ಕರ್ನಾಟಕ

ಎಸಿಬಿಗೆ ಛೀಮಾರಿ : ಲೋಕಾಯುಕ್ತ ಸಮಾಧಿಗೆ ಪ್ರತಿಪಕ್ಷ ಆಕ್ರೋಶ

Pinterest LinkedIn Tumblr

viಬೆಂಗಳೂರು, ಮಾ. ೨೧- ಲೋಕಾಯುಕ್ತರ ಅಧಿಕಾರವನ್ನು ಮೊಟಕುಗಳಿಸಲು ತರಾತುರಿಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ ರಚನೆ ಮಾಡಿರುವ ಸರ್ಕಾರದ ಧೋರಣೆಯನ್ನು ವಿಧಾನಸಭೆಯಲ್ಲಿಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ವಿರೋಧ ಪಕ್ಷದ ನಾಯಕ ಜಗದೀಶ್‌ಶೆಟ್ಟರ್, “ಸರ್ಕಾರ ರಚನೆ ಮಾಡಿರುವುದು ಭ್ರಷ್ಟಾಚಾರ ನಿಗ್ರಹ ದಳವಲ್ಲ, ಅದು ಭ್ರಷ್ಟಾಚಾರ ರಕ್ಷಣಾ ದಳ”ವಾಗಿದೆ ಎಂದು ಆರೋಪಿಸಿದರು.
ಲೋಕಾಯುಕ್ತ ಸಂಸ್ಥೆಯನ್ನು ಏನೆಲ್ಲಾ ದುರ್ಬಲಗೊಳಿಸಬೇಕೋ ಹಾಗೆ ಮಾಡಿ ಆ ಸಂಸ್ಥೆಯನ್ನು ಮುಚ್ಚುವ ಹುನ್ನಾರ ಸರ್ಕಾರದಿಂದ ಆಗುತ್ತಿದೆ. ಮುಖ್ಯಮಂತ್ರಿಯವರ ಅಧೀನದಲ್ಲಿರುವ ಭ್ರಷ್ಟಾಚಾರ ನಿಗ್ರಹ ದಳದಿಂದ ಭ್ರಷ್ಟಾಚಾರ ತಡೆಯಲು ಸಾಧ್ಯವಿಲ್ಲ. ತಮಗೆ ಆಪ್ತರಾದ ಅಧಿಕಾರಿಗಳನ್ನು ನಿಗ್ರಹ ದಳಕ್ಕೆ ನೇಮಿಸಿ ತಮ್ಮ ಇಚ್ಛೆಯಂತೆ ನಡೆಸಿಕೊಳ್ಳಲು ಹೊರಟಿರುವಂತಿದೆ ಎಂದು ಅವರು ಆಕ್ಷೇಪಿಸಿದರು.
ಭ್ರಷ್ಟಾಚಾರ ನಿಗ್ರಹ ದಳ ರಚನೆಗೆ ವಿರೋಧಿಸಿ ನಿಯಮ 69 ರಡಿ ಸುದೀರ್ಘವಾಗಿ ಚರ್ಚೆ ಮಾಡಿದ ಜಗದೀಶ್‌ಶೆಟ್ಟರ್ ಸುಪ್ರೀಂ ಕೋರ್ಟ್ ಆದೇಶವನ್ನು ಒಂದು ನೆಪವಾಗಿಟ್ಟುಕೊಂಡು ಈ ದಳವನ್ನು ರಚಿಸಲಾಗಿದೆ. ಆದರೆ ಸುಪ್ರೀಂ ಕೋರ್ಟ್ ತೀರ್ಪನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಕಾನೂನು ಸಚಿವರು ಮತ್ತು ಕಾನೂನು ಇಲಾಖೆ ಅಧಿಕಾರಿಗಳು ತೀರ್ಪನ್ನು ಓದದೆ ತರಾತುರಿಯಲ್ಲಿ ಈ ದಳ ರಚನೆಗೆ ಮುಂದಾಗಿದ್ದಾರೆ ಎಂದು ಟೀಕಿಸಿದರು.
ತರಾತುರಿಯಲ್ಲಿ ಭ್ರಷ್ಟಾಚಾರ ನಿಗ್ರಹ ದಳವನ್ನು ರಚಿಸಲಾಗಿದೆ. ಆಡಳಿತಕ್ಕೆ ಸಂಬಂಧಿಸಿದ ಯಾವುದೇ ಕಡತಗಳು ಇಷ್ಟು ವೇಗವಾಗಿ ಅನುಮೋದನೆ ಪಡೆದುಕೊಂಡಿಲ್ಲ. ಆದರೆ ದಳ ರಚನೆ ಕುರಿತ ಕಡತಕ್ಕೆ ಯುದ್ಧೋಪಾದಿ ಆತುರಾತುರವಾಗಿ ಅಂಕಿತ ಹಾಕಲಾಗಿದೆ. ಇದರ ಜರೂರು ಏನಿತ್ತು ಎಂದು ಅವರು ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು.
