ಬೆಂಗಳೂರು, ಮಾ. ೧೮ – ದೇವರು, ಧರ್ಮದ ವ್ಯವಸ್ಥೆ ಮೋಸದ ವ್ಯವಸ್ಥೆಯಾಗಿದ್ದು, ಇದರಿಂದ ಸಾಧ್ಯವಾದಷ್ಟು ಜನರು ದೂರವಿರಬೇಕು ಎಂದು ಖ್ಯಾತ ಸಾಹಿತಿ, ವಿಮರ್ಶಕ ಕೆ.ಎಸ್. ಭಗವಾನ್ ನುಡಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ಮಹಟ್ ನಗರದ ಸೌದಾರ್ ಕೆರೆ ಸತ್ಯಾಗ್ರಹ ನಡೆಸಿದ ನೆನಪಿನಾರ್ಥ ಕಬ್ಬನ್ ಉದ್ಯಾನವನದ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ದಲಿತ ಸಂಘರ್ಷ ಸಮಿತಿ (ಸಮತಾ ವಾದ)ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಬೃಹತ್ ಜನಜಾಗೃತಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇವರು ಮತ್ತು ಧರ್ಮದ ಹೆಸರಿನಲ್ಲಿ ಜನರನ್ನು ಮೋಸಗೊಳಿಸುತ್ತಾ ಜಾತಿ ವ್ಯವಸ್ಥೆಯನ್ನು ಸದೃಢಗೊಳಿಸುವ ಕೆಲಸ ನಡೆಯುತ್ತಲೇ ಇದೆ.
ಜನರನ್ನು ಮಾನವೀಯತೆ ದೃಷ್ಟಿಯಿಂದ ನೋಡುವ ಕೆಲಸವಾಗುತ್ತಿಲ್ಲ ಎಂದರು.
ದೇವಸ್ಥಾನ ಕಟ್ಟುವಾಗ ಇಲ್ಲದ ಜಾತಿ ದೇವಾಲಯ ನಿರ್ಮಾಣವಾದ ನಂತರ ಅಡ್ಡ ಬರುವುದೇಕೆ ಎಂದು ಪ್ರಶ್ನಿಸಿದ ಅವರು, ಇದಕ್ಕೆಲ್ಲಾ ಮನುಸ್ಮೃತಿಯೇ ಮೂಲ ಕಾರಣ ಎಂದರು.
ಡಾ. ಅಂಬೇಡ್ಕರ್ ಅವರು 1925ರಲ್ಲಿ ಸೌದಾರ್ ಕೆರೆ ಸತ್ಯಾಗ್ರಹ ನಡೆಸುವ ಮೂಲಕ ಮನುಸ್ಮೃತಿಗೆ ಮಂಗಳ ಹಾಡಲು ಯತ್ನಿಸಿದರು ಎಂದು ಅವರು ವಿವರಿಸಿದರು.
ಉರಿಲಿಂಗ ತದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಮಾತನಾಡಿ, ದೇವರು ದೇವಾಲಯಗಳಲ್ಲಿ ಇದ್ದರೆ ಸಿಸಿಟಿವಿಗಳನ್ನು ಅಳವಡಿಸುವುದೇಕೆ?
ಗುಡಿ, ಚರ್ಚ್ಗಳನ್ನು ಬಿಟ್ಟು ಹೊರ ಬನ್ನಿ ಎಂದು ಕುವೆಂಪುರವರು ಹೇಳಿದ್ದರೂ ಮಂದಿರ, ಮಸೀದಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದು ಅಸಮಾನತೆಗೆ ಎಡೆಮಾಡಿಕೊಡುತ್ತಿದೆ ಎಂದರು.
ರಾಷ್ಟ್ರದಲ್ಲಿ ಅಸಮಾನತೆ, ಭ್ರಷ್ಟಾಚಾರ, ಅನಾಚಾರ ತಾಂಡವವಾಡುತ್ತಿದ್ದು, ಇದನ್ನು ಒಂದು ದೇಶವೆಂದು ಒಪ್ಪಿಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಅಧ್ಯಕ್ಷತೆಯನ್ನು ದಸಂಸ ರಾಜ್ಯಾಧ್ಯಕ್ಷ ಎಚ್. ಮಾರಪ್ಪ ವಹಿಸಿದ್ದರು. ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ್, ಪೆರಿಯಾರ್ ವಿಚಾರವಾದಿ ಕಲೈಸೆಲ್ವಿ ಮತ್ತಿತರರು ಭಾಗವಹಿಸಿದ್ದರು.