ಕರ್ನಾಟಕ

ವಿಚಾರಣಾಧೀನ ಆರೋಪಿ ಸಾವು : ಇನ್‌ಸ್ಪೆಕ್ಟರ್ ಸೇರಿದಂತೆ ಆರು ಜನ ಸಿಬ್ಬಂದಿ ಅಮಾನತು

Pinterest LinkedIn Tumblr

bang

ಬೆಂಗಳೂರು: ಚಿನ್ನಾಭರಣ ಕಳವು ಆರೋಪದಡಿ ವಿಚಾರಣೆಗೆಂದು ಠಾಣೆಗೆ ಕರೆತಂದಿದ್ದ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಘಟನೆ ಹಿನ್ನೆಲೆಯಲ್ಲಿ ಇನ್‌ಸ್ಪೆಕ್ಟರ್ ಸೇರಿದಂತೆ ಆರು ಜನ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ಅವರು ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದು, ಪ್ರಕರಣದ ಗಂಭೀರತೆ ಅರಿತು ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಜೀವನ್‌ಬಿಮಾ ನಗರ ಠಾಣೆಯಲ್ಲಿ ವಿಚಾರಣೆಗೆ ಕರೆತಂದಿದ್ದ ಒರಿಸ್ಸಾ ಮೂಲದ ಮಹೇಂದ್ರ (45) ಅನುಮಾನಾಸ್ಪದವಾಗಿ ಮೃತಪಟ್ಟಿರುವ ವ್ಯಕ್ತಿ. ಎಚ್‌ಎಎಲ್ ಬಳಿಯ ಮನೆಯೊಂದರಲ್ಲಿ 12 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಈತನ ವಿರುದ್ಧ ಚಿನ್ನಾಭರಣ ಕಳವು ಮಾಡಿರುವ ಬಗ್ಗೆ ಮನೆ ಮಾಲೀಕ ಜೀವನ್‌ ಬಿಮಾ ನಗರ ಠಾಣೆಗೆ ದೂರು ನೀಡಿದ್ದರು.

ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಜೀವನ್‌ಬಿಮಾ ನಗರ ಠಾಣೆ ಪೊಲೀಸರು ಮನೆ ಕೆಲಸಗಾರ ಮಹೇಂದ್ರನನ್ನು ನಿನ್ನೆ ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ ರಾತ್ರಿ ಮಹೇಂದ್ರನಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಕೂಡಲೆ ಆತನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಿಸದೆ ಮಹೇಂದ್ರ ಮೃತಪಟ್ಟಿದ್ದಾನೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಬೌರಿಂಗ್ ಆಸ್ಪತ್ರೆಯಲ್ಲಿ ಇಡಲಾಗಿದೆ. ಸುದ್ದಿ ತಿಳಿದು ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ಅವರು ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಘಟನೆ ಕುರಿತು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್, ಡಿಸಿಪಿ ಸತೀಶ್‌ಕುಮಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದಾರೆ.

ಸಿಐಡಿ ತನಿಖೆ: ಪೊಲೀಸ್ ವಶದಲ್ಲಿದ್ದ ಮಹೇಂದ್ರನ ಸಾವಿನ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗುತ್ತಿದೆ ಎಂದು ಡಿಸಿಪಿ ಸತೀಶ್‌ಕುಮಾರ್ ತಿಳಿಸಿದ್ದಾರೆ. ಸಭೆ ನಂತರ ಸುದ್ದಿಗಾರರ ಜತೆ ಮಾತನಾಡಿರುವ ಅವರು, ಮನೆ ಮಾಲೀಕರು ನೀಡಿದ್ದ ದೂರಿನ ಮೇರೆಗೆ ಮಹೇಂದ್ರನನ್ನು ವಿಚಾರಣೆಗೆ ಕರೆತರಲಾಗಿತ್ತು.ಈ ವೇಳೆ ಆತ ಎದೆನೋವು ಎಂದು ಹೇಳಿದ್ದು, ಕೂಡಲೇ ಆತನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಮಾರ್ಗಮಧ್ಯೆ ಆತ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿಸಿದ್ದಾರೆ. ಇಂದು ಮೃತನ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ವೈದ್ಯಕೀಯ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ ಎಂದು ಹೇಳಿದ್ದಾರೆ.

ಪ್ರಕರಣದ ತನಿಖೆ ಸಿಐಡಿಯನ್ನು ಡಿಐಜಿ ಸೋನಿಯಾ ನಾರಂಗ್ ಅವರ ನೇತೃತ್ವದಲ್ಲಿ ಅಧಿಕಾರಿಗಳು ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಅಮಾನತು: ಪೊಲೀಸ್ ವಶದಲ್ಲಿದ್ದ ವ್ಯಕ್ತಿ ಅನುಮಾನಾಸ್ಪದ ಸಾವು ಪ್ರಕರಣದ ಹಿನ್ನೆಲೆಯಲ್ಲಿ ಜೀವನ್‌ಬಿಮಾ ನಗರ ಠಾಣೆ ಇನ್‌ಸ್ಪೆಕ್ಟರ್, ಸಬ್‌ಇನ್‌ಸ್ಪೆಕ್ಟರ್ ಹಾಗೂ ನಾಲ್ವರು ಕಾನ್‌ಸ್ಟೆಬಲ್‌ಗಳನ್ನು ಅಮಾನತುಗೊಳಿಸಲಾಗಿದೆ. ಇನ್‌ಸ್ಪೆಕ್ಟರ್ ಹಿತೇಂದ್ರ, ಸಬ್‌ಇನ್‌ಸ್ಪೆಕ್ಟರ್ ರಾಜಶೇಖರ್, ಕಾನ್‌ಸ್ಟೆಬಲ್‌ಗಳಾದ ಏಜಾಜ್, ಸಿದ್ದಪ್ಪ , ಕೇಶವರಾಜ್ ಮ್ತು ಮೋಹನ್ ಅಮಾನತುಗೊಂಡವರು.

ಪ್ರಕರಣ ಕುರಿತು ಪೊಲೀಸ್ ಆಯುಕ್ತ ಹಾಗೂ ಹಿರಿಯ ಅಧಿಕಾರಿಗಳ ಸಭೆ ನಂತರ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್ ಅವರು ಇನ್‌ಸ್ಪೆಕ್ಟರ್ ಸೇರಿದಂತೆ ಆರು ಮಂದಿ ಸಿಬ್ಬಂದಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಮಾಹಿತಿ ಸಂಗ್ರಹ: ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಿರುವ ಹಿನ್ನೆಲೆಯಲ್ಲಿ ಸಿಐಡಿಯ ಡಿಐಜಿ ಸೋನಿಯಾ ನಾರಂಗ್ ಅವರು ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಪ್ರಕರಣದ ಕುರಿತು ಹಿರಿಯ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

Write A Comment