ಕರ್ನಾಟಕ

ಮರಳು ಮಾಫಿಯಾ ಸಚಿವರ ಮಕ್ಕಳ ಕೈವಾಡ: ಹೆಚ್‌ಡಿಕೆ ಆರೋಪ

Pinterest LinkedIn Tumblr

HD-Kumarswamyclr-636x400ಮೈಸೂರು, ಮಾ. ೨೮ – ಪ್ರಭಾವಿ ಸಚಿವರ ಮಕ್ಕಳೇ ಮರಳು ಮಾಫಿಯಾ ನೇತೃತ್ವ ವಹಿಸಿ, ಅಕ್ರಮವಾಗಿ ಕೇರಳಕ್ಕೆ ನಿತ್ಯ ರಾತ್ರಿ ಕೋಟ್ಯಂತರ ರೂ. ಮೌಲ್ಯದ ಮರಳು ಸಾಗಣೆ ಮಾಡುತ್ತಿರುವುದಕ್ಕೆ ರಾಜ್ಯ ಸರ್ಕಾರದ ಬೆಂಬಲವೂ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಖಾಸಗಿ ಕಾರ್ಯಕ್ರಮದ ನಿಮಿತ್ತ ನಗರಕ್ಕೆ ಆಗಮಿಸಿದ್ದ ಅವರು, ಸುದ್ದಿಗಾರರ ಜೊತೆ ಮಾತನಾಡಿದರು. ರಾಜ್ಯ ಸರ್ಕಾರ ಅಕ್ರಮ ಮರಳು ಸಾಗಣೆದಾರರ ಪರ ನಿಂತಿದ್ದು, ಸಚಿವರ ಮಕ್ಕಳ ನೇತೃತ್ವದಲ್ಲೇ ಅಕ್ರಮ ಮರಳು ಸಾಗಿಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಅಕ್ರಮ ಮರಳು ಸಾಗಣೆ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಜೊತೆಗೆ ಅಧಿಕಾರಿಗಳ ಮೇಲಿನ ಹಲ್ಲೆ ಅವರ ಆತ್ಮಸ್ಥೈರ್ಯವನ್ನೇ ಕುಗ್ಗಿಸಿದೆ. ಅಕ್ರಮ ಮರಳು ತಡೆಗೆ ಹೋದ ಉನ್ನತ ಪೊಲೀಸ್ ಅಧಿಕಾರಿಗಳ ಮೇಲೆ ದಾಳಿ ನಡೆಯುತ್ತಿದ್ದು, ಕರ್ನಾಟಕವನ್ನು ಬಿಹಾರ, ಉತ್ತರಪ್ರದೇಶದ ರೀತಿ ಜಂಗಲ್ ರಾಜ್ಯ ಮಾಡಲು ರಾಜ್ಯ ಸರ್ಕಾರ ಹೊರಟಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇತ್ತೀಚೆಗೆ ಮುಖ್ಯಮಂತ್ರಿ ಜಿಲ್ಲೆಯಲ್ಲೇ ಮರಳು ದಂಧೆಕೋರರಿಂದ ಪೊಲೀಸರ ಮೇಲೆ ಹಲ್ಲೆ ನಡೆದಿತ್ತು. ಆದರೆ ಈ ಕುರಿತು ಈವರೆಗೆ ಎಫ್‌ಐಆರ್ ದಾಖಲಿಸಿಲ್ಲ. ಇದು ಮರಳು ದಂಧೆಕೋರರಿಗೆ ಸರ್ಕಾರ ನೀಡುತ್ತಿರುವ ಶ್ರೀರಕ್ಷೆ ಎಂದು ಕುಮಾರಸ್ವಾಮಿ ದೂರಿದರು.

Write A Comment