಿಸುತ್ತದೆ. ಅಷ್ಟರ ಮಟ್ಟಿಗೆ ನಿರ್ದೇಶಕ ಪವನ್ ಒಡೆಯಾರ್ ಹಲವು ಚಿತ್ರಗಳ ಸನ್ನಿವೇಶವನ್ನು ಒಟ್ಟಿಗೆ ಕಟ್ಟಿಕೊಟ್ಟು ಅದಕ್ಕೆ ಜೆಸ್ಸಿ ಎಂದು ನಾಮಕರಣ ಮಾಡಿದ್ದಾರೆ.

ಹಳೆಯ ಮದ್ಯವನ್ನು ಹೊಸ ಬಾಟಲಿಯಲ್ಲಿ ಹಾಕಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ .ಜೊತೆಗೆ ಹೊಂಗೆ ಬೆಟ್ಟದ ತುದಿ,ಆಸ್ಪತ್ರೆ ಹಾಗು ಮನೆಯಲ್ಲಿ ಚಿತ್ರವನ್ನು ಪೂರ್ಣಗೊಳಿಸಿ ತೆರೆಗೆ ತಂದಿದ್ದಾರೆ.

ವೈದ್ಯೆಯಾಗಿ ಮೊದಲು ನೋಡಿದ ರೋಗಿಯೇ ಗೊಟಕ್ ಅನ್ನುತ್ತಾನೆ ಇದರಿಂದ ಆಘಾತಕ್ಕೊಳಗಾದ ನಂದಿನಿ ( ಪಾರೂಲ್ ಯಾದವ್) ಬೆಟ್ಟದ ಮೇಲಿನ ದೇವರಿಗೆ ಪೂಜೆ ಸಲ್ಲಿಸಲು ತೆರಳಿದ್ದಾಗ ಜೆಸ್ಸಿಗಿಫ್ಟ್ ( ಧನಂಜಯ) ಪ್ರೀತಿಸುವಂತೆ ಅಂಗಲಾಚುತ್ತಾನೆ.ಆತನಿಗೆ ಪ್ರೀತಿಸುವುದಾಗಿ ಹೇಳಿ ಶಾಕ್ ಕೊಡಬೇಕು ಎಂದು ಅಂದುಕೊಂಡವಳಿಗೆ ಆತ ಸತ್ತು ಒಂದೂವರೆ ವರ್ಷವಾಗಿದೆ ಎನ್ನುವ ಸತ್ಯ ಕೇಳಿ ಆಕಾಶವೇ ಕಳಚಿ ಬಿದ್ದವಳಂತಾಗುತ್ತಾಳೆ.

ಇತ್ತ ಮನೆಯವರ ಒತ್ತಾಯಕ್ಕೆ ಮಣಿದು ಶ್ಯಾಮ್ (ರಘು ಮುಖರ್ಜಿ)ಯನ್ನು ಮದುವೆಯಾಗುತ್ತಾಳೆ ಅಲ್ಲಿಂದಲೇ ಅಸಲಿ ಆಟ ಶುರು. ಸತ್ಯ ತಿಳಿದುಕೊಳ್ಳುವ ವೇಳೆಗೆ ಶ್ಯಾಮ್ ಹೈರಾಣವಾಗುತ್ತಾನೆ ಅಷ್ಟಕ್ಕೂ ನಡೆಯುವುದಾದರೂ ಏನು ಎನ್ನುವುದು ಚಿತ್ರದ ತಿರುಳು.

ಚಿತ್ರದಲ್ಲಿ ಬೇಕೋ ಬೇಡವೋ ಆಗಾಗ ಮಳೆ ಸುರಿಸಿರುವ ನಿರ್ದೇಶಕ ಪವನ್, ನಾಯಕ ಧನಂಜಯ್‌ಗಿಂತ ನಾಯಕಿ ಪಾರೂಲ್ ಯಾದವ್‌ಗೆ ಪ್ರತಿ ಸನ್ನಿವೇಶದಲ್ಲಿಯೂ ಒತ್ತು ನೀಡಿರುವುದು ಎದ್ದು ಕಾಣುತ್ತದೆ.ಹಾಗೆ ನೋಡಿದರೆ ಆತ್ಮವಾಗಿ ಕಾಣಸಿಕೊಳ್ಳುವ ಧನಂಜಯ್‌ಗೆ ಸಿಕ್ಕ ಅವಕಾಶವನ್ನು ಪಾರೂಲ್ ಬಳಸಿಕೊಂಡಿದ್ದಾರೆ. ದ್ವಿತೀಯಾರ್ದದಲ್ಲಿ ಬರುವ ರಘು ಮುಖರ್ಜಿಯೇ ನಾಯಕ ಜೊತೆಗೆ ಪಾತ್ರಕ್ಕೂ ಒಂದಷ್ಟು ಮಹತ್ವವಿದೆ.

ಚಿಕ್ಕಣ್ಣ ಸಪ್ಪೆಯಾಗಿದ್ದಾರೆ ಇರುವುದರಲ್ಲಿ ಕೆಲವೇ ಕೆಲವು ಸನ್ನಿವೇಶಗಳಲ್ಲಿ ಕಾಣಿಸಿಕೊಂಡರೂ ಸಾಧು ಕೋಕಿಲ ನಗಿಸುತ್ತಾರೆ,ಹಿರಿಯ ಕಲಾವಿದರಾದ ಸುಮಲತಾ ಅಂಬರೀಶ್,ಅವಿನಾಶ್.ರಾಮಕೃಷ್ಣ,ಸುಧಾ ಬೆಳವಾಡಿ ಚಿತ್ರದಲ್ಲಿದ್ದಾರೆ.

ಅರುಳ್ ಸೋಮಸುಂದರನ್ ಕ್ಯಾಮರಾದಲ್ಲಿ ನಿಸರ್ಗದ ಸೌಂದರ್ಯವನ್ನು ಸೊಗಸಾಗಿ ಚಿತ್ರಿಸಿಕೊಡುವ ಕೆಲಸ ಮಾಡಿದ್ದಾರೆ .ಅನೂಪ್ ಸೀಳಿನ್ ಸಂಗೀತದ ಅಬ್ಬರಲ್ಲಿ ಮೊದಲಾರ್ಧ ಹಾಡುಗಳು ಗೌಣವಾಗಿವೆ ಉಳಿದಂತೆ ಪರವಾಗಿಲ್ಲ.

ಒಟ್ಟಿನಲ್ಲಿ ಗಾಂದಿನಗರಕ್ಕೆ ದೆವ್ವ,ಆತ್ಮದ ಕಾಟ ಶುರುವಾಗಿದೆ. ಪ್ರೇಕ್ಷಕರಿಗೆ ಅಕ್ಕ ಪಕ್ಕದ ಚಿತ್ರಮಂದಿರಗಳಲ್ಲಿ ಆತ್ಮದ ಹಾರಾಟ ಚೀರಾಟ ನೋಡಬೇಕಾಗಿದೆ.

Write A Comment