ಕರ್ನಾಟಕ

ಪಂಚಾಯ್ತಿ ಮೈತ್ರಿ ಕುರಿತು ಸ್ಥಳೀಯವಾಗಿ ತೀರ್ಮಾನ ಕೈಗೊಳ್ಳಲು ಜೆಡಿಎಸ್ ಸಮಾವೇಶದಲ್ಲಿ ನಿರ್ಧಾರ

Pinterest LinkedIn Tumblr

JDSಬೆಂಗಳೂರು, ಮಾ.19-ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಸ್ಥಳೀಯವಾಗಿ ತೀರ್ಮಾನ ಕೈಗೊಳ್ಳಲು ಇಂದು ನಡೆದ ಜೆಡಿಎಸ್ ಸಮಾವೇಶದಲ್ಲಿ ನಿರ್ಧರಿಸಲಾಯಿತು. ಅರಮನೆ ಮೈದಾನದಲ್ಲಿ ಇಂದು ನಡೆದ ಗ್ರಾಮ ಪಂಚಾಯ್ತಿಯಲ್ಲಿ ಚುನಾಯಿತರಾದ ಪಕ್ಷ ಬೆಂಬಲಿತ ಸದಸ್ಯರು, ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು, ಕಳೆದ ವಿಧಾನಸಭೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳನ್ನೊಳಗೊಂಡ ಸಮಾವೇಶದಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿಗಳ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಸ್ಥಳೀಯ ಶಾಸಕರು, ಜಿಲ್ಲಾಧ್ಯಕ್ಷರು ಹಾಗೂ ಸ್ಥಳೀಯ ಮುಖಂಡರು ತೀರ್ಮಾನ ಕೈಗೊಳ್ಳುವ ಅವಕಾಶವನ್ನು ಸಮಾವೇಶದಲ್ಲಿ ನೀಡಲಾಗಿದೆ.

ಅತಂತ್ರ ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿಗಳಲ್ಲಿ ಪಕ್ಷಕ್ಕೆ ಅನುಕೂಲವಾಗುವ ರೀತಿಯಲ್ಲಿ ಕಾಂಗ್ರೆಸ್ ಇಲ್ಲವೆ, ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಅಧಿಕಾರವನ್ನು ಸ್ಥಳೀಯರಿಗೆ ನೀಡಲಾಗಿದೆ. ಮೈತ್ರಿಗೆ ಸಂಬಂಧಿಸಿದಂತೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ನಾಯಕರು ಯಾವುದೇ ಷರತ್ತನ್ನು ವಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಅಧಿಕಾರಕ್ಕೆ ತರಲು ಶಪಥ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಸಂಘಟನೆ ಮಾಡಲು ನಿರ್ಧರಿಸಲಾಗಿದೆ. ಬೇರು ಮಟ್ಟದಿಂದ ಪಕ್ಷ ಸಂಘಟನೆ ಮಾಡಿ 2018ಕ್ಕೆ ನಡೆಯುವ ಚುನಾವಣೆಯಲ್ಲಿ ಅಧಿಕಾರ ಹಿಡಿಯಬೇಕು. ಅದಕ್ಕಾಗಿ ಈಗಿನಿಂದಲೇ ಪಕ್ಷದ ಎಲ್ಲಾ ಕಾರ್ಯಕರ್ತರು, ಮುಖಂಡರು ಪಕ್ಷದ ಬಲವರ್ಧನೆಗೆ ಶ್ರಮಿಸುವಂತೆ ವರಿಷ್ಠರು ಕರೆ ನೀಡಿದರು.

ಚುನಾವಣೆಯಲ್ಲಿ ಸೋತಿರುವ ಅಭ್ಯರ್ಥಿಗಳು ವಿಚಲಿತರಾಗದೆ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು ಎಂಬ ಕರೆಯನ್ನು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನೀಡಿದರು. ರಾಜ್ಯಾದ್ಯಂತ ತಾವು ಹಾಗೂ ಪಕ್ಷದ ರಾಜ್ಯಾಧ್ಯಕ್ಷರಾದ ಎಚ್.ಡಿ.ಕುಮಾರಸ್ವಾಮಿ ಅವರು ಪ್ರವಾಸ ಕೈಗೊಂಡು ಪಕ್ಷ ಸಂಘಟನೆಗೆ ಒತ್ತು ನೀಡುವ ಭರವಸೆ ನೀಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ, ರೈತ ವಿರೋಧಿ, ಜನ ವಿರೋಧಿ ನೀತಿಗಳ ವಿರುದ್ಧ ಹೋರಾಟ ಕೈಗೊಂಡು ರಾಷ್ಟ್ರೀಯ ಪಕ್ಷಗಳ ಸಮಾನಾಂತರ ದೂರ ಕಾಯ್ದುಕೊಂಡು ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ನ್ನು ಸಂಘಟಿಸಬೇಕು ಎಂದು ಸಲಹೆ ಮಾಡಲಾಯಿತು.

Write A Comment