ಕರ್ನಾಟಕ

ಟಿಸಿಎಸ್ 10ಕೆ ಓಟದ ಲಾಂಛನ ಬಿಡುಗಡೆ

Pinterest LinkedIn Tumblr

tmcಬೆಂಗಳೂರು, ಮಾ. ೧೬: ಬೆಂಗಳೂರಿನಲ್ಲಿ ಮೇ ೧೫ರಂದು ನಡೆಯುವ ಒಂಬತ್ತನೇ ಆವೃತ್ತಿಯ ಟಿಸಿಎಸ್ ೧೦ಕೆ ಓಟದ ಲಾಂಛನವನ್ನು ಯುವ ಜನ ಮತ್ತು ಕ್ರೀಡಾ ಸಚಿವ ಅಭಯಚಂದ್ರ ಜೈನ್ ಹಾಗೂ ಕನ್ನಡ ಚಿತ್ರನಟ ಪುನೀತ್ ರಾಜ್‌ಕುಮಾರ್ ನಗರದಲ್ಲಿ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಅವರು, ಟಿಸಿಎಸ್ ೧೦ಕೆ ಸ್ಪರ್ಧೆ ವರ್ಷದಿಂದ ವರ್ಷಕ್ಕೆ ಪ್ರಸಿದ್ಧಿ ಪಡೆಯುತ್ತಿದ್ದು, ವಿಶ್ವಮಟ್ಟದಲ್ಲಿ ಬೆಂಗಳೂರಿನ ಹೆಸರನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ. ಸರ್ಕಾರಿಂದ ಎಲ್ಲ ರೀತಿಯ ಸಹಾಯ, ಬಂಬಲ ನೀಡಲಾಗುವುದು ಎಂದು ಭರವಸೆ ನೀಡಿದರು.
ಪುನೀತ್ ರಾಜ್‌ಕುಮಾರ್ ಮಾತನಾಡಿ, ತಮ್ಮನ್ನು ಐದು ಬಾರಿ ರಾಯಭಾರಿಯಾಗಿ ಮಾಡಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ನಾನು ಕೂಡ ಸ್ಫರ್ಧೆಯಲ್ಲಿ ಓಡುತ್ತೇನೆ. ಮುಂದೆಯೂ ಕಾರ್ಯಕ್ರಮಕ್ಕೆ ಎಲ್ಲ ರೀತಿಯ ಬೆಂಬಲ ನೀಡುವುದಾಗಿ ತಿಳಿಸಿದರು.
ಪ್ರೋಕ್ಯಾಮ್ ಇಂಟರ್‌ನ್ಯಾಷನಲ್ ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಸಿಂಗ್ ಮಾತನಾಡಿ, ೧, ೯೭, ೭೬೮ ಡಾಲರ್‌ಗೆ ಬಹುಮಾನದ ಮೊತ್ತವನ್ನು ಏರಿಸಲಾಗಿದೆ. ಜತೆಗೆ ಲಾಂಛನವನ್ನೂ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದರು.
‘ಹಿಂದಿನ ಆವೃತ್ತಿಗಳಂತೆ ಈ ಬಾರಿಯೂ ಎಲೈಟ್ ವಿಶ್ವ ೧೦ ಕೆ, ಓಪನ್ ೧೦ ಕೆ, ಮಜಾ ರನ್ (೫.೭ ಕಿ.ಮೀ.), ಹಿರಿಯ ನಾಗರಿಕರ ಓಟ (೪ ಕಿ.ಮೀ) ಮತ್ತು ಚಾಂಪಿಯನ್ಸ್ ವಿಥ್ ಡಿಸಬಿಲಿಟಿ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಪುರುಷ ಮತ್ತು ಮಹಿಳಾ ಸ್ಪರ್ಧಿಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ. ಈ ಬಾರಿ ಕೂಟ ದಾಖಲೆ ನಿರ್ಮಿಸುವ ವಿದೇಶಿ ಅಥ್ಲೀಟ್‌ಗಳಿಗೆ ೨,೦೦೦ ಡಾಲರ್ (ಅಂದಾಜು ೧.೩೪ ಲಕ್ಷ) ಮತ್ತು ಭಾರತದ ಸ್ಪರ್ಧಿಗಳಿಗೆ ೫೦, ೦೦೦ ವಿಶೇಷ ಬಹುಮಾನ ನೀಡಲಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.
ಮಾರ್ಚ್ ೧೫ರಿಂದ ನೋಂದಣಿ ಕಾರ್ಯ ಆರಂಭವಾಗಿದೆ. ಓಪನ್ ೧೦ ಕೆ ವಿಭಾಗದಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಏಪ್ರಿಲ್ ೭ ಮತ್ತು ಇತರ ವಿಭಾಗಗಳಲ್ಲಿ ಹೆಸರು ನೋಂದಾವಣೆ ಮಾಡಿಕೊಳ್ಳಲು ಏಪ್ರಿಲ್ ೨೨ ಕೊನೆಯ ದಿನವಾಗಿದೆ. ಓಪನ್ ೧೦ ಕೆ. ವಿಭಾಗದಲ್ಲಿ ಮಹಿಳಾ ಸ್ಪರ್ಧಿಗಳ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಈ ಬಾರಿ ವಿಶೇಷ ಕೋಟಾದಡಿ ಸೀಮಿತ ಅವಕಾಶ ಕಲ್ಪಿಸಲಾಗಿದೆ. ರಿಫ್ರೆಶ್, ರಿಲೋಡ್ ಮತ್ತು ರನ್ ಎಂಬ ಹೊಸ ಧ್ಯೇಯದೊಂದಿಗೆ ಈ ಬಾರಿಯ ಓಟ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

Write A Comment