ಕರ್ನಾಟಕ

ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತಲು ಮಹಿಳೆಯರಿಗೆ ಕರೆ

Pinterest LinkedIn Tumblr

mahiಬೆಂಗಳೂರು, ಮಾ. ೨೧ – ಮಹಿಳೆಯರು ತಮ್ಮ ತಮ್ಮ ನೋವುಗಳಿಗೆ ಸ್ಪಂದಿಸಿ ತಮ್ಮ ವಿರುದ್ಧ ನಡೆಯುವ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತಬೇಕೆಂದು ಮಾಜಿ ಸಚಿವೆ ಮೋಟಮ್ಮ ಕರೆ ನೀಡಿದ್ದಾರೆ.
ಪ್ರದೇಶ ಮಹಿಳಾ ಕಾಂಗ್ರೆಸ್ ವತಿಯಿಂದ ನಗರದ ಪುರ ಭವನದಲ್ಲಿಂದು ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದಿನ ಕಾಲದ ಮಹಿಳೆಯರು ಎದುರಿಸುತ್ತಿರುವ ಸವಾಲುಗಳೇ ಬೇರೆಯಾಗಿದ್ದವು, ಆದರೆ ಪ್ರಸಕ್ತ ಕಾಲದ ಮಹಿಳೆಯರು ಎದುರಿಸುತ್ತಿರುವ ಸವಾಲುಗಳೇ ಭಿನ್ನವಾಗಿವೆ.
ನಮ್ಮೆಲ್ಲರ ಮೇಲೆ ಹೊಣೆ
ಪುರುಷರಿಗೆ ಸರಿಸಮಾನವಾಗಿ ಮಹಿಳೆ ಸ್ಪರ್ಧಿಸಿದ್ದರೂ ಎಲ್ಲೋ ಒಂದು ಕಡೆ ಮಹಿಳೆ ಸೋಲುತ್ತಿದ್ದಾಳೆ. ಇದರ ಕಾರಣಗಳನ್ನು ಹುಡುಕಿ ಮಹಿಳೆಗೆ ಸಮಾನ ಅವಕಾಶ ದೊರಕಿಸಿಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರ, ಲೈಂಗಿಕ ಕಿರುಕುಳಗಳನ್ನು ಗಂಭೀರವಾಗಿ ತೆಗೆದುಕೊಂಡು ಅವುಗಳ ವಿರುದ್ಧ ಹೋರಾಟ ರೂಪಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.
ಗುರಿ ಸಾಧನೆ ಇನ್ನೂ ಇಲ್ಲ
ಮಾಜಿ ಸಂಸದೆ ರಮ್ಯಾ ಮಾತನಾಡಿ, ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಬೆಳೆದು ಬರುವಾಗ ಸವಾಲುಗಳು ಇದ್ದೇ ಇರುತ್ತವೆ. ಅವುಗಳನ್ನು ಮೆಟ್ಟಿ ನಿಂತು ಸಾಧನೆ ಮಾಡಬೇಕಿದೆ. ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ಸಿಕ್ಕಿದರೂ ಗುರಿ ಸಾಧನೆ ಇನ್ನೂ ಆಗಿಲ್ಲ ಎಂದು ಹೇಳಿದರು.
ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಮಹಿಳೆ ಸ್ವಾಭಿಮಾನ, ತ್ಯಾಗದ ಪ್ರತೀಕವಾಗಿದ್ದಾಳೆ. ತನ್ನ ಹಕ್ಕುಗಳ ಬಗ್ಗೆ ಜಾಗೃತಳಾಗಿ ಅವುಗಳನ್ನು ಪಡೆದುಕೊಳ್ಳಲು ಹೋರಾಟ ನಡೆಸಬೇಕು ಎಂದು ಹೇಳಿದರು.
ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ದೇಶಾದ್ಯಂತ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿದ್ದು, ಇದರ ಅಂಗವಾಗಿ ಬೆಂಗಳೂರಿನಲ್ಲೂ ವರ್ಣಮಯ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷೆ ಶೋಭಾ ಓಝಾ, ಮಾಜಿ ಸಚಿವೆ ರಾಣಿ ಸತೀಶ್, ಮುಖಂಡರಾದ ರಾಜಶ್ರೀ ನಾಗರಾಜ್, ವಿಜಯಲಕ್ಷ್ಮಿ ಅರಸು, ವಿದ್ಯಾ ಮಾರ್ಕುಂಬಿ, ಸುಧಾ ಬರಗೂರು, ವಾಸಂತಿ ಶಿವಣ್ಣ ಹಾಗೂ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷೆ ಬಲ್ಕಿಸ್ ಬಾನು, ಜಲಜಾ ನಾಯಕ್, ಕಮಲಮ್ಮ, ಸೀತಾ ಮತ್ತಿತರರು ಹಾಜರಿದ್ದರು.

Write A Comment