ಕರ್ನಾಟಕ

ನ್ಯಾಯಾಲಯದ ನೇಣಿನ ಕುಣಿಕೆಯಿಂದ ಪಾರಾಗಿ ಬಂದ ಕೊಪ್ಪಳ ಮೂಲದ ಎಂಜಿನಿಯರ್..!

Pinterest LinkedIn Tumblr

galluಕೊಪ್ಪಳ, ಮಾ.18- ಮುಖ ಚಹರೆ ಒಂದೇ ರೀತಿ ಹೋಲುವ ಏಳು ಜನ ಪ್ರಪಂಚದಲ್ಲಿರುತ್ತಾರೆ ಎಂಬುದು ನಮ್ಮಲ್ಲಿನ ನಂಬಿಕೆ. ಇಂಥ ನಂಬಿಕೆಗಳಿಗೆ ಪುಷ್ಠಿ ನೀಡುವಂತೆ ಎಷ್ಟೋ ಬಾರಿ ನಾವು ನಮಗೆ ಗೊತ್ತಿರುವ ವ್ಯಕ್ತಿಗಳನ್ನೇ ಹೋಲುವಂಥ ಬೇರೊಬ್ಬರನ್ನು ನೋಡಿ ಗೊಂದಲಕ್ಕೆ ಒಳಗಾದ ಸನ್ನಿವೇಶಗಳು ಒಂದಾದರೂ ಇದ್ದೇ ಇರುತ್ತವೆ. ಇಂತಹ ಒಂದು ಗೊಂದಲವೇ ವ್ಯಕ್ತಿಯೊಬ್ಬ ನ್ಯಾಯಾಲಯದ ನೇಣಿನ ಕುಣಿಕೆಯಿಂದ ಪಾರಾಗಿ ಮೃತ್ಯುವನ್ನೇ ಗೆದ್ದು ಬಂದಿರುವ ವಿಲಕ್ಷಣ ಪ್ರಸಂಗವೊಂದು ಹಿಮಾಚಲ ಪ್ರದೇಶದಲ್ಲಿ ನಡೆದಿದೆ ಎಂದರೆ ನಂಬುತ್ತೀರಾ..? ನಂಬಲೇಬೇಕು. ಇನ್ನೂ ವಿಶೇಷವೆಂದರೆ ಆ ವ್ಯಕ್ತಿ ನಮ್ಮ ಕರ್ನಾಟಕದವನೇ. ಕೊಪ್ಪಳ ಜಿಲ್ಲೆ ಮೂಲದ ಎಂಜಿನಿಯರ್..!

ಘಟನೆ ವಿವರ:

2001ರ ನ.15ರಂದು ಶಿಮ್ಲಾದಲ್ಲಿ ದಂಪತಿ ಕೊಲೆ ನಡೆದಿದ್ದು, ಈ ಪ್ರಕರಣದಲ್ಲಿ ಶಿಮ್ಲಾ ಪೊಲೀಸರು ಆರೋಪಿ ಶ್ಯಾಮಲರಾವ್ ಎಂಬಾತನನ್ನು ಬಂಧಿಸಿದ್ದು, 2004ರಲ್ಲಿ ಆರೋಪಿಗೆ ಶಿಮ್ಲಾ ಜಿಲ್ಲೆ ಪ್ರಥಮ ದರ್ಜೆ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತ್ತು. ಅಪರಾಧಿಯನ್ನು ಸಹಾನ್ ಸೆಂಟ್ರಲ್ ಜೈಲಿನಲ್ಲಿ ಇರಿಸಲಾಗಿತ್ತು. ಕಳೆದ 12 ವರ್ಷಗಳ ಹಿಂದೆ ಅಪರಾಧಿ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದಾನೆ. ನಾಪತ್ತೆಯಾಗಿರುವ ಅಪರಾಧಿಗಾಗಿ ಶಿಮ್ಲಾ ಪೊಲೀಸರು ಶೋಧ ನಡೆಸುವಾಗ ಫೇಸ್‌ಬುಕ್‌ನಲ್ಲಿ ವ್ಯಕ್ತಿಯೊಬ್ಬರ ಫೋಟೋ ನೋಡಿದ್ದಾರೆ.ಆ ವ್ಯಕ್ತಿಯ ಹೆಸರು ಅಪರಾಧಿಯ ಹೆಸರು ಒಂದೇ ಆಗಿರುವುದಲ್ಲದೆ ಚಹರೆ ಸಹ ಹೋಲಿಕೆಯಾಗಿದೆ.

