ಕರ್ನಾಟಕ

ಸಿದ್ದುಗೆ ತರಾಟೆ : ಎಸಿಬಿ ರಚನೆ ಏಕಾಏಕಿ ನಿರ್ಧಾರಕ್ಕೆ ವರಿಷ್ಠರ ಆಕ್ಷೇಪ

Pinterest LinkedIn Tumblr

sidduಬೆಂಗಳುರು, ಮಾ. ೨೦ – ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹ ದಳ-ಎಸಿಬಿ ಸ್ಥಾಪನೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಯ ವಿರುದ್ದ ಕಾಂಗ್ರೆಸ್ ಹೈಕಮಾಂಡ್ ಅಸಮಾಧಾನ ವ್ಯಕ್ತಪಡಿಸಿರುವುದೂ ಅಲ್ಲದೆ, ಪಕ್ಷದ ಸಭೆಯಲ್ಲಿ ಚರ್ಚೆ ನಡೆಸದೆ ಏಕಾ ಏಕಿ ನಿರ್ಧಾರ ಕೈಗೊಂಡಿದ್ದೇಕೆ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

* ಭ್ರಷ್ಟಾಚಾರ ನಿಗ್ರಹದಳ ರಚನೆ ಕಾಂಗ್ರೆಸ್‌ನಲ್ಲಿ ಅಪಸ್ವರ.
* ಮುಖ್ಯಮಂತ್ರಿಗಳ ನಿರ್ಧಾರದ ವಿರುದ್ಧ ಹೈಕಮಾಂಡ್‌ಗೆ ಹಿರಿಯ ನಾಯಕರ ದೂರು.
* ಪಕ್ಷದಲ್ಲಿ ಚರ್ಚೆ ನಡೆಸದೆ ನಿರ್ಧಾರ ಕೈಗೊಂಡಿದ್ದೇಕೆ ಸಿಎಂಗೆ ತರಾಟೆ.
* ಎಸ್.ಎಂ. ಕೃಷ್ಣ ಕೂಡ ಬಹಿರಂಗ ಅಸಮಾಧಾನ.
* ಸಿಎಂ ನಾಯಕತ್ವ ಬದಲಾಯಿಸುವಂತೆ ಮನವಿ.
* ಹೈಕಮಾಂಡ್ ನಿರ್ಧಾರ ಕುತೂಹಲಕ್ಕೆ ಎಡೆ.

ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಸ್ಥಾಪಿಸುವ ಮುನ್ನ ಪೂರ್ವ ಭಾವಿ ಸಭೆ ನಡೆಸದೆ ಏಕಾ-ಏಕಿ ನಿರ್ಧಾರ ಕೈಗೊಳ್ಳಲಾಗಿದೆ ಇದರಿಂದಾಗಿ ಪಕ್ಷದ ಬರ್ಚಸ್ಸನ್ನು ಧಕ್ಕೆಯಾಗಿದೆ ಎಂದು ಪಕ್ಷದ ಹಿರಿಯ ನಾಯಕರುಗಳು ಹೈಕಮಾಂಡ್‌ಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸರ್ಕಾರದ ವಿರುದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗು ಉಪಾಧ್ಯಕ್ಷ ರಾಹುಲ್ ಗಾಂಧಿ ಗರಂ ಆಗಿದ್ದಾರೆ.
ಭ್ರಷ್ಟಾಚಾರ ನಿಗ್ರಹ ದಳ ಸ್ಥಾಪನೆ ಮಾಡಿರುವ ಸರ್ಕಾರದ ನಿರ್ಧಾರ ಸರಿಯಲ್ಲ. ಎಸಿಬಿ ಸ್ಥಾಪನೆಗೂ ಮುನ್ನ ಪಕ್ಷದ ವೇದಿಕೆಯಲ್ಲಿ ಯಾಕೆ ಚರ್ಚೆ ಮಾಡಿಲ್ಲ. ರಾಜ್ಯ ಉಸ್ತುವಾರಿಯಾಗಿ ನೀವೇನು ಮಾಡುತ್ತಿದ್ದೀರಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರನ್ನು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಪಕ್ಷಕ್ಕೆ ಮುಜುಗರ
ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷದ ನಾಯಕರನ್ನು ಸಂಪರ್ಕಿಸದೆ ಪಕ್ಷದ ವೇದಿಕೆಯಲ್ಲಿಯೂ ಚರ್ಚೆ ಮಾಡದೆ ಕೆಲವು ನಿರ್ಧಾರಗಳನ್ನು ತಮ್ಮಿಷ್ಟಕ್ಕೆ ತಾವೇ ಕೈಗೊಳ್ಳುತ್ತಾರೆ.ಇದರಿಂದಾಗಿ ಸಾರ್ವಜನಿಕ ವಲಯದಲ್ಲಿ ಪಕ್ಷ ಮುಜುಗರದ ಸನ್ನಿವೇಶ ಎದುರಿಸುವಂತಾಗಿದೆ ಅಲ್ಲದೆ ಪಕ್ಷದ ವರ್ಚಸ್ಸಿಗೂ ಧಕ್ಕೆ ಆಗುತ್ತಿದೆ ಎಂದು ರಾಜ್ಯದ ಕೆಲವು ಹಿರಿಯ ನಾಯಕರು ಹೈಕಮಾಂಡ್‌ಗೆ ದೂರು ಸಲ್ಲಿಸಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದರು.
ನೇರವಾಗಿ ತರಾಟೆ
ಪಕ್ಷದ ನಾಯಕರ ದೂರಿನ ಹಿನ್ನೆಲೆಯಲ್ಲಿ ರಂಗ ಪ್ರವೇಶ ಮಾಡಿರುವ ಹೈಕಮಾಂಡ್, ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದು ಕೊಂಡಿದೆ.ನೀವು ಈ ರೀತಿ ನಡೆದುಕೊಂಡರೆ ಪಕ್ಷದ ದೃಷ್ಟಿಯಿಂದ ಸರಿ ಕಾಣುವುದಿಲ್ಲ. ಸರ್ಕಾರದ ನಡೆ ಸರಿಯಿಲ್ಲ ಎಂದು ನೇರವಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದೆ ಎಂದು ವಿಶ್ವಸನೀಯ ಮೂಲಗಳು ಖಚಿತ ಪಡಿಸಿವೆ.
ಲೋಕಾಯುಕ್ತ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕೇ ಹೊರತು ಅದರ ನಿಷ್ಕ್ರೀಯಗೊಳಿಸುವ ಕೆಲಸ ಮಾಡುವುದು ಸರಿಯಲ್ಲ, ಭ್ರಷ್ಟಾಚಾರ ನಿಗ್ರಹ ದಳ ಸ್ಥಾಪನೆ ಸರಿಯಲ್ಲ ಎಂದು ಹಿರಿಯ ನಾಯಕ ಹಾಗು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ನೇರವಾಗಿಯೇ ಸಿದ್ದರಾಮಯ್ಯ ಅವರ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ಕೆಲವು ನಾಯಕರೂ ಧ್ವನಿಗೂಡಿಸಿ ಮುಖ್ಯಮಂತ್ರಿ ನಡೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು.
ಸಮಜಾಷಿಗೆ ಯತ್ನ
ಭ್ರಷ್ಟಾಚಾರ ನಿಗ್ರಹ ದಳ ಸ್ಥಾಪನೆಯ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದರೂ, ಪಕ್ಷದಲ್ಲಿ ಪೂರ್ವಭಾವಿ ಚರ್ಚೆ ನಡೆಸದೆ ಏಕಾ ಏಕಿ ನಿರ್ಧಾರ ಕೈಗೊಂಡಿದ್ದದು ಸರಿಯಲ್ಲ. ಈ ರೀತಿ ಮಾಡಿದರೆ ಸರಿ ಕಾಣೋದಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಎಚ್ಚರಿಕೆ ಸಂದೇಶ ನೀಡಿದೆ.
ಬೆಂಕಿಗೆ ಇನ್ನಷ್ಟು ತುಪ್ಪ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುಬಾರಿ ವಾಚ್ ಪ್ರಕರಣದಿಂದ ಸಿಟ್ಟಿಗೆದ್ದಿದ್ದ ಹೈಕಮಾಂಡ್ ಮತ್ತೊಮ್ಮೆ ಗರಂ ಆಗಿದೆ. ಇದಕ್ಕೆ ತುಪ್ಪ ಸುರಿಯುವಂತೆ ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ನಾಯಕತ್ವ ಬದಲಾಯಿಸುವಂತೆ ಕೆಲ ನಾಯಕರು ಹೈಕಮಾಂಡ್ ಮೊರೆ ಹೋಗಿರುವುದು ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.
ಮುಂದಿನ ದಿನಗಳಲ್ಲಿ ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತದೆಯೋ ಎನ್ನುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

Write A Comment