ಕರ್ನಾಟಕ

ಸಿದ್ದು ದಾಖಲೆ ಬಜೆಟ್‌ನಲ್ಲಿ ಕೃಷಿಗೆ ಒತ್ತು…ಹತ್ತು ಹಲವು ಘೋಷಣೆಗಳು ಹೊರ ಬೀಳುವ ಸಾಧ್ಯತೆ

Pinterest LinkedIn Tumblr

siddu

ಬೆಂಗಳೂರು: ರಾಜ್ಯವನ್ನು ಕಾಡುತ್ತಿರುವ ತೀವ್ರ ಬರಪರಿಸ್ಥಿತಿ, ಮುಂದುವರೆದ ರೈತರ ಆತ್ಮಹತ್ಯೆ ಸರಣಿಯಂತಹ ಕಹಿ ಘಟನೆಗಳ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ತಿಂಗಳ 18 ರಂದು ಮಂಡಿಸಲಿರುವ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ವಿಶೇಷ ಒತ್ತು, ಅನ್ನದಾತನಿಗೆ ಅನುಕೂಲ ಮಾಡಿಕೊಡುವ ಹತ್ತು ಹಲವು ಘೋಷಣೆಗಳು ಹೊರ ಬೀಳುವ ಸಾಧ್ಯತೆಗಳಿವೆ.

ಹಣಕಾಸು ಖಾತೆ ಹೊಂದಿರುವ ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ ದಾಖಲೆಯ 11ನೇ ಬಜೆಟ್ ಇದಾಗಿದ್ದು, ಮುಖ್ಯಮಂತ್ರಿಯಾಗಿ ಮಂಡಿಸಲಿರುವ 4ನೇ ಬಜೆಟ್ ಈ ತಿಂಗಳ 18 ರಂದು ಬೆಳಿಗ್ಗೆ 11.30ಕ್ಕೆ ಅವರು ವಿಧಾನಸಭೆಯಲ್ಲಿ 2016-17ನೇ ಸಾಲಿನ ಬಜೆಟ್ ಮಂಡಿಸಿ ದಾಖಲೆ ನಿರ್ಮಿಸಲಿದ್ದಾರೆ.

ಎಂಟು ವರ್ಷಗಳ ಕಾಲ ರಾಜ್ಯವನ್ನಾಳಿದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣಹೆಗ್ಡೆ ಅವರು 8 ಬಾರಿ ಬಜೆಟ್ ಮಂಡಿಸಿ ದಾಖಲೆ ನಿರ್ಮಿಸಿದ್ದರು. ಈ ದಾಖಲೆಯನ್ನು ಮುರಿದ ಹೆಗ್ಗಳಿಕೆ ಸಿದ್ದರಾಮಯ್ಯ ಅವರದ್ದಾಗಲಿದೆ.

ಕಳೆದ ಒಂದು ವರ್ಷದಲ್ಲಿ ರೈತರ ಆತ್ಮಹತ್ಯೆ ಸರಣಿ ಮುಂದುವರೆದಿರುವ ಹಿನ್ನೆಲೆಯಲ್ಲಿ ರೈತ ಸಮುದಾಯಕ್ಕೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಹಲವು ಕಾರ್ಯಕ್ರಮಗಳನ್ನು ಘೋಷಣೆ ಮಾಡುವ ಸಾಧ್ಯತೆಗಳಿವೆ.

ಕೃಷಿ, ನೀರಾವರಿ, ಹೈನುಗಾರಿಕೆ ಮುಂತಾದ ವಲಯಗಳಿಗೆ ಹೆಚ್ಚಿನ ಅನುದಾನ ಮೀಸಲಿಡುವ ಮೂಲಕ ರೈತಾಪಿ ವರ್ಗದ ಬದುಕು ಹಸನು ಮಾ‌ಡುವ ಸಂಕಲ್ಪವನ್ನು ಮುಖ್ಯಮಂತ್ರಿ ಬಜೆಟ್‌ನಲ್ಲಿ ಘೋಷಿಸಲಿದ್ದಾರೆನ್ನಲಾಗಿದೆ.

ರಾಜ್ಯವನ್ನು ಕಾಡುತ್ತಿರುವ ಬರಪರಿಸ್ಥಿತಿ ರೈತರ ಬೆಳೆ ನಾಶದಂತಹ ಕಹಿ ಘಟನೆಗಳಿಂದ ತತ್ತರಿಸಿರುವ ಜನರ ಮನಸ್ಸಿಗೆ ನೆಮ್ಮದಿ ತರುವಂತಹ ಕಾರ್ಯಕ್ರಮಗಳು ಬಜೆಟ್‌ನಲ್ಲಿರಲಿವೆ ಎಂದು ನಿರೀಕ್ಷಿಸಲಾಗಿದೆ.

ಕಳೆದ ವರ್ಷದ ಬಜೆಟ್‌ನಲ್ಲಿ ಹಿಂದುಳಿದವರ, ದೀನ ದಲಿತರ, ಶೋಷಿತ ಸಮುದಾಯಗಳಿಗೆ ವಿಶೇಷ ಒತ್ತು ಹಾಗೂ ಹೆಚ್ಚಿನ ಅನುದಾನ ಒದಗಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಬಾರಿಯ ಬಜೆಟ್ ವಿಭಿನ್ನ ರೀತಿಯಲ್ಲಿರುವಂತೆ ಹೊರ ತರುವಲ್ಲಿ ಮಗ್ನರಾಗಿದ್ದಾರೆ.

ಬಜೆಟ್‌ಗೆ ಪೂರ್ವಭಾವಿಯಾಗಿ ಕಳೆದ ಕೆಲವು ದಿನಗಳಿಂದ ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಸಮುದಾಯಗಳ ಮುಖಂಡರು, ರೈತ ನಾಯಕರು, ಸಂಘಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುತ್ತಿರುವ ಮುಖ್ಯಮಂತ್ರಿ ಅಂತಿಮ ಹಂತದ ಚರ್ಚೆಯಲ್ಲಿ ತೊಡಗಿದ್ದಾರೆ.

`ಸರ್ಕಾರ ಇನ್ನೂ ಟೇಕಾಫ್’ ಆಗಿಲ್ಲ ಎಂಬ ಪ್ರತಿಪಕ್ಷಗಳ ಮೂದಲಿಕೆಗಳಿಗೆ ಉತ್ತರ ನೀಡುವ ಪ್ರಯತ್ನ ಅವರಿಂದಾಗಲಿದೆ. ಆಡಳಿತಯಂತ್ರಕ್ಕೆ ಚುರುಕು ಮುಟ್ಟಿಸಿ, ಸರ್ಕಾರ ಜಾರಿಗೊಳಿಸಲಿರುವ ಜನಪರ ಯೋಜನೆಗಳ ಲಾಭ, ಅರ್ಹ ಫಲಾನುಭವಿಗಳಿಗೆ ತಲುಪಿಸುವಂತೆ ಕಟ್ಟುನಿಟ್ಟಿನ ಸೂಚನೆಗಳೂ ಬಜೆಟ್ ಮೂಲಕ ಹೊರಬರಲಿವೆ ಎಂಬ ನಿರೀಕ್ಷೆ ಜನಸಾಮಾನ್ಯರಲ್ಲಿದೆ.

Write A Comment