ಕರ್ನಾಟಕ

ಆರ್‌ಟಿಒ ಸಿಬ್ಬಂದಿಯಿಂದ ಫಿಟ್ನೆಸ್ ಪರೀಕ್ಷೆ ಚಮತ್ಕಾರ!

Pinterest LinkedIn Tumblr

27-rto-checkingಬೆಂಗಳೂರು: ಓರ್ವ ಮೋಟಾರು ವಾಹನಗಳ ಪರೀಕ್ಷಕ ದಿನಕ್ಕೆ ಅಬ್ಬಬ್ಟಾ ಎಂದರೆ 20ರಿಂದ 30 ವಾಹನಗಳ “ಫಿಟ್ನೆಸ್ ಟೆಸ್ಟ್‌’ (ಸುಸ್ಥಿತಿ ಪರೀಕ್ಷೆ) ಮಾಡಬಹುದು. ಆದರೆ, ಸಾರಿಗೆ ಇಲಾಖೆಯಲ್ಲಿ ಒಬ್ಬ ಪರೀಕ್ಷಕ ನಿತ್ಯ ಸರಾಸರಿ 138 ವಾಹನಗಳ ಫಿಟ್ನೆಸ್ ಪರೀಕ್ಷೆಗಳನ್ನು ಮಾಡಿ ಮುಗಿಸಿದ್ದಾನೆ!

ಫಿಟ್ನೆಸ್ ಪರೀಕ್ಷೆಯಲ್ಲಿ ವಾಹನವೊಂದರಲ್ಲಿನ 45 ಪ್ರಕಾರದ ಪರೀಕ್ಷೆಗಳು ನಡೆಯುತ್ತವೆ. ಹಾಗಾಗಿ ಕಲಿಕಾ ಪರವಾನಗಿ, ಚಾಲನಾ ಪರವಾನಗಿ ಮತ್ತಿತರ ಕಾರ್ಯಗಳ ಜತೆಗೆ ಹೆಚ್ಚೆಂದರೆ 20-30 ವಾಹನಗಳ ಫಿಟ್ನೆಸ್  ಪರೀಕ್ಷೆ ಮಾಡಬಹುದು ಎಂದು ಹೇಳುತ್ತದೆ ಸ್ವತಃ ಸಾರಿಗೆ ಅಧಿಕಾರಿಗಳ ಅನುಭವ. ಆದರೆ, ಅಂಕಿ-ಅಂಶಗಳ ಪ್ರಕಾರ ಇಲಾಖೆಯಲ್ಲಿನ ಓರ್ವ ಪರೀಕ್ಷಕ ಸಲೀಸಾಗಿ 138 ವಾಹನಗಳಿಗೆ ಫಿಟ್ನೆಸ್ ಪರೀಕ್ಷೆ ಮಾಡುತ್ತಾರೆ.

– ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿಯಲ್ಲಿ ಸಾರಿಗೆ ಇಲಾಖೆಯ ಈ “ಚಮತ್ಕಾರ’ ಬೆಳಕಿಗೆ ಬಂದಿದೆ.

ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು ಸಾರಿಗೆ ಇಲಾಖೆಯ 20 ಪ್ರಾದೇಶಿಕ ಸಾರಿಗೆ ಕಚೇರಿಗಳನ್ನು ಮಾದರಿಯಾಗಿ ತೆಗೆದುಕೊಂಡಿದ್ದಾರೆ. ಆ ಕಚೇರಿಗಳಲ್ಲಿರುವ ಸಿಬ್ಬಂದಿ 5.70 ಲಕ್ಷ ಸಾರಿಗೆ ವಾಹನಗಳನ್ನು ಮೂರು ವರ್ಷಗಳಲ್ಲಿ (2012-13ರಿಂದ 2014-15) ಪರೀಕ್ಷೆ ಮಾಡಿ, ಫಿಟ್ನೆಸ್ ಸರ್ಟಿಫಿಕೇಟ್‌ ನೀಡಿದ್ದಾರೆ. 45 ಅಂಶಗಳನ್ನು ಒಳಗೊಂಡ ಈ “ಫಿಟ್ನೆಸ್  ಪರೀಕ್ಷೆ’ಯನ್ನು ಇಷ್ಟೊಂದು ಅಲ್ಪಾವಧಿಯಲ್ಲಿ ಮಾಡಿ ಮುಗಿಸಿರುವುದಕ್ಕೆ ಸಿಎಜಿ ಅಚ್ಚರಿ ಜತೆಗೆ ಕಾರ್ಯವೈಖರಿ ಬಗ್ಗೆ ಅನುಮಾನವನ್ನೂ ವ್ಯಕ್ತಪಡಿಸಿದೆ.