ಸರ್ವಪಕ್ಷ ಸಭೆಯಲ್ಲೂ ಚರ್ಚೆ ಮಾಡಿಲ್ಲ. ಕನಿಷ್ಠ ಪಕ್ಷ ಸಭಾಧ್ಯಕ್ಷರ ನೇತೃತ್ವದಲ್ಲಿ ನಡೆಯುವ ಸದನ ಕಲಾಪ ಸಲಹಾ ಸಮಿತಿ ಸಭೆಯಲ್ಲೂ ಚರ್ಚೆಯಾಗಿಲ್ಲ. 1998 ರಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು 16 ವರ್ಷಗಳ ನಂತರ ಮುಂದಿಟ್ಟುಕೊಂಡು ಭ್ರಷ್ಟಾಚಾರ ನಿಗ್ರಹ ದಳ ರಚನೆ ಮಾಡಲು ಸರ್ಕಾರ ಮುಂದಾಗಿದ್ದರ ಗುಟ್ಟೇನು ಎಂದು ಅವರು ತರಾಟೆಗೆ ತೆಗೆದುಕೊಂಡರು.
ಈ ಮೂಲಕ ಲೋಕಾಯುಕ್ತ ಸಂಸ್ಥೆಗೆ ಬೀಗ ಜಡಿಯುವ ಕೆಲಸ ನಡೆದಿದೆ. ನಿಗ್ರಹ ದಳವನ್ನು ರಚನೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸುತ್ತಮತ್ತಲಿನವರ ಸಲಹೆ ಮೇರೆಗೆ ಎಡವಟ್ಟು ಮಾಡಿಕೊಂಡಿದ್ದಾರೆ. ಕಾನೂನು ಸಚಿವ ಜಯಚಂದ್ರರವರ ಸಲಹೆಯೂ ಇದಕ್ಕೆ ಕಾರಣವಾಗಿರಬಹುದು. ಆದರೆ ಕಾನೂನು ಸಚಿವರು ಹಿಂದೆ ಕೆಲವು ಎಡವಟ್ಟುಗಳನ್ನು ಮಾಡಿದ್ದಾರೆ. ಮೌಢ್ಯ ನಿಷೇಧದಂತಹ ಕಾಯ್ದೆ ಜಾರಿಗೆ ತರುತ್ತೇವೆ ಎಂದು ಹೇಳಿ, ನಂತರ ಅದನ್ನು ಕೈ ಬಿಡಲಾಗಿದೆ ಎಂದು ಅವರು ಹೇಳಿದರು.
ಜಗದೀಶ್‌ಶೆಟ್ಟರ್‌ರವರು ಸುಪ್ರೀಂ ಕೋರ್ಟ್‌ನ ತೀರ್ಪಿನ ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಿ ಸರ್ಕಾರ ಕೈಗೊಂಡ ನಿರ್ಧಾರದ ಹಿಂದಿನ ಲೋಪದೋಷಗಳನ್ನು ಎತ್ತಿ ಹಿಡಿದರು.
ಲೋಕಾಯುಕ್ತ ಸಂಸ್ಥೆಗೆ ಹೆಚ್ಚಿನ ಶಕ್ತಿ ತುಂಬಬೇಕು. ಆ ಮೂಲಕ ಭ್ರಷ್ಟಾಚಾರ ತಪ್ಪಿಸಲು ಸರ್ಕಾರ ಮತ್ತು ಲೋಕಾಯುಕ್ತ ನಡುವೆ ಸಮಾಲೋಚನೆ ನಡೆಯಬೇಕು ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ನೆಪವಾಗಿಟ್ಟುಕೊಂಡು ಸರ್ಕಾರ ಭ್ರಷ್ಟಾಚಾರ ನಿಗ್ರಹ ದಳ ರಚನೆ ಮಾಡಿದೆ ಎಂದು ಅವರು ಟೀಕಿಸಿದರು.
ನಿಲುವಳಿ ಸೂಚನೆಗೆ ಯತ್ನ
ಇದಕ್ಕೂ ಮುನ್ನ ಜಗದೀಶ್‌ಶೆಟ್ಟರ್ ಭ್ರಷ್ಟಾಚಾರ ನಿಗ್ರಹ ದಳ ರಚನೆಗೆ ಮಾಡಿರುವ ಕ್ರಮವನ್ನು ವಿರೋಧಿಸಿ ನಿಲುವಳಿ ಸೂಚನೆ ಮಂಡಿಸಲು ಅವಕಾಶ ನೀಡಬೇಕು ಎಂದು ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪರವರಿಗೆ ಮನವಿ ಮಾಡಿಕೊಂಡರು.
ಅದಕ್ಕೆ ಒಪ್ಪದ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಈ ವಿಚಾರವನ್ನು ನಿಯಮ 69 ರಡಿ ಚರ್ಚಿಸಲು ಅವಕಾಶ ನೀಡುವೆ. ಪ್ರಶ್ನೋತ್ತರ ಬದಿಗೊತ್ತಲಾಗುವುದು. ಈಗಲೇ ನೀವು ಚರ್ಚೆ ಆರಂಭಿಸಿ ಎಂದಾಗ, ಶೆಟ್ಟರ್‌ರವರು ಮಾತನಾಡಲು ಮುಂದಾದರು.

Write A Comment