ಕರ್ನಾಟಕ

ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸುವಲ್ಲಿ ಎರಡನೇ ಸ್ಥಾನ

Pinterest LinkedIn Tumblr

sidduಬೆಂಗಳೂರು, ಮಾ. ೧೮- ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸಭೆಯಲ್ಲಿಂದು 11ನೇ ಬಾರಿಗೆ ಬಜೆಟ್ ಮಂಡಿಸುವ ಮೂಲಕ ರಾಜ್ಯದ ಬಜೆಟ್‌ನ್ನು ಹೆಚ್ಚು ಬಾರಿ ಮಂಡಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಸೇರಿದರು.

ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಒಟ್ಟು 13 ಬಾರಿ ಬಜೆಟ್ ಮಂಡಿಸಿದ್ದಾರೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರಿಗೆ ಇದು ಮೂರನೇ ಬಜೆಟ್ ಆಗಿದೆ. ಈ ಹಿಂದೆ ಅವರು ಹಣಕಾಸು ಸಚಿವರಾಗಿ 8 ಬಜೆಟ್‌ಗಳನ್ನು ಮಂಡಿಸಿದ್ದರು.

‌ಅಭಿನಂದನೆ

ರಾಜ್ಯದ ಬಜೆಟ್‌ನ್ನು ಮಂಡಿಸಲು ಅಧಿಕೃತ ನಿವಾಸ ಕಾವೇರಿಯಿಂದ ವಿಧಾನಸೌಧಕ್ಕೆ ಬೆಳಿಗ್ಗೆ 11ಕ್ಕೆ ಹೊರಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಚಿವ ಸಂಪುಟದ ಬಹುತೇಕ ಸಹೋದ್ಯೋಗಿಗಳು ಅಭಿನಂದಿಸಿ ಮಾದರಿ ಬಜೆಟ್ ನೀಡುವಂತೆ ಮನವಿ ಮಾಡಿದರು.

ಸಚಿವರಾದ ಮಹದೇವ ಪ್ರಸಾದ್, ಎಚ್. ಆಂಜನೇಯ, ಯು.ಟಿ. ಖಾದರ್, ಟಿ.ಬಿ. ಜಯಚಂದ್ರ ಸೇರಿದಂತೆ ಹಲವು ಸಚಿವರು ಮುಖ್ಯಮಂತ್ರಿಗಳನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಅಭಿನಂದಿಸಿದರು.

ನಂತರ ಸಚಿವರ ದಂಡಿನೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧಕ್ಕೆ ತೆರಳಿದರು. ಮಾಮೂಲಿನಂತೆ ಹಾಲಿನ ಕೆನೆಯ ಬಣ್ಣದ ರೇಷ್ಮೆ ಪಂಚೆ ಹಾಗೂ ಷರ್ಟ್ ಧರಿಸಿದ್ದ ಸಿದ್ದರಾಮಯ್ಯ, ಬಜೆಟ್ ಪ್ರತಿ ಇರುವ ಸೂಟ್‌ಕೇಸ್ ಹಿಡಿದು ವಿಧಾನಸೌಧದ ಬಳಿ ಕಾರಿನಿಂದ ಇಳಿಯುತ್ತಿದ್ದಂತೆಯೇ ಛಾಯಾಚಿತ್ರಗಾರರು ಅವರನ್ನು ಮುತ್ತಿಕೊಂಡರು.

ಬಜೆಟ್ ಪ್ರತಿ ಇರುವ ಸೂಟ್‌ಕೇಸ್‌ನ್ನು ಎತ್ತಿ ಹಿಡಿದು ಛಾಯಾಚಿತ್ರಗಾರರಿಗೆ ಮುಖ್ಯಮಂತ್ರಿಗಳು ಹಸನ್ಮುಖರಾಗಿ ಫೋಸ್ ನೀಡಿ ನಂತರ ಸಚಿವ ಸಂಪುಟ ಸಭೆಗೆ ತೆರಳಿದರು.