ಇನ್ನು 2000ದಿಂದ 2013ರ ಅವಧಿಯಲ್ಲಿ 9.43 ಲಕ್ಷ ಸಾರಿಗೆ ವಾಹನಗಳು ನೋಂದಣಿಯಾಗಿವೆ. ಈ ಪೈಕಿ 4.04 ಲಕ್ಷ ವಾಹನಗಳು ಇದುವರೆಗೆ ಫಿಟ್ನೆಸ್  ಪರೀಕ್ಷೆಗೇ ಒಳಪಟ್ಟಿಲ್ಲ. ಅಲ್ಲದೆ, ಸಿಎಜಿ ತಪಾಸಣೆ ನಡೆಸಿದ 20 ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿನ ಸಾರಿಗೆಯೇತರ ಅಂದರೆ ಕಾರು, ಬೈಕ್‌ನಂತಹ 9.70 ಲಕ್ಷ ವಾಹನಗಳಲ್ಲಿ 7.45 ಲಕ್ಷ ವಾಹನಗಳು ಫಿಟ್ನೆಸ್ ಪ್ರಮಾಣಪತ್ರ ನವೀಕರಣ ಮಾಡಿಸಿಲ್ಲ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಅಂದಾಜು 74 ಕೋಟಿ ರೂ. ವರಮಾನ ಮತ್ತು ರಾಜಸ್ವದಲ್ಲಿ ವಂಚನೆ ಆಗಿದೆ ಎಂದೂ ಸಿಎಜಿ ವರದಿ ಉಲ್ಲೇಖೀಸಿದೆ.

ಫಿಟ್ನೆಸ್  ಪರೀಕ್ಷೆ ಏಕೆ?
ಕೇಂದ್ರ ಮೋಟಾರು ವಾಹನಗಳ ಅಧಿನಿಯಮದ ಪ್ರಕಾರ ಯಾವೊಂದು ಸಾರಿಗೆ ವಾಹನ ರಸ್ತೆಗಿಳಿಯಲು ಅದರ ಫಿಟ್ನೆಸ್ ಪರೀಕ್ಷೆ ಕಡ್ಡಾಯ. ಒಂದು ವೇಳೆ ಫಿಟ್ನೆಸ್  ಪ್ರಮಾಣಪತ್ರ ಹೊಂದಿರದ ವಾಹನಗಳು ಅಪಘಾತಕ್ಕೆ ಈಡಾದರೆ, ಆ ವಾಹನದ ಚಾಲಕ ಪರಿಹಾರ ಪಡೆಯಲು ಈ ಸರ್ಟಿಫಿಕೇಟ್‌ ಹೊಂದಿರುವುದು ಅತ್ಯಗತ್ಯ. ಸಾರಿಗೆ ಇಲಾಖೆ ಮೂಲಗಳ ಪ್ರಕಾರ ರಾಜ್ಯದಲ್ಲಿ ಸುಮಾರು 40 ಲಕ್ಷ ಸಾರಿಗೆ ವಾಹನಗಳಿದ್ದು, ಈ ಪೈಕಿ ಶೇ.30ರಿಂದ 40ರಷ್ಟು ಇದುವರೆಗೆ ಫಿಟ್ನೆಸ್ ಪ್ರಮಾಣಪತ್ರ ಹೊಂದಿಲ್ಲ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಪ್ರತಿ ಪ್ರಾದೇಶಿಕ ಸಾರಿಗೆ ಕಚೇರಿಗೆ ಕನಿಷ್ಠ 10 ಜನ ಮೋಟಾರು ವಾಹನಗಳ ಪರೀಕ್ಷಕರಿರಬೇಕು. ಆದರೆ, ಕೋರಮಂಗಲ, ಇಂದಿರಾನಗರ ಸೇರಿದಂತೆ ಕೆಲವೆಡೆ ತಲಾ ಒಬ್ಬ ಪರೀಕ್ಷಕರಿದ್ದಾರೆ. ಅವರು ತಿಂಗಳಿಗೆ ಸಾವಿರಾರು ವಾಹನಗಳ ಫಿಟ್ನೆಸ್ ಪರೀಕ್ಷೆ ನಡೆಸಬೇಕಾಗಿದೆ.

ಸಿಎಜಿ ಶಿಫಾರಸುಗಳು
ವಾಹನಗಳ ಫಿಟ್ನೆಸ್ ಪ್ರಮಾಣಪತ್ರ ಊರ್ಜಿತಗೊಂಡಿರುವುದನ್ನು ನಿರ್ಧರಿಸಲು ಸಾರಿಗೆ ಇಲಾಖೆಯ “ವಾಹನ’ ತಂತ್ರಾಂಶವನ್ನು ಮಾರ್ಪಾಡು ಮಾಡುವ ಅಗತ್ಯವಿದೆ. ಫಿಟ್ನೆಸ್ ಪರೀಕ್ಷಣೆ ಮತ್ತು ಪ್ರಮಾಣೀಕರಿಸಲು ಅಗತ್ಯ ಸಿಬ್ಬಂದಿ ಹಾಗೂ ಉಪಕರಣಗಳನ್ನು ಹೊಂದುವ ಅವಶ್ಯಕತೆ ಇದೆ. ಮಾಧ್ಯಮಗಳ ಮೂಕ ಫಿಟ್ನೆಸ್ ಪ್ರಮಾಣಪತ್ರಗಳ ಅಗತ್ಯತೆ ಬಗ್ಗೆ ಜಾಹೀರಾತು ನೀಡುವ ಮೂಲಕ ಅರಿವು ಮೂಡಿಸಬೇಕು ಎಂದು ಸಿಎಜಿ ಶಿಫಾರಸು ಮಾಡಿದೆ.
-ವಿಜಯಕುಮಾರ್‌ ಚಂದರಗಿ

-ಉದಯವಾಣಿ

Write A Comment