ಕರ್ನಾಟಕ

’ಅನ್ನಭಾಗ್ಯ’ ಅಕ್ಕಿಯಲ್ಲಿ ಚೀನಾದ ಪ್ಲಾಸ್ಟಿಕ್ ಅಕ್ಕಿ

Pinterest LinkedIn Tumblr

plasticಮಂಡ್ಯ, ಮಾ. ೧೬- ನ್ಯಾಯಬೆಲೆ ಅಂಗಡಿಗಳ ಮೂಲಕ ಚೀನಾದ ಪ್ಲಾಸ್ಟಿಕ್ ಅಕ್ಕಿಯನ್ನು ವಿತರಿಸಲಾಗಿದೆ ಎಂದು ಆರೋಪಿಸಿ ಮಂಡ್ಯ ತಾಲೂಕಿನ ಕೀಲಾರ ಗ್ರಾಮ ಸಭೆಯಲ್ಲಿ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಗ್ರಾಮದ ನ್ಯಾಯಬೆಲೆ ಅಂಗಡಿ ಮೂಲಕ ಪಡಿತರದಾರರಿಗೆ ಈ ಮಾದರಿಯ ಅಕ್ಕಿಯನ್ನು ವಿತರಿಸಲಾಗಿದೆ. ಇದು ಕರ್ನಾಟಕ ಆಹಾರ ಸರಬರಾಜು ನಿಗಮದಿಂದಲೇ ಪೂರೈಕೆಯಾಗಿದೆ ಎಂದು ಹೇಳಲಾಗಿದೆ. ಇದೇ ತಿಂಗಳಲ್ಲಿ ವಿತರಿಸಲಾದ ಅಕ್ಕಿಯನ್ನು ಪಡೆದ ಪಡಿತರ ಫಲಾನುಭವಿಯೊಬ್ಬರು ಅದನ್ನು ಫ್ಲೋರ್‌ಮಿಲ್‌ನಲ್ಲಿ ಪುಡಿ ಮಾಡಿಸಿದಾಗ ಕಡ್ಡಿ ಮಾದರಿಯ ಚೂರುಗಳು ಪತ್ತೆಯಾಗಿವೆ ಎಂದು ಆರೋಪಿಸಿದರು.
ಮಂಗಳವಾರ ಕೀಲಾರ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಗ್ರಾಮಸಭೆಗೆ ಆ ಅಕ್ಕಿಯನ್ನು ತಂದ ಚಂದ್ರು ಎಂಬುವರು ಅಧಿಕಾರಿಗಳಿಗೆ ತೋರಿಸಿ ತರಾಟೆಗೆ ತೆಗೆದುಕೊಂಡರು. ಚೀನಾದ ಪ್ಲಾಸ್ಟಿಕ್ ಅಕ್ಕಿಯನ್ನು ಪಡಿತರದಾರರಿಗೆ ವಿತರಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅದನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರು ಸೇರಿದಂತೆ ಇತರೆ ಅಧಿಕಾರಿಗಳು ಪರಿಶೀಲಿಸಿದಾಗ ಅದು ಮಾಮೂಲಿ ಅಕ್ಕಿಯಂತಿರಲಿಲ್ಲ. ಇದರಿಂದ ಅನುಮಾನಗೊಂಡ ಗ್ರಾಪಂ ಅಧ್ಯಕ್ಷರು ಕೂಡಲೇ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದರು.
ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆ ಅಕ್ಕಿಯನ್ನು ಪರಿಶೀಲಿಸಿದರು. ಅವರೂ ಸಹ ಅದು ಮಾಮೂಲಿ ಅಕ್ಕಿಯೋ ಅಥವಾ ಚೀನಾದ ಪ್ಲಾಸ್ಟಿಕ್ ಅಕ್ಕಿಯೋ ಎಂದು ನಿಖರವಾಗಿ ಗುರುತಿಸುವಲ್ಲಿ ವಿಫಲರಾದರು. ಈ ಅಕ್ಕಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ನಂತರ ನಿರ್ದಿಷ್ಟವಾಗಿ ಹೇಳುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.
ಮಾಮೂಲಿ ಅಕ್ಕಿಯಂತಿಲ್ಲ
ಕೀಲಾರ ಗ್ರಾಮದ ನ್ಯಾಯಬೆಲೆ ಅಂಗಡಿ ಮೂಲಕ ಪಡಿತರದಾರರಿಗೆ ವಿತರಿಸುವ ಅಕ್ಕಿ ಮಾಮೂಲಿನಂತಿಲ್ಲ. ಅದು ತುಂಬಾ ಚೂಪಾಗಿದೆ. ಅದನ್ನು ಉಗುರಿನಿಂದ ತುಂಡರಿಸಲು ಸಾಧ್ಯವಾಗುತ್ತಿಲ್ಲ. ಆ ಅಕ್ಕಿ ಪಾಲಿಶ್ ಮಾಡಿಸಿದ ಅಕ್ಕಿಗಿಂತಲೂ ತುಂಬಾ ಬೆಳ್ಳಗೆ ಕಾಣುತ್ತದೆ. ಅದನ್ನು ನೋಡಿದರೆ ಎಂತಹವರಿಗಾದರೂ ಅನುಮಾನ ಬರುತ್ತದೆ.
ಈ ವಿಷಯವನ್ನು ಆಹಾರ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದ್ದು, ಅವರೂ ಸಹ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಅಕ್ಕಿಯನ್ನು ಕಳುಹಿಸಿದ್ದಾರೆ. ವರದಿ ಬಂದ ನಂತರ ಗೊತ್ತಾಗಲಿದೆ ಎಂದು ಗ್ರಾ.ಪಂ. ಅಧ್ಯಕ್ಷರು ತಿಳಿಸಿದ್ದಾರೆ.
ಕೀಲಾರ ಗ್ರಾಮದ ನ್ಯಾಯಬೆಲೆ ಅಂಗಡಿಗೆ ಕರ್ನಾಟಕ ರಾಜ್ಯ ಆಹಾರ ನಿಗಮದಿಂದಲೇ ಅಕ್ಕಿಯನ್ನು ವಿತರಿಸಲಾಗಿದೆ. ಆ ಅಕ್ಕಿ ಚೆನ್ನಾಗಿಯೇ ಇದೆ.
ಚೀನಾ ಅಕ್ಕಿ ಇಲ್ಲಿಗೆ ಬರಲು ಸಾಧ್ಯವೇ ಇಲ್ಲ. ಬಹುಶಃ ಫ್ಲೋರ್‌ಮಿಲ್‌ನಲ್ಲಿ ಅಕ್ಕಿಯನ್ನು ಪುಡಿ ಮಾಡಿಸುವ ವೇಳೆ ಏನೋ ವ್ಯತ್ಯಾಸವಾಗಿರಬಹುದು ಎಂದೆನಿಸುತ್ತದೆ.
ನಮ್ಮ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಪರಿಶೀಲಿಸಿದ್ದು, ಅಕ್ಕಿ ಚೆನ್ನಾಗಿದೆ ಎಂದು ಹೇಳಿದ್ದಾರೆ. ಗ್ರಾಮಸ್ಥರಿಗೆ ಶಂಕೆ ಇದ್ದರೆ ಆ ಅಕ್ಕಿಯನ್ನು ವಾಪಸ್ ಪಡೆದು ಬೇರೆ ಅಕ್ಕಿಯನ್ನು ನೀಡುತ್ತೇವೆ ಎಂದು ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದರು.

Write A Comment