ರಾಷ್ಟ್ರೀಯ

ಸಂಸದರ ಲಂಚ ವಿವಾದ ನೀತಿ ಸಮಿತಿಯಿಂದ ತನಿಖೆ

Pinterest LinkedIn Tumblr

Sumitraನವದೆಹಲಿ (ಪಿಟಿಐ): ತೃಣಮೂಲ ಕಾಂಗ್ರೆಸ್ ಸದಸ್ಯರ ವಿರುದ್ಧ ಕೇಳಿ ಬಂದಿರುವ ಲಂಚದ ಆರೋಪಗಳ ಕುರಿತು ಲೋಕಸಭೆಯ ನೀತಿ ಸಮಿತಿಯು ತನಿಖೆ ನಡೆಸಲಿದೆ ಎಂದು ಸ್ಫೀಕರ್ ಸುಮಿತ್ರಾ ಮಹಾಜನ್ ಅವರು ಬುಧವಾರ ಪ್ರಕಟಿಸಿದರು.
ಕುಟುಕು ಕಾರ್ಯಾಚರಣೆಯೊಂದರಲ್ಲಿ ಟಿಎಂಸಿ ಸದಸ್ಯರು ಲಂಚ ಪಡೆದಿದ್ದಾರೆ ಎನ್ನಲಾದ ಪ್ರಕರಣ ಸದನಲ್ಲಿ ಮಂಗಳವಾರ ಕೋಲಾಹಲಕ್ಕೆ ಕಾರಣವಾಗಿತ್ತು. ಟಿಎಂಸಿ ಸದಸ್ಯರ ವಿರುದ್ಧ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಡಪಕ್ಷಗಳು ತೀವ್ರ ವಾಗ್ದಾಳಿ ನಡೆಸಿ, ತನಿಖೆಗೆ ಒತ್ತಾಯಿಸಿದ್ದವು. ಆರೋಪಗಳ ತನಿಖೆಗೆ ಒಲವು ತೋರಿದ್ದ ಸರ್ಕಾರ, ಬುಧವಾರ ಈ ಕ್ರಮ ಪ್ರಕಟಿಸಿದೆ.
‘ಸದನದ ಭಾಗವಾಗಿರುವ ಕೆಲವು ಸದಸ್ಯರ ಅನೈತಿಕ ನಡವಳಿಕಾ ಕೃತ್ಯಗಳ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದೆ. ಈ ಕುರಿತು ಸದನದ ಕೆಲವು ಸದಸ್ಯರು ಮಂಗಳವಾರ ವಿಷಯ ಪ್ರಸ್ತಾಪಸಿದ್ದರು.
‘ಈ ಆರೋಪಗಳು ಗಂಭೀರ ಸ್ವರೂಪದ್ದಾಗಿದ್ದು, ಸಂಸದರ ಹಾಗೂ ಒಂದು ಸಂಸ್ಥೆಯಾಗಿ ಸಂಸತ್ತಿನ ವಿಶ್ವಾಸಾರ್ಹತೆಯ ಮೇಲೆ ಪ್ರಭಾವ ಬೀರುತ್ತವೆ. ಆದ್ದರಿಂದ ಈ ಕುರಿತು ವಿಚಾರಣೆಯ ಅಗತ್ಯವಿದೆ’ ಎಂದು ಸ್ಪೀಕರ್ ಮಹಾಜನ್ ಅವರು ಅಭಿಪ್ರಾಯಪಟ್ಟರು.
ಅಲ್ಲದೇ, ಈ ಕುರಿತು ‘ವಿಚಾರಣೆ ಮಾಡಿ, ತನಿಖೆ ನಡೆಸಿ ವರದಿ ನೀಡುವಂತೆ’ ಬಿಜೆಪಿಯ ಹಿರಿಯ ಮುಖಂಡ ಎಲ್‌.ಕೆ.ಅಡ್ವಾಣಿ ಅವರ ನೇತೃತ್ವದ 15 ಸದಸ್ಯರ ಸಮಿತಿಗೆ ಸೂಚಿಸಿದರು.
ಸ್ಪೀಕರ್‌ ಪ್ರಕಟಣೆಯನ್ನು ಟಿಎಂಸಿ ಸದಸ್ಯರು ಸೇರಿದಂತೆ ಎಲ್ಲರೂ ನಿಶಬ್ದ ಕಾಯ್ದುಕೊಂಡು ಆಲಿಸಿದರು.
ಹಿಂದೆಯೂ ಆಗಿತ್ತು: ಸದನದ ನೀತಿ ಸಮಿತಿಗೆ ಹಿಂದೆಯೂ ಇಂಥ ಪ್ರಕರಣಗಳನ್ನು ವಹಿಸಲಾಗಿತ್ತು. ಪ್ರಶ್ನೆಗಾಗಿ ಕಾಸು’ ಹಗರಣದ ತನಿಖೆಯನ್ನು 2005ರಲ್ಲಿ ಲೋಕಸಭೆ ಹಾಗೂ ರಾಜ್ಯಸಭೆ ಎರಡರಲ್ಲೂ ನೀತಿ ಸಮಿತಿಗೆ ವಹಿಸಲಾಗಿತ್ತು.
ನೀತಿ ಸಮಿತಿ ವರದಿಯ ಬಳಿಕ ಒಟ್ಟು 11 ಸಂಸದರನ್ನು ಸಂಸತ್ ಸದಸ್ಯತ್ವದಿಂದ ಅಮಾನತು ಮಾಡಲಾಗಿತ್ತು. ಈ ಪೈಕಿ 10 ಸದಸ್ಯರು ಲೋಕಸಭೆಯವರಾಗಿದ್ದರು. ಒಬ್ಬರು ರಾಜ್ಯಸಭೆಯ ಸದಸ್ಯರು.
ಪಶ್ಚಿಮ ಬಂಗಾಳದ ಸೋಮನಾಥ್ ಚಟರ್ಜಿ ಅವರು ಆಗ ಲೋಕಸಭೆಯ ಸ್ಪೀಕರ್ ಆಗಿದ್ದರು.

Write A Comment