ಕರ್ನಾಟಕ

ಸರ್ಕಾರದಿಂದ ನನ್ನ ಫೋನ್‌ ಕದ್ದಾಲಿಕೆ: ಎಚ್‌ಡಿಕೆ

Pinterest LinkedIn Tumblr

13-1447401115-hd-kumaraswamಬೆಂಗಳೂರು: ರಾಜ್ಯ ಸರ್ಕಾರದ ವತಿಯಿಂದ ನನ್ನದೂ ಸೇರಿದಂತೆ ಪ್ರತಿಪಕ್ಷ ನಾಯಕರ ದೂರವಾಣಿ ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ವಾಚ್‌ ಪ್ರಕರಣ ಬೆಳಕಿಗೆ ಬಂದ ನಂತರವಂತೂ ನಿರಂತರವಾಗಿ ದೂರವಾಣಿ ಕದ್ದಾಲಿಕೆ ನಡೆಯುತ್ತಿದೆ. ವಾಚ್‌ ಕಳವು ಬಗ್ಗೆ ಸುಧಾಕರ ಶೆಟ್ಟಿ ನನ್ನ ಜತೆ ಮಾತನಾಡಲು ಬಯಸಿ ಕರೆ ಮಾಡಿ ಎರಡು ದಿನಗಳ ನಂತರ ಮೌನವಾಗಿದ್ದೇ ಇದಕ್ಕೆ ಸಾಕ್ಷಿ ಎಂದು ಹೇಳಿದರು.

ರಾಜ್ಯದಲ್ಲಿ ದೂರವಾಣಿ ಕದ್ದಾಲಿಕೆ ಹೊಸದಲ್ಲ. ಅಧಿಕಾರ ನಡೆಸುವವರ ಮೌಖೀಕ ಆದೇಶದ ಮೇರೆಗೆ ಪೊಲೀಸರು ಅಧಿಕಾರಿಗಳು ಅನಧಿಕೃತವಾಗಿ ಇಂತಹ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇದೇ ಸರ್ಕಾರ ಅಂತಲೂ ಅಲ್ಲ. ಹಿಂದಿನ ಸರ್ಕಾರದ ಅವಧಿಯಿಂದಲೂ ನನ್ನ ದೂರವಾಣಿ ಕದ್ದಾಲಿಕೆ ನಡೆಯುತ್ತಲೇ ಇದೆ. ಹಿಂದೆ ಯುಪಿಎ ಸರ್ಕಾರದಲ್ಲಿ ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌ ಅವರು ಕೆಲವೊಂದು ವಿಚಾರಗಳ ಬಗ್ಗೆ ನನ್ನ ಬಳಿ ಮಾತನಾಡಲು ಬಯಸಿ ಮೊಬೈಲ್‌ ಮೂಲಕ ಕರೆ ಮಾಡಬೇಡಿ. ಲ್ಯಾಂಡ್‌ ಲೈನ್‌ನಿಂದ ನನ್ನ ಕಚೇರಿ ಲ್ಯಾಂಡ್‌ಲೈನ್‌ಗೆ ಕರೆ ಮಾಡಿ ಎಂದೂ ಹೇಳಿದ್ದರು ಎಂಬುದನ್ನು ಬಹಿರಂಗಪಡಿಸಿದರು.

ಸಿದ್ದು ತೇಜೋವಧೆ ಮಾಡಿಲ್ಲ:
ವಾಚ್‌ ಪ್ರಕರಣದಲ್ಲಿ ನಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೇಜೋವಧೆ ಮಾಡಿಲ್ಲ. ಎರಡು ನಿಮಿಷದಲ್ಲಿ ಮುಗಿದು ಹೋಗುವ ವಿಷಯ ಮೈಮೇಲೆ ಎಳೆದುಕೊಂಡವರೇ ಮುಖ್ಯಮಂತ್ರಿಗಳು. ವಾಚ್‌ ಕುರಿತು ಪ್ರಸ್ತಾಪಿಸಿದಾಗ ನಾನು ಅದು ಕದ್ದ ವಾಚ್‌ ಅಂತಾಗಲಿ, ಉಡುಗೊರೆ ಅಂತಾಗಲಿ, ಅದರ ಮೌಲ್ಯದ ಬಗ್ಗೆಯಾಗಲಿ ಮಾತನಾಡಿಯೇ ಇರಲಿಲ್ಲ. ಸಮಾಜವಾದಿ ಎಂದು ಹೇಳಿಕೊಳ್ಳುವವರು ದುಬಾರಿ ವಾಚ್‌ ಯಾಕೆ ಕಟ್ಟುತ್ತಾರೆ ಎಂದಷ್ಟೇ ಹೇಳಿದ್ದೆ. ಆದರೆ, ಆ ಕುರಿತು ಮುಖ್ಯಮಂತ್ರಿಯವರು ನೀಡಿದ ಹೇಳಿಕೆಗಳೇ ಅನುಮಾನ ಮೂಡಿಸಿದವು. ಮಾಧ್ಯಮಗಳಲ್ಲೇ ಅದು ಹೆಚ್ಚು ಪ್ರಸಾರವಾದವು ಎಂದು ಹೇಳಿದರು.

ದುಬಾರಿ ವಾಚ್‌ ಇಲ್ಲ ಎಂದು ಒಮ್ಮೆ, ಉಡುಗೊರೆ ಕೊಟ್ಟಿದ್ದು, ಯಾರು ಕೊಟ್ಟರು ಗೊತ್ತಿಲ್ಲ ಅಂತ ಮತ್ತೂಮ್ಮೆ, ದುಬೈ ಸ್ನೇಹಿತ ಕೊಟ್ಟಿದ್ದು, ಪ್ರಮಾಣಪತ್ರ ಇದೆ ಅಂತ ಮಗದೊಮ್ಮೆ ಗೊಂದಲದ ಹೇಳಿಕೆ ಕೊಟ್ಟು ವಾಚ್‌ ರಾದ್ಧಾಂತ ಇಷ್ಟು ದೊಡ್ಡದಾಗಲು ಸಿದ್ದರಾಮಯ್ಯ ಅವರೇ ಕಾರಣ. ಮೊದಲೇ ಸ್ಪಷ್ಟನೆ ಕೊಟ್ಟು ಬಿಟ್ಟಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ ಎಂದು ತಿಳಿಸಿದರು.
-ಉದಯವಾಣಿ

Write A Comment