ಕರ್ನಾಟಕ

ಸುಪಾರಿ ನೀಡಿ ಹೆತ್ತ ತಂದೆ-ತಾಯಿಯನ್ನೇ ಕೊಲೆ ಮಾಡಿಸಿದ್ದ ಪುತ್ರನ ಬಂಧನ

Pinterest LinkedIn Tumblr

supariತುಮಕೂರು, ಮಾ.18- ಪ್ರೀತಿಸಿದ ಹುಡುಗಿಯನ್ನು ಮದುವೆ ಆಗಲು ಪೋಷಕರು ಅಡ್ಡಿ ಪಡಿಸಿದ್ದರಿಂದ ಹೆತ್ತ ತಂದೆ-ತಾಯಿಯನ್ನೇ ಸುಪಾರಿ ನೀಡಿ ಕೊಲೆ ಮಾಡಿಸಿದ ಏಕೈಕ ಪುತ್ರ ಸೇರಿ 6 ಮಂದಿಯನ್ನು ತಿಲಕ್‌ಪಾರ್ಕ್ ವೃತ್ತ ಪೊಲೀಸರು ಬಂಧಿಸಿದ್ದಾರೆ. ತುಮಕೂರಿನ ಅಶೋಕನಗರದ ಧೀರಜ್(25), ಸುಪಾರಿ ಪಡೆದಿದ್ದ ಬೆಂಗಳೂರಿನ ಹರೀಶ್ (22), ಚಂದ್ರಮೌಳಿ(20), ರವಿ (26), ಆನಂದ (23) ಮತ್ತು ರಾಮಚಂದ್ರ (36) ಬಂಧಿತರು.

ಘಟನೆ ವಿವರ:

ಅಶೋಕನಗರದಲ್ಲಿ ವಾಸವಿದ್ದ ಧೀರಜ್ ರೈಸ್‌ಮಿಲ್ ಇಂಡಸ್ಟ್ರೀಸ್ ಮಾಲೀಕರಾದ ಗೋಪಾಲಶೆಟ್ಟಿ-ರೂಪಾ ದಂಪತಿಗೆ ಧೀರಜ್ ಎಂಬ ಏಕೈಕ ಪುತ್ರನಿದ್ದಾನೆ. ಧೀರಜ್ ಅಕ್ಕಿ ವ್ಯಾಪಾರ ನೋಡಿಕೊಳ್ಳುತ್ತಿದ್ದನು. ಈತ ಸುಮಾರು 7-8 ವರ್ಷಗಳಿಂದ ತುಮಕೂರು ಮೂಲದ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಆದರೆ, ಈತನ ಮನೆಯಲ್ಲಿ ತಮ್ಮ ಜಾತಿಯ ಹುಡುಗಿಯನ್ನೇ ಮದುವೆ ಮಾಡಿಕೊಳ್ಳಬೇಕೆಂದು ಪೋಷಕರು ಬುದ್ದಿ ಹೇಳಿದ್ದರು. ನೀನು ಪ್ರೀತಿಸಿದ ಹುಡುಗಿಯನ್ನು ಮದುವೆಯಾದಲ್ಲಿ ವಿಷ ಸೇವಿಸಿ ಸಾಯುವುದಾಗಿ ಪೋಷಕರು ಬೆದರಿಕೆ ಹಾಕಿದ್ದರು. ಇದರಿಂದ ಧೀರಜ್ ತಾನು ಪ್ರೀತಿಸಿದ ಹುಡುಗಿ ಸಿಗುವುದಿಲ್ಲ ಎಂದು ತಿಳಿದು ತಂದೆ-ತಾಯಿಯನ್ನೇ ಕೊಲೆ ಮಾಡಿಸಬೇಕೆಂಬ ಯೋಚನೆ ಮಾಡಿದ್ದಾನೆ.

ಅದರಂತೆ ಬೆಂಗಳೂರಿನ ಆರ್‌ಎಂಸಿಯಾರ್ಡ್‌ನಲ್ಲಿ ಅಕ್ಕಿ ವ್ಯಾಪಾರದ ಬ್ರೋಕರ್ ಕೆಲಸ ಮಾಡುವ ರಾಮಚಂದ್ರ ಎಂಬಾತನನ್ನು ಭೇಟಿಯಾಗಿ ತನ್ನ ಮನೆಯ ವಿಷಯ ತಿಳಿಸಿ ತಂದೆ-ತಾಯಿಯನ್ನು ಕೊಲೆ ಮಾಡಲು ತಿಳಿಸಿದ್ದಾನೆ. ರಾಮಚಂದ್ರ ತನ್ನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆನಂದ ಹಾಗೂ ಈತನ ಸ್ನೇಹಿತ ರವಿ ಎಂಬುವರನ್ನು ಧೀರಜ್ ಪರಿಚಯ ಮಾಡಿಸಿ ಕೊಲೆ ಮಾಡಲು ಸುಪಾರಿ ಪಡೆದಿದ್ದನು. ಈ ಹಿಂದೆ ವಿಷವನ್ನು ಮೆಡಿಷನಲ್ ಬಾಟಲಿನಲ್ಲಿ ಹಾಕಿ ಅದನ್ನು ಸಿರೆಂಜ್ ಮೂಲಕ ಪೋಷಕರು ಸೇವಿಸುವ ಆಹಾರದಲ್ಲಿ ಬೆರೆಸಿಕೊಡುವಂತೆ ಧೀರಜ್‌ಗೆ ನೀಡಲಾಗಿತ್ತು. ಆದರೆ, ಧೀರಜ್ ವಿಷದ ಘಾಟುವಾಸನೆ ಬರುತ್ತಿದ್ದುದ್ದರಿಂದ ಪೋಷಕರಿಗೆ ವಿಷ ಬೆರೆಸಿದರೆ ಗೊತ್ತಾಗುವುದೆಂದು ವಿಷವನ್ನು ಬೆರೆಸಿರಲಿಲ್ಲ.

