ಮನೋರಂಜನೆ

ಚದುರಿದ ಕಾರ್ಮೋಡಕ್ಕೆ ನಾಯಕನದೇ ಕತೆ, ಚಿತ್ರಕತೆ

Pinterest LinkedIn Tumblr

Chadurida-Karmodaಕನ್ನಡದಲ್ಲೀಗ ಚಿತ್ರ ಬಿಡುಗಡೆಯ ಪರ್ವ. ವಾರಕ್ಕೆ ಐದಾರು ಚಿತ್ರಗಳು ತೆರೆಗೆ ಬರುತ್ತಿವೆ. ಅವುಗಳ ಜತೆಯಲ್ಲಿ ಪಕ್ಕಾ ಕೌಟುಂಬಿಕ ಚಿತ್ರವೊಂದು ತೆರೆಗೆ ಅಪ್ಪಳಿಸುತ್ತಿದೆ. ಅದು “ಚದುರಿದ ಕಾರ್ಮೋಡ’. ಹೊಸಬರೇ ಸೇರಿ ಮಾಡಿರುವ ಸಿನಿಮಾ ಇದು. ಹಾಗಂತ ಇಲ್ಲಿ ಕೆಲಸ ಮಾಡಿರುವವರಿಗೆ ಅನುಭವ ಇಲ್ಲವೆಂದಲ್ಲ, ಎಲ್ಲರೂ ಒಂದಲ್ಲ ಒಂದು ವಿಭಾಗದಲ್ಲಿ ಕೆಲಸ ಮಾಡಿದ್ದವರು. ಈಗ ಎಲ್ಲರೂ ಸೇರಿಕೊಂಡು ಚಿತ್ರ ಮಾಡಿ, ಈ ವಾರ ಬಿಡುಗಡೆ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಕೆ.ಎನ್‌.ಕೃಷ್ಣಮೂರ್ತಿ ನಿರ್ದೇಶಕರು. ಸಂಭಾಷಣೆ ಕೂಡ ಇವರದೇ. ಇನ್ನು, ಗಂಗಾಧರ್‌ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಾಯಕ ನಟರಾಗಿ ನಟಿಸಿದ್ದಾರೆ. ಇವರಿಗೆ ನಾಯಕಿಯರಾಗಿ ಧರಣಿ ಹಾಗು ಸ್ಮಿತಾಗೌಡ ನಟಿಸಿದ್ದಾರೆ. ಈ ಚಿತ್ರಕ್ಕೆ ಚಂದ್ರಸುವರ್ಣ, ಗಂಗಾಧರ್‌, ಸುನಾತ್‌ ಗೌತಮ್‌ ಹಾಗು ಸತೀಶ್‌ಗೌಡ ನಿರ್ಮಾಪಕರು.

ಇದೊಂದು ತ್ರಿಕೋನ ಪ್ರೇಮಕಥೆ ಎನ್ನುವ ಗಂಗಾಧರ್‌, “ಇಲ್ಲಿ ಪ್ರಬುದ್ಧ ಪ್ರೀತಿಯ ಕಥೆಯನ್ನು ಹೇಳಲಾಗಿದೆ. ಸೆಂಟಿಮೆಂಟ್‌ ಮತ್ತು ಎಮೋಷನಲ್‌ಗ‌ೂ ಇಲ್ಲಿ ಜಾಗವಿದೆ. ಹಿಂದೆ ಮೂಡಿಬರುತ್ತಿದ್ದ ಚಿತ್ರಗಳಲ್ಲಿ ಕಥೆಗೆ ಹೆಚ್ಚು ಒತ್ತು ಕೊಡಲಾಗುತ್ತಿತ್ತು. ಇಲ್ಲೂ ಕೂಡ ಕಥೆಗೆ ಒತ್ತು ನೀಡಲಾಗಿದೆ.

ಚಿತ್ರ ನೋಡುವ ಪ್ರತಿಯೊಬ್ಬರಿಗೂ ಎಲ್ಲಾ ಅಂಶಗಳು ಇಷ್ಟವಾಗುತ್ತವೆ’ ಎಂದು ವಿವರ ಕೊಡುತ್ತಾರೆ ಗಂಗಾಧರ್‌. ಗಂಗಾಧರ್‌ಗೆ ಸಿನಿಮಾ ಹೊಸದೇನಲ್ಲ. ಅವರು ಈ ಹಿಂದೆ ಹಲವು ಧಾರಾವಾಹಿಗಳಲ್ಲಿ ನಟಿಸಿ, ಅನುಭವ ಹೊಂದಿದ್ದಾರೆ. ಗೆಳೆಯರ ಜತೆ ಸೇರಿ ಸಿನಿಮಾ ಮಾಡುವ ಬಗ್ಗೆ ಚರ್ಚಿಸಿದ ಬಳಿಕ “ಚದುರಿದ ಕಾರ್ಮೋಡ’ ಕಥೆ ಹುಟ್ಟುಕೊಂಡು, ಅಲ್ಲಿಂದ ಚಿತ್ರ ಶುರುವಾಗಿದ್ದಾಗಿ ಹೇಳುತ್ತಾರೆ ಗಂಗಾಧರ್‌.

ಕಾರ್ಕಳ ಸುತ್ತಮುತ್ತಲ ಸುಂದರ ತಾಣಗಳು ಹಾಗು ಬೀಚ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರ ವೀಕ್ಷಿಸಿರುವ ಸೆನ್ಸಾರ್‌ ಮಂಡಳಿ ಯು ಸರ್ಟಿಫಿಕೆಟ್‌ ನೀಡಿದೆ. ಚಿತ್ರಕ್ಕೆ ಸುನಾತ್‌ಗೌತಮ್‌ ಸಂಗೀತ ನೀಡಿದ್ದು, ನಾಲ್ಕು ಹಾಡುಗಳಿವೆ. ಕೃಷ್ಣಮೂರ್ತಿ ಹಾಗು ಅಷ್ಟಾವಧಾನಿ ಅವರು ಗೀತೆಗಳನ್ನು ರಚಿಸಿದ್ದಾರೆ. ಚಿತ್ರದಲ್ಲಿ ಸತೀಶ್‌ಗೌಡ, ಚಂದ್ರಸುವರ್ಣ ಇತರರು ನಟಿಸಿದ್ದಾರೆ. ಬಸವರಾಜ್‌ ಕ್ಯಾಮೆರಾ ಹಿಡಿದಿರುವ ಈ ಚಿತ್ರ ಸ್ವಪ್ನ ಚಿತ್ರಮಂದಿರದಲ್ಲಿ ರಿಲೀಸ್‌ ಆಗುತ್ತಿದೆ.
-ಉದಯವಾಣಿ

Write A Comment