ಕರ್ನಾಟಕ

ಗುಬ್ಬಿ ಕೆರೆಯಲ್ಲಿ ಬೀಡುಬಿಟ್ಟ ಕಾಡಾನೆಗಳ ಹಿಂಡು: ಗ್ರಾಮಸ್ಥರಲ್ಲಿ ತೀವ್ರ ಆತಂಕ

Pinterest LinkedIn Tumblr

ELEPHANTಗುಬ್ಬಿ, ಮಾ.19- ಐದು ಕಾಡಾನೆಗಳ ಹಿಂಡು ಗುಬ್ಬಿ ಕೆರೆಯಲ್ಲಿ ಬೀಡುಬಿಟ್ಟಿದ್ದು, ಅಕ್ಕಪಕ್ಕದ ತೋಟಗಳಿಗೆ ನುಗ್ಗಿ ಬಾಳೆ, ತೆಂಗು, ರಾಗಿ, ಮುಸುಕಿನ ಜೋಳದ ಬೆಳೆಗಲನ್ನು ಹಾಳು ಮಾಡುತ್ತಿವೆ. ಇದರಿಂದ ಗ್ರಾಮಸ್ಥರಲ್ಲಿ ತೀವ್ರ ಆತಂಕ ಎದುರಾಗಿದೆ. ಕಳೆದ ರಾತ್ರಿಯಿಂದ 5 ಕಾಡಾನೆಗಳು ಅಡಗೂರು ಅರಣ್ಯ ಪ್ರದೇಶದಲ್ಲಿ ತಂಗಿದ್ದು, ಅಡಗೂರು, ಹಳೇಗುಬ್ಬಿ, ಸಿಂಗೋನಹಳ್ಳಿ, ಕಳ್ಳಿಪಾಳ್ಯ ಮುಂತಾದ ಗ್ರಾಮಗಳ ರೈತರ ಬೆಳೆಗಳನ್ನು ಸಂಪೂರ್ಣವಾಗಿ ಹಾಳುಮಾಡಿವೆ. ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು ಆನೆಗಳ ಚಲನವಲನಗಳ ಬಗ್ಗೆ ತೀವ್ರ ನಿಗಾವಹಿಸಿದ್ದು, ರೈತರು ಮತ್ತು ಸಾರ್ವಜನಿಕರಿಗೆ ಕಾಡಾನೆಗಳಿಂದ ಯಾವುದೇ ರೀತಿಯ ಹಾನಿಯಾಗದಂತೆ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದಾರೆ.

ಕಾಡಾನೆಗಳನ್ನು ಅಡಗೂರು ಅರಣ್ಯ ಪ್ರದೇಶದಿಂದ ಅವುಗಳು ಬಂದ ದಾರಿಯಲ್ಲೆ ಹಿಂದಿರುಗಿಸಲು ಅರಣ್ಯ ಇಲಾಖೆ 42 ಸಿಬ್ಬಂದಿಗಳ ತಂಡ ರಚಿಸಿದೆ. ಬನ್ನೇರುಘಟ್ಟದಿಂದ ನುರಿತ ತಜ್ಞರನ್ನು ಕರೆಸಿಕೊಳ್ಳಲಾಗಿದೆ. ಆನೆಗಳನ್ನು ಹಿಂದಿರುಗಿಸುವಾಗ ಅವುಗಳನ್ನು ಗಾಬರಿಗೊಳಿಸುವುದಾಗಲಿ ಅಥವಾ ಗುಂಪು ಗುಂಪಾಗಿ ಗಲಾಟೆ ಮಾಡುವುದಾಗಲಿ ಮಾಡಬಾರದೆಂದು ಸಾರ್ವಜನಿಕರಿಗೆ ವಲಯ ಅರಣ್ಯಾಧಿಕಾರಿ ಆರ್.ರಮೇಶ್ ಮನವಿ ಮಾಡಕೊಂಡಿದ್ದಾರೆ. ಕಾಡಾನೆಗಳಿಂದ ರೈತರ ಬೆಳೆ ನಾಶವಾಗಿದ್ದರೆ ಅಂತಹ ರೈತರು ಅರಣ್ಯ ಇಲಾಖೆಗೆ ಮನವಿ ಸಲ್ಲಿದರೆ ಇಲಾಖೆಯಿಂದ ಬೆಳೆ ನಷ್ಟಕ್ಕೆ ಸೂಕ್ತವಾದ ಪರಿಹಾರ ಕೊಡಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಹಳೇಗುಬ್ಬಿ ರೈತ ರಂಗಸ್ವಾಮಿ ಮತ್ತಿತರರು ಬೆಳೆ ಕಳೆದುಕೊಂಡು ಕಂಗಾಲಾಗಿದ್ದೇವೆ ಎಂದು ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡರು.ವಲಯ ಅರಣ್ಯಾಧಿಕಾರಿ ಆರ್.ರಮೇಶ್ ಮಾತನಾಡಿ, ಸಂಜೆಯಾಗುತ್ತಿದ್ದಂತೆ ಆನೆಗಳು ಸಂಚಾರ ಆರಂಭಿಸುವುದರಿಂದ ಸಿಂಗೋನಹಳ್ಳಿ, ಹಳೇಗುಬ್ಬಿ, ಪ್ರಭುವನಹಳ್ಳಿ, ಎಂ.ಹೆಚ್.ಪಟ್ಣ, ಅಡಗೂರು, ಮುದಿಗೆರೆ, ದೊಡ್ಡನೆಟಗುಂಟೆ ಮುಂತಾದ ಗ್ರಾಮಗಳ ಜನರು ಸಂಜೆ ವೇಳೆ ಮನೆಯಿಂದ ಹೊರ ಬಾರದಂತೆ ಎಚ್ಚರ ವಹಿಸಬೇಕೆಂದು ಮನವಿ ಮಾಡಿದ್ದಾರೆ.

Write A Comment