ರಾಷ್ಟ್ರೀಯ

ಎಲ್ಲಿಂದಲೋ ಬಂದವರ ಕಿತಾಪತಿ : ದೇಶ ವಿರೋಧಿ ಘೋಷಣೆ ಹಾಕಿದ್ದು ವಿದ್ಯಾರ್ಥಿಗಳಲ್ಲ

Pinterest LinkedIn Tumblr

kitaನವದೆಹಲಿ, ಮಾ. ೧೬- ಇಲ್ಲಿನ ಪ್ರತಿಷ್ಠಿತ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದ ವಿವಾದಗ್ರಸ್ತ ಕಾರ್ಯಕ್ರಮದಲ್ಲಿ ಹೊರಗಿನಿಂದ ಬಂದಿದ್ದ ಮುಸುಕುಧಾರಿ ವ್ಯಕ್ತಿಗಳೇ ದೇಶ ವಿರೋಧಿ ಘೋಷಣೆ ಹಾಕಿದ್ದರು.
ಅಂದಿನ ಘಟನಾವಳಿಗಳ ಬಗ್ಗೆ ತನಿಖೆ ನಡೆಸಲೆಂದು ನೇಮಿಸಲಾಗಿದ್ದ ಪ್ರೊ. ರಾಖೇಶ್ ಭಟ್ನಾಗರ್ ನೇತೃತ್ವದ ಐದು ಜನ ಸದಸ್ಯರ ಉನ್ನತ ಮಟ್ಟದ ಸಮಿತಿಯ ಮೇಲಿನ ತೀರ್ಮಾನಕ್ಕೆ ಬಂದಿದೆ.

* ಘಟನೆ ನಡೆದ ದಿನ ತಡವಾಗಿ ಸ್ಥಳಕ್ಕೆ ಆಗಮಿಸಿದ ಜೆಎನ್‌ಯುಎನ್‌ಯು ಅಧ್ಯಕ್ಷ ಕನ್ಹಯ್ಯಾಕುಮಾರ್.
* ಹೀಗೆ ತಡವಾಗಿ ಬಂದ ಕನ್ಹಯ್ಯಾ ಕುಮಾರ್ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದನ್ನು ಪ್ರತಿಭಟಿಸಿದ್ದರು.
* ಭದ್ರತಾ ಪಡೆಯವರು ಏನು ಬೇಕಾದರೂ ಮಾಡಿಕೊಳ್ಳಲಿ, ಕಾರ್ಯಕ್ರಮ ನಡೆಯುವುದು ಎಂದು ಹೇಳಿದ್ದ ಸಂಘಟಕ ಉಮರ್ ಖಾಲಿದ್.
* ಹೊರಗಿನವರ ಹಾಜರಿಯನ್ನು ಖಚಿತಪಡಿಸಿದ ಭದ್ರತಾಪಡೆಗೆ ಸೇರಿದ ಸಿಬ್ಬಂದಿ.
* ಹೊರಗಿನಿಂದ ಬಂದಿದ್ದ ಗುಂಪಿನಿಂದ ದೇಶ ವಿರೋಧಿ ಘೋಷಣೆಗಳ ಸುರಿಮಳೆ.
* ಬಿಜೆಪಿ ಅತ್ಯಂತ ಕಡು ರಾಷ್ಟ್ರ ವಿರೋಧಿ ಎಂದು ಅರವಿಂದ್ ಕೇಜ್ರಿವಾಲ್ ದೂಷಣೆ.

