ಅಂತರಾಷ್ಟ್ರೀಯ

ಕ್ಯೂಬಾಕ್ಕೆ ಒಬಾಮ ಐತಿಹಾಸಿಕ ಭೇಟಿ: 88 ವರ್ಷಗಳ ನಂತರ ಕ್ಯೂಬಾಕ್ಕೆ ಭೇಟಿ ನೀಡುತ್ತಿರುವ ಮೊದಲ ಅಮೆರಿಕ ಅಧ್ಯಕ್ಷ

Pinterest LinkedIn Tumblr

obamawebಹವಾನ (ಎಪಿ): 88 ವರ್ಷಗಳ ಬಳಿಕ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷರೊಬ್ಬರು ಕ್ಯೂಬಾ ಮಣ್ಣಿನಲ್ಲಿ ಕಾಲಿರಿಸಿದರು. ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಅವರು ಸೋಮವಾರ ಕ್ಯೂಬಾ ರಾಜಧಾನಿ ಹವಾನಕ್ಕೆ ಭೇಟಿ ನೀಡುವ ಮೂಲಕ ಉಭಯ ದೇಶಗಳ ಬಾಂಧವ್ಯದಲ್ಲಿ ಐತಿಹಾಸಿಕ ಮೈಲುಗಲ್ಲು ಸ್ಥಾಪಿಸಿದರು.
ಕಮ್ಯುನಿಸ್ಟ್‌ ರಾಷ್ಟ್ರ ಕ್ಯೂಬಾ ಜತೆಗಿನ ಸುಮಾರು 53 ವರ್ಷಗಳ ಹಗೆತನ ಅಂತ್ಯಗೊಳಿಸಲು ಅಮೆರಿಕ ಮುಂದಾಗಿದೆ. ಎರಡೂ ದೇಶಗಳ ರಾಜತಾಂತ್ರಿಕ ಸಂಬಂಧಗಳ ಮರುಸ್ಥಾಪನೆಯ ಯತ್ನದ ಭಾಗವಾಗಿ ಒಬಾಮ ಭೇಟಿ ಭಾರಿ ಮಹತ್ವ ಪಡೆದುಕೊಂಡಿದೆ. ಇತ್ತೀಚಿಗಷ್ಟೇ ಎರಡೂ ದೇಶಗಳು ಪರಸ್ಪರ ರಾಯಭಾರಿ ಕಚೇರಿ ಪುನರಾರಂಭಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
‘ಈಗಷ್ಟೇ ಕ್ಯೂಬಾ ನೆಲದಲ್ಲಿ ಬಂದಿಳಿದಿದ್ದೇನೆ. ಇನ್ನೇನು ಇಲ್ಲಿನ ಜನರನ್ನು ನೇರವಾಗಿ ಭೇಟಿಯಾಗಲಿದ್ದೇನೆ. ಅವರ ಮಾತುಗಳನ್ನು ಇಲ್ಲಿಂದಲೇ ಆಲಿಸಲಿದ್ದೇನೆ’ ಎಂದು ಒಬಾಮ ಟ್ವೀಟ್‌ ಮಾಡಿದ್ದಾರೆ.
ಕಳೆದ ಮಾರ್ಚ್‌ನಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮತ್ತು ಕ್ಯೂಬಾ ಅಧ್ಯಕ್ಷ ರಾಲ್ ಕ್ಯಾಸ್ಟ್ರೊ ಪನಾಮಾದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಎರಡೂ ದೇಶಗಳು ರಾಯಭಾರ ಕಚೇರಿಗಳನ್ನು ಮತ್ತೆ ತೆರೆಯಲು ಒಪ್ಪಿಕೊಂಡಿದ್ದವು. ಇದರೊಂದಿಗೆ ಶೀತಲ ಸಮರ ಕಾಲದ ಹಗೆತನದ ಕೊನೆಯ ಅವಶೇಷವೂ ಕಳಚಿ ಬಿದ್ದಂತಾಗಿತ್ತು.

Write A Comment