ಕರ್ನಾಟಕ

ಮಧ್ಯಾಹ್ನ ೧೨ ಗಂಟೆಗೂ ಕಚೇರಿಗೆ ಬಾರದ ಬಿಬಿಎಂಪಿ ಸಿಬ್ಬಂದಿ

Pinterest LinkedIn Tumblr

bbmpಬೆಂಗಳೂರು, ಮಾ. ೨೧- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತರ ಕಚೇರಿಯಲ್ಲಿ ಸಮಯ ೧೨ ಗಂಟೆಯಾಗಿದ್ದರೂ ಶೇ. ೭೦ರಷ್ಟು ಅಧಿಕಾರಿಗಳು ಮತ್ತು ನೌಕರರು ಕಚೇರಿಗೆ ಹಾಜರಾಗದೆ ಗೈರು ಹಾಜರಾಗಿರುವ ಬಗ್ಗೆ ಬಿಬಿಎಂಪಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ರಾಜಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.
ಬೊಮ್ಮನಹಳ್ಳಿ ವಲಯದಲ್ಲಿ ಬೋಗಸ್ ಖಾತೆ ಮಾಡಲಾಗುತ್ತಿದೆ ಎಂಬ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ೧೧ ಗಂಟೆಗೆ ಜಂಟಿ ಆಯುಕ್ತರ ಕಚೇರಿಗೆ ಸಮಿತಿ ಸದಸ್ಯರೊಂದಿಗೆ ದಿಢೀರ್ ಭೇಟಿ ನೀಡಿದಾಗ ಸಂಬಂಧಪಟ್ಟ ಕಡತಗಳನ್ನು ಪರಿಶೀಲಿಸಲು ಅಧಿಕಾರಿ ಮತ್ತು ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಗೈರು ಹಾಜರಾಗಿದ್ದರು.
ಜಂಟಿ ಆಯುಕ್ತರ ಕಚೇರಿ, ನಗರ ಯೋಜನೆ, ಕಂದಾಯ ವಿಭಾಗ ಒಳಗೊಂಡಂತೆ ನಾನಾ ವಿಭಾಗಗಳ ಕಚೇರಿಗಳಲ್ಲಿ ಶೇ. ೭೦ರಷ್ಟು ಅಧಿಕಾರಿ ಮತ್ತು ನೌಕರರು ಗೈರು ಹಾಜರಾಗಿರುವುದು ಹಾಜರಾತಿ ಪುಸ್ತಕವನ್ನು ಪರಿಶೀಲಿಸಿದಾಗ ಗೊತ್ತಾಯಿತು.
ತಕ್ಷಣವೇ ಹಾಜರಾತಿ ಪುಸ್ತಕವನ್ನು ತಮ್ಮ ವಶಕ್ಕೆ ತೆಗೆದುಕೊಂಡು ಅಧ್ಯಕ್ಷ ರಾಜಣ್ಣ, ಗೈರು ಹಾಜರಾದ ಅಧಿಕಾರಿ ಮತ್ತು ನೌಕರರಿಗೆ ಪುಸ್ತಕದಲ್ಲಿ ಕೆಂಪು ಶಾಹಿಯಿಂದ ಗೈರು ಎಂದು ತಾವೇ ಬರೆದು ಉಳಿದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಕಚೇರಿಗೆ ಹಾಜರಾಗಿದ್ದ ಉಳಿದ ಅಧಿಕಾರಿಗಳನ್ನು ಕಡತಗಳನ್ನು ತನ್ನಿ ಎಂದಾಗ ಅವರು, ಯಾವ ಕಡತ ಎಲ್ಲಿದೆ ಎಂದು ತಡಬಡಾಯಿಸಿದರು.
ದ್ವಿತೀಯ ದರ್ಜೆ ಗುಮಾಸ್ತ ಪುರುಷೋತ್ತಮ ಎಂಬುವವರು ರೆವಿನ್ಯೂ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರೂ ಇವರ ಮೇಲೆ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದ್ದರೂ ಅವರನ್ನು ಸೇವೆಯಲ್ಲಿ ಮುಂದುವರೆಸಿದ್ದೇ ಅಲ್ಲದೇ ಮತ್ತೊಂದು ಹುದ್ದೆಗೆ ನೇಮಕ ಮಾಡಿದ್ದನ್ನು ಸಮಿತಿಯ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಪುರುಷೋತ್ತಮನನ್ನು ಕಚೇರಿಗೆ ಕರೆಸುವ ಪ್ರಯತ್ನ ನಡೆಸಲಾಯಿತಾದರು ಆತ ಸುಮಾರು ಒಂದೂವರೆ ಗಂಟೆಗಳಾದರೂ ಕಚೇರಿಗೆ ಬಂದಿರಲಿಲ್ಲ. ಬೊಮ್ಮನಹಳ್ಳಿ ವಲಯದಲ್ಲಿ ಬೋಗಸ್ ಖಾತೆ ಸೃಷ್ಟಿಸಲಾಗುತ್ತಿದೆ ಎಂಬ ದೂರುಗಳಿವೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಮೇಯರ್ ಅವರಿಗೆ ಪತ್ರ ಬರೆಯುವುದಾಗಿ ಅಧ್ಯಕ್ಷ ರಾಜಣ್ಣ ಸುದ್ದಿಗಾರರಿಗೆ ತಿಳಿಸಿದರು.

Write A Comment