`ಭಾರತ್ ಕೊ ರಗ್ಡಾದೊ ರಗ್ಡಾ` (ಭಾರತವನ್ನು ನಿರ್ಮೂಲನೆ ಮಾಡಬೇಕು` ಹಾಗೂ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಡ ಮುಸುಕುಧಾರಿಗಳ ಗುಂಪು ಹಾಕಿತೆಂದು ಸಮಿತಿಯು ತನ್ನ ವರದಿಯಲ್ಲಿ ಸ್ಪಷ್ಟಪಡಿಸಿದೆ.
ವಿಡಿಯೋದಲ್ಲಿ ಇಲ್ಲ ಘೋಷಣೆ
ಆದಾಗ್ಯೂ ಫೆಬ್ರವರಿ ಒಂಭತ್ತರ ಘಟನೆಗೆ ಸಂಬಂಧಿಸಿದಂತೆ ಲಭ್ಯವಿರುವ ವಿಡಿಯೋಗಳಲ್ಲಿ ಮಾತ್ರ ಯಾರೂ ಕೂಡ ದೇಶದ್ರೋಹಿ ಘೋಷಣೆಗಳನ್ನು ಹಾಕಿಲ್ಲ. ವಿಡಿಯೋದಲ್ಲಿ ಇಂಥ ದೃಶ್ಯಾವಳಿಗಳು ಇಲ್ಲದೆ ಹೋದರೂ ಕೂಡ ಕೆಲವು ಜನ ಪ್ರತ್ಯಕ್ಷದರ್ಶಿಗಳು ಮಾತ್ರ ಇಂಥ ಘೋಷಣೆಗಳನ್ನು ಹಾಕಿದ್ದನ್ನು ದೃಢೀಕರಿಸಿದ್ದಾರೆ.
`ಭಾರತ್ ಕಿ ಬರ್ಬಾರಿ ತಕ್ ಜಂಗ್ ರಹೇಗಿ` (ಭಾರತ ನಾಶವಾಗುವವರೆಗೆ ಯುದ್ಧ ಮುಂದುವರೆಯುವುದು) ಎಂಬ ಮುಂತಾದ ಘೋಷಣೆಗಳನ್ನು ಹಾಕಿದ್ದು ಕೂಡ ವಿಡಿಯೋ ದೃಶ್ಯಾವಳಿಗಳಲ್ಲಿ ಕಂಡು ಬಂದಿಲ್ಲ. ಆದರೆ ಆ ರೀತಿಯ ಘೋಷಣೆಗಳು ಕೇಳಿ ಬಂದಿದ್ದನ್ನು ಕೆಲವು ಪ್ರತ್ಯಕ್ಷದರ್ಶಿಗಳು ಖಚಿತಪಡಿಸಿದ್ದಾರೆ.
ಬೇಜವಾಬ್ದಾರಿ ನಡವಳಿಕೆ
ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ಸಂಘಟನೆ ನಾಯಕರ ನಡಾವಳಿಯನ್ನು ತರಾಟೆಗೆ ತೆಗೆದುಕೊಂಡಿರುವ ತನಿಖಾ ಸಮಿತಿಯು, ವಿದ್ಯಾರ್ಥಿ ನಾಯಕರು ಹೊಣೆಗೇಡಿತನದಿಂದ ನಡೆದುಕೊಂಡಿದ್ದಾರೆ ಎಂದು ಛೀಮಾರಿ ಹಾಕಿದೆ.
ಜೆಎನ್‌ಯು ವಿದ್ಯಾರ್ಥಿ ಸಂಘಟನೆಗೆ ಸೇರಿದ ಯಾರೊಬ್ಬರೂ ಜವಾಬ್ದಾರಿಯಿಂದ ನಡೆದುಕೊಳ್ಳಲಿಲ್ಲ. ತಾವು ಹೊಂದಿರುವ ಸ್ಥಾನಮಾನಗಳ ಕಾರಣಕ್ಕಾಗಿಯಾದರೂ ಅವರು ಇನ್ನೂ ಹೆಚ್ಚು ತಾಳ್ಮೆ ಹಾಗೂ ಮುನ್ನೆಚ್ಚರಿಕೆಯಿಂದ ವರ್ತಿಸಬೇಕಾಗಿತ್ತು ಎಂದು ತರಾಟೆಗೆ ತೆಗೆದುಕೊಂಡಿದೆ.
ತಕ್ಕ ವರ್ತನೆ ಅಲ್ಲ
ವಿದ್ಯಾರ್ಥಿ ಪ್ರತಿನಿಧಿಗಳು ರಾಜಕೀಯ ಇಲ್ಲವೇ ಇನ್ನಾವುದೇ ರೀತಿಯ ಭಿನ್ನಾಭಿಪ್ರಾಯಗಳನ್ನು ಮೀರಿ ಬೆಳೆಯಬೇಕು. ಆದರೆ ಈ ಸಂದರ್ಭದಲ್ಲಿ ಅವರದು ತಕ್ಕ ವರ್ತನೆ ಅಲ್ಲ ಎಂದು ಸಮಿತಿ ಆಕ್ಷೇಪಿಸಿದೆ.
ಸುಳ್ಳು ನೆಪವೊಡ್ಡಿ ಕೆಲವು ವಿದ್ಯಾರ್ಥಿಗಳು ಕಾರ್ಯಕ್ರಮ ಆಯೋಜಿಸಲು ಅನುಮತಿ ಪ‌ಡೆದಿರುವ ಸಂಗತಿಯೂ ತನಿಖೆಯಿಂದ ಬಯಲಾಗಿದೆ.
ಬಂಧನ, ಬಿಡುಗಡೆ
ವಿವಾದಾಸ್ಪದ ಕಾರ್ಯಕ್ರಮ ಆಯೋಜಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ್ರೋಹ ಆಪಾದನೆಗಳಿಗಾಗಿ ಕನ್ಹಯ್ಯಾ ಕುಮಾರ್, ಉಮರ್ ಖಾಲಿದ್ ಹಾಗೂ ಅನಿರ್ಬಾನ್ ಭಟ್ಟಾಚಾರ್ಯ ಅವರನ್ನು ಬಂಧಿಸಲಾಗಿತ್ತು.
ಕಳೆದ ಮೂರರಂದು ತಿಹಾರ್ ಜೈಲಿನಿಂದ ಕನ್ಹಯ್ಯಾ ಕುಮಾರ್ ಬಿಡುಗಡೆ ಮಾಡಲಾಗಿತ್ತು. ಆದಾಗ್ಯೂ ಉಮರ್ ಹಾಗೂ ಅನಿರ್ಬಾನ್ ಇನ್ನೂ ನ್ಯಾಯಾಂಗ ವಶದಲ್ಲಿದ್ದಾರೆ.
ತನಿಖಾ ಸಮಿತಿಯ ತನಿಖೆ ಪೂರ್ಣಗೊಂಡ ಹಿನ್ನಲೆಯಲ್ಲಿ ಕನ್ಹಯ್ಯಾ ಕುಮಾರ್ ಸೇರಿದಂತೆ, ಶೈಕ್ಷಣಿಕ ಅವಧಿಯಿಂದ ಕನ್ಹಯ್ಯಾ ಕುಮಾರ್ ಹಾಗೂ ಇತರ 10 ವಿದ್ಯಾರ್ಥಿಗಳ ಅಮಾನತು ಕ್ರಮವನ್ನು ರದ್ದುಪಡಿಸಲಾಗಿತ್ತು.

Write A Comment