ತಲೆಮರೆಸಿಕೊಂಡಿರುವ ಅಪರಾಧಿಯೇ ಈತ ಎಂದು ಭಾವಿಸಿದ ಶಿಮ್ಲಾ ಪೊಲೀಸರು ಕೊಪ್ಪಳದ ಪೊಲೀಸರ ಸಹಕಾರ ಪಡೆದು ಮಾ.6ರಂದು ಗಂಗಾವತಿಯ ವಾಸಿ ಅನಿಮೇಷನ್ ಎಂಜಿನಿಯರ್ ಶ್ಯಾಮಲಾರಾವ್ ಅವರನ್ನು ಬಂಧಿಸಿ ಕರೆದೊಯ್ದಿದ್ದಾರೆ. ತಲೆಮರೆಸಿಕೊಂಡಿರುವ ಅಪರಾಧಿಯ ತಂದೆ ಹೆಸರು ನಾಯ್ಡುರೆಡ್ಡಿ ಆಗಿದ್ದರೆ, ಬಂಧಿತ ಎಂಜಿನಿಯರ್ ತಂದೆ ಹೆಸರು ನಾಯ್ಡು ಎಂದೇ ಇದೆ. ಗಂಗಾವತಿಯ ಶ್ಯಾಮಲರಾವ್ ಅವರು ಹಿಂದಿ, ಇಂಗ್ಲಿಷ್, ತೆಲುಗು ಭಾಷೆ ಬಲ್ಲವರಾಗಿದ್ದು, ಅಪರಾಧಿ ಶ್ಯಾಮಲರಾವ್ ಕೂಡ ಹಿಂದಿ, ಇಂಗ್ಲಿಷ್, ತೆಲುಗು ಭಾಷೆ ಮಾತನಾಡುತ್ತಾನೆ. ಚಹರೆ ಕೂಡ ಆತನನ್ನೇ ಹೋಲುತ್ತಿದ್ದರಿಂದ ಪೊಲೀಸರು ತಲೆಮರೆಸಿಕೊಂಡಿದ್ದ ಅಪರಾಧಿ ಬಂಧಿತ ವ್ಯಕ್ತಿಯೆ ಎಂದು ನಿರ್ಧರಿಸಿ ಆತನನ್ನೇ ಗಲ್ಲಿಗೇರಿಸಲು ಸಿದ್ಧತೆ ನಡೆಸಿದ್ದಾರೆ.

ಗಲ್ಲಿಗೇರಿಸುವ ಮುನ್ನ ನಡೆಸುವ ಪರೀಕ್ಷೆ, ತಪಾಸಣೆ ವೇಳೆ ಬಂಧಿತ ಶ್ಯಾಮಲಾರಾವ್ ತಲೆಮರೆಸಿಕೊಂಡಿರುವ ಅಪರಾಧಿಗಿಂತ ಎತ್ತರದಲ್ಲಿ ಎರಡು ಇಂಚು ಕಡಿಮೆ ಇರುವುದು ಹಾಗೂ ಕೂದಲ ಮಾದರಿ ಪರೀಕ್ಷೆಯಲ್ಲಿ ಅಪರಾಧಿಯನ್ನು ಹೋಲುತ್ತಿಲ್ಲ ಎಂಬುದು ಸಾಬೀತಾಗಿದೆ. ಆಗ ಪೊಲೀಸರು ಮುಖ ನೋಡಿ ಮೋಸ ಹೋಗಿರುವುದು ಅರಿವಾಗಿ ಗಂಗಾವತಿಯ ಶ್ಯಾಮಲರಾವ್ ಅವರು ಅಮಾಯಕನೆಂದು ಬಿಟ್ಟು ಕಳುಹಿಸಿದ್ದಾರೆ.

Write A Comment