ಸಿಡಿಮಿಡಿಗೊಂಡ ಸಚಿವ ದೇಶಪಾಂಡೆ

ಖಾಸಗಿ ಚಾನೆಲ್‌ನ ಕ್ಯಾಮರಾಮೆನ್ ಒಬ್ಬರು ಮುಖ್ಯಮಂತ್ರಿಗಳ ದೃಶ್ಯವನ್ನು ಸೆರೆಹಿಡಿಯುವ ಬರದಲ್ಲಿ ತಮ್ಮ ಕ್ಯಾಮರಾವನ್ನು ಗೊತ್ತಿಲ್ಲದೆ ಅಕಸ್ಮಾತ್ ಮುಖ್ಯಮಂತ್ರಿಗಳ ಮುಂದೆ ಬರುತ್ತಿದ್ದ ಸಚಿವ ದೇಶಪಾಂಡೆ ಅವರ ಮುಖಕ್ಕೆ ತಗಲುಸಿದ್ದು, ದೇಶಪಾಂಡೆ ಅವರಿಗೆ ಸಿಟ್ಟು ತರಿಸಿ ಕ್ಯಾಮರಾಮೆನ್ ವಿರುದ್ಧ ದೇಶಪಾಂಡೆ ಅವರು ಸಿಡಿಮಿಡಿಗೊಂಡರು.

ಸಚಿವ ಸಂಪುಟ ಸಭೆಗೂ ಮುನ್ನ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಕುಳಿತು ಬಜೆಟ್ ಪ್ರತಿಯ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಣ್ಣಾಡಿಸಿದರು.

ಸಚಿವ ಸಂಪುಟ ಸಭೆಯಲ್ಲಿ ಬಜೆಟ್‌ಗೆ ಅನುಮೋದನೆ ನೀಡಲಾಯಿತು. ಸಚಿವ ಸಂಪುಟ ಸಭೆಯ ನಂತರ ನೇರವಾಗಿ ಮುಖ್ಯಮಂತ್ರಿ ಸೂಟ್‌ಕೇಸ್ ಹಿಡಿದು ವಿಧಾನಸಭೆಗೆ ಆಗಮಿಸಿದರು. ನಿಗದಿಯಂತೆ ವಿಧಾನಸಭೆಯಲ್ಲಿ ಬೆಳಗ್ಗೆ 11.35ಕ್ಕೆ ಸರಿಯಾಗಿ ಬಜೆಟ್ ಓದಲು ಆರಂಭಿಸಿದರು.

162 ಪುಟಗಳ ಬಜೆಟ್

ಬಜೆಟ್ ಭಾಷಣವನ್ನು ಓದಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಬರೋಬ್ಬರಿ ಎರಡೂವರೆ ಗಂಟೆ ತೆಗೆದುಕೊಂಡರು.

ಮುಖ್ಯಮಂತ್ರಿಗಳ ಬಜೆಟ್ ಭಾಷಣ ಸಂದರ್ಭದಲ್ಲಿ ಹೊಸ ಯೋಜನೆಗಳು ಘೋಷಣೆಯಾದಾಗ ಆಡಳಿತ ಪಕ್ಷದ ಸದಸ್ಯರು ಮೇಜು ಕುಟ್ಟಿ ಹರ್ಷ ವ್ಯಕ್ತಪಡಿಸಿದರು.

ಬಜೆಟ್ ಮಂಡನೆಯಲ್ಲಿ ಅಪಾರ ಅನುಭವ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಿಯೂ ಎಡವದೆ ನಿರ್ರ್ಗಳವಾಗಿ ಬಜೆಟ್ ಭಾಷಣ ಓದಿದರು.

ಆಕರ್ಷಕ ಬಜೆಟ್ ಪುಸ್ತಕ

ಈ ಬಾರಿಯ ಬಜೆಟ್ ಪುಸ್ತಕವನ್ನು ವಿಶೇಷ ರೀತಿಯಲ್ಲಿ ಮುದ್ರಿಸಲಾಗಿದ್ದು, ಮುಖಪುಟದಲ್ಲಿ ವಿಧಾನಸೌಧದ ಚಿತ್ರದ ಜೊತೆಗೆ ಸರ್ಕಾರದ ಕ್ಷಿರಭಾಗ್ಯ, ಮೆಟ್ರೋ, ನಗರಾಭಿವೃದ್ಧಿ ಹಾಗೂ ರೈತರ ಕಲ್ಯಾಣವನ್ನು ಸಾರುವ ಚಿತ್ರಗಳನ್ನು ಮುದ್ರಿಸಲಾಗಿದ್ದು, ಹಿಂಬದಿ ಪುಟದಲ್ಲಿ ಇನ್ವೆಸ್ಟ್ ಕರ್ನಾಟಕದ ಲಾಂಛನವನ್ನು ಮುದ್ರಿಸಲಾಗಿದೆ.

Write A Comment