ಇದಾದ ಬಳಿಕ ರಾಮಚಂದ್ರನಿಗೆ 9ಲಕ್ಷ ರೂ. ಸುಪಾರಿ ನೀಡಿ ಪೋಷಕರ ಕೊಲೆಯಾದ ತಕ್ಷಣ 5ಲಕ್ಷ ಕೊಡುವುದಾಗಿ ಒಪ್ಪಿಕೊಂಡು ಆನಂದ ಮತ್ತು ರವಿಗೆ ತುಮಕೂರಿಗೆ ಕರೆಸಿಕೊಂಡು ತನ್ನ ಮನೆಯನ್ನು ತೋರಿಸಿದ್ದನು. ಮಾ.13ರಂದು ಬೆಂಗಳೂರಿನಿಂದ ತುಮಕೂರಿಗೆ ಬಂದ ಇವರು ಅಂದು ಮಧ್ಯರಾತ್ರಿ 1.30ರಲ್ಲಿ ಪೋಷಕರು ಮಲಗಿರುವುದನ್ನು ಧೀರಜ್‌ನಿಂದ ಖಾತ್ರಿ ಪಡಿಸಿಕೊಂಡ ಹರೀಶ ಮತ್ತು ಚಂದ್ರ ಮನೆಯೊಳಗೆ ಹೋಗಿ ಹರಿತವಾದ ಆಯುಧದಿಂದ ದಂಪತಿಗಳನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಆ ಸಮಯದಲ್ಲಿ ಮನೆಯಲ್ಲಿದ್ದ ಧೀರಜ್ 5 ಲಕ್ಷ ರೂ. ನೀಡಿ ಕಳುಹಿಸಿದ್ದಾನೆ.

ಯಾರಿಗೂ ಅನುಮಾನ ಬರಬಾರದೆಂದು ಧೀರಜ್ ಮೊದಲು ತನ್ನ ಸ್ನೇಹಿತನಿಗೆ ಕರೆ ಮಾಡಿ ನಾನು ಹೊರಗೆ ಹೋಗಿದ್ದಾಗ ಪೋಷಕರನ್ನು ಯಾರೋ ಕೊಲೆ ಮಾಡಿ ಹೋಗಿದ್ದಾರೆಂದು ತಿಳಿಸಿದ್ದಾನೆ. ತದನಂತರ ಮುಂಜಾನೆ 3ಗಂಟೆಯಲ್ಲಿ ಹೊಸ ಬಡಾವಣೆ ಪೊಲೀಸ್ ಠಾಣೆಗೆ ತೆರಳಿ ನಾನು ಅರ್ಧ ರಾತ್ರಿಯಲ್ಲಿ ಕಾಫಿ ಕುಡಿಯಲು ಮನೆಯಿಂದ ಹೊರಗೆ ಹೊಗಿದ್ದ ವೇಳೆಯಲ್ಲಿ ದುಷ್ಕರ್ಮಿಗಳು ಮನೆಗೆ ನುಗ್ಗಿ ತನ್ನ ತಂದೆ-ತಾಯಿಯನ್ನು ಕೊಲೆ ಮಾಡಿದ್ದಾರೆ ಎಂದು ತಿಳಿಸಿದ್ದನು.ಈತನ ಸ್ನೇಹಿತ ಸತ್ಯನ್ ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ತುಮಕೂರು ಜಿಲ್ಲಾ ಪ್ರಬಾರ ಪೊಲೀಸ್ ಅಧೀಕ್ಷಕ ಚಂದ್ರಗುಪ್ತ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ.ಬಿ.ಮಂಜುನಾಥ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದರು.

ಈ ತಂಡ ಕಾರ್ಯಾಚರಣೆ ನಡೆಸುವಾಗ ಧೀರಜ್ ಮೇಲೆಯೇ ಸಂಶಯ ವ್ಯಕ್ತವಾದ್ದರಿಂದ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ನಿಜಾಂಶ ಬೆಳಕಿಗೆ ಬಂದಿದೆ. ತುಮಕೂರು ನಗರ ಉಪವಿಭಾಗದ ಪೊಲೀಸ್ ಅಧೀಕ್ಷಕ ಚಿದಾನಂದ ಸ್ವಾಮಿ ನೇತೃತ್ವದಲ್ಲಿ ತಿಲಕ್‌ಪಾರ್ಕ್ ವೃತ್ತ ನಿರೀಕ್ಷ ಬಾಳೇಗೌಡ, ಪಿಎಸ್‌ಐಗಳಾದ ರಾಧಾಕೃಷ್ಣ, ರಾಜು, ಸಿಬ್ಬಂದಿಗಳಾದ ಶಿವಣ್ಣ, ಸಿದ್ದಪ್ಪ, ಮೋಹನ್‌ಕುಮಾರ್, ನರಸಿಂಹರಾಜು, ರಮೇಶ್, ಸುರೇಶ್‌ನಾಯಕ್, ಸೈಮನ್ ಸೇರಿದಂತೆ ಸಿಬ್ಬಂದಿವರ್ಗ ಆರೋಪಿಗಳನ್ನು ಬಂಧಿಸುವಲ್ಲಿ ಶ್ರಮಿಸಿದ್ದಾರೆ.

Write A Comment