ಕರ್ನಾಟಕ

ಕುಡಿದು ಕಿರುಕುಳ ನೀಡುತಿದ್ದ ಗಂಡನ ಕುತ್ತಿಗೆ ಕೊಯ್ದು ಕೊಂದ ಪತ್ನಿ

Pinterest LinkedIn Tumblr

murderಮಳವಳ್ಳಿ, ಮಾ.15- ಪತ್ನಿಯೇ ತನ್ನ ಪತಿಯ ಕುತ್ತಿಗೆಯನ್ನು ಕತ್ತರಿಸಿ ಹತ್ಯೆಗೈದು ಪೊಲೀಸರಿಗೆ ಶರಣಾಗಿರುವ ಆಘಾತಕಾರಿ ಕೃತ್ಯವೊಂದು ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯ ಧನಗೂರು ಕುರಿಫಾರಂ ಬಳಿ ಜರುಗಿದೆ. ಧನಗೂರು ಬಳಿಯ ಅನ್ವರ್ ಪಾಷಾ ಎಂಬುವರಿಗೆ ಸೇರಿದ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ನಿರ್ವಹಿಸುತ್ತ ಅಲ್ಲೇ ಶೆಡ್ ವೊಂದರಲ್ಲಿ ವಾಸವಿದ್ದ ಕೃಷ್ಣಯ್ಯ (47) ಎಂಬಾತನೇ ತನ್ನ ಪತ್ನಿ ಮಹಾದೇವಮ್ಮ ಎಂಬಾಕೆಯಿಂದ ಹತ್ಯೆಗೀಡಾಗಿರುವವನಾಗಿದ್ದು ಇದೀಗ ಆರೋಪಿ ದೇವಮ್ಮಳನ್ನು ಪೊಲೀಸರು ಬಂಧಿಸಿದ್ದಾರೆ.

ಮೂಲತಃ ಕೊಳ್ಳೇಗಾಲ ತಾಲ್ಲೂಕು ಹನೂರು ಗ್ರಾಮದವರಾದ ಕೃಷ್ಣಯ್ಯ ಮಹಾದೇವಮ್ಮ ದಂಪತಿ ಕಳೆದ ಒಂದು ವರ್ಷದಿಂದ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತ ಇಲ್ಲೇ ಶೆಡ್‌ವೊಂದನ್ನು ನಿರ್ಮಿಸಿಕೊಂಡು ವಾಸವಿದ್ದರು. ವಿವಾಹದ ನಂತರ ಪತಿಯ ಜೊತೆ ಅನೊನ್ಯವಾಗಿಯೇ ಇದ್ದ ಮಹಾದೇವಮ್ಮ ನಂತರ ಪತಿ ಕೃಷ್ಣಯ್ಯನನ್ನು ತೊರೆದು ಬೇರೊಬ್ಬನ ಜೊತೆ ಜೀವನ ಸಾಗಿಸುತ್ತಿದ್ದು ಆಕೆಗೆ ಇಬ್ಬರು ಮಕ್ಕಳು ಸಹ ಇದ್ದಾರೆಂದು ಗೊತ್ತಾಗಿದೆ.

ಈ ನಡುವೆ ಅನಾರೋಗ್ಯಕ್ಕೆ ತುತ್ತಾಗಿ ತನ್ನ 2ನೇ ಪತಿ ತೀರಿಕೊಂಡ ಹಿನ್ನೆಲೆಯಲ್ಲಿ ಮತ್ತೆ ತನ್ನ ಮೊದಲ ಪತಿ ಕೃಷ್ಣಯ್ಯನನ್ನು ಸೇರಿಕೊಂಡ ಮಹಾದೇವಮ್ಮ ಕಳೆದ 1 ವರ್ಷದಿಂದ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೂಲಿ ಕೆಲಸ ಮಾಡಿಕೊಂಡು ವಾಸಿಸುತ್ತಿದ್ದರು ಎನ್ನಲಾಗಿದೆ. ಆದರೆ ಪ್ರತೀ ದಿನ ಕಂಠ ಪೂರ್ತಿ ಕುಡಿದು ಬರುತ್ತಿದ್ದ ಕೃಷ್ಣಯ್ಯ ಆಕೆಯ ನಡತೆ ಬಗ್ಗೆ ಶಂಕೆ ವ್ಯಕ್ತಪಡಿಸಿ ಜಗಳ ತೆಗೆದು ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದನನ್ನಲ್ಲದೆ ತನ್ನ 2ನೇ ಸಂಬಂಧದ ಬಗ್ಗೆಯೂ ಛೇಡಿಸುತ್ತ ಹಿಂಸಿಸುತ್ತಿದ್ದ ಎಂದು ಮಹಾದೇವಮ್ಮ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ದೂರಿದ್ದಾಳೆ.

ನಿನ್ನೆ ಸಾಯಂಕಾಲ 4.30 ರ ಸಮಯದಲ್ಲಿ ಸಹ ಕಂಠಪೂರ್ತಿ ಕುಡಿದುಬಂದ ಕೃಷ್ಣಯ್ಯ ಯಥಾರೀತಿ ಆಕೆಯ ಜೊತೆ ಜಗಳ ತೆಗೆದು ಆವಾಚ್ಯ ಶಬ್ದಗಳಿಂದ ನಿಂದಿಸ ತೊಡಗುತ್ತಿದ್ದಂತೆ ಈತನ ವರ್ತನೆಯಿಂದ ರೋಸಿಹೋದ ಮಹಾದೇವಮ್ಮ ಮೊದಲು ರಿಪೀಸ್ ಪಟ್ಟಿಯಿಂದ ಆತನ ತಲೆಗೆ ಬಲವಾಗಿ ಹೊಡೆದಿದ್ದಾಳೆ.ತಲೆಗೆ ಪೆಟ್ಟುಬಿದ್ದು ಪ್ತeತಪ್ಪಿ ಕೃಷ್ಣಯ್ಯ ಕೆಳಗೆ ಬೀಳುತ್ತಿದ್ದಂತೆ ಅಲ್ಲೇ ಇದ್ದ ಕೊಡುಗೋಲಿನಿಂದ ಆತನ ಕುತ್ತಿಗೆಯನ್ನು ಕೊಯ್ದು ಹತ್ಯೆಗೈಯ್ದು ಪಕ್ಕದ ಜಮೀನಿನವರ ಬಳಿ ತೆರಳಿ ತನ್ನ ಗಂಡನನ್ನು ತಾನೇ ಕೊಲೆ ಮಾಡಿದ್ದಾಗಿ ಹೇಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಕ್ಕದ ಜಮೀನಿನವರು ಕೂಡಲೇ ಹಲಗೂರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರ ಮೇರೆಗೆ ಸ್ಥಳಕ್ಕೆ ಧಾವಿಸಿದ ಹಲಗೂರು ಸಬ್ ಇನ್ಸ್‌ಪೆಕ್ಟರ್ ಗೋವಿಂದರಾಜು ಹಾಗೂ ಸಿಬ್ಬಂದಿ ಶವದ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿ ಮಹಾದೇವಮ್ಮಳನ್ನು ಬಂಧಿಸಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಆರ್ ಶಿವಕುಮಾರ್, ಸರ್ಕಲ್ ಇನ್ಸ್‌ಪೆಕ್ಟರ್ ಸಿ ಗೋಪಾಲ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Write A Comment