ಕರ್ನಾಟಕ

ಬಿಎಸ್‌ವೈಗೆ ಉಗಾದಿಗೆ ಬಿಜೆಪಿ ಸಾರಥ್ಯ

Pinterest LinkedIn Tumblr

yaddi

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಸಾರಥ್ಯ ವಹಿಸಿಕೊಳ್ಳುವ ದಿನಗಳು ಸಮೀಪಿಸುತ್ತಿದ್ದು, ಯುಗಾದಿ ಹಬ್ಬದ ವೇಳೆಗೆ ಈ ಸಂಬಂಧ ಅಧಿಕೃತ ಪ್ರಕಟಣೆ ಹೊರಬೀಳುವುದು ನಿಚ್ಚಳವಾಗಿದೆ.

ಯಡಿಯೂರಪ್ಪ ಅವರು ಪ್ರಶ್ನಾತೀತ ನಾಯಕರಾಗಿದ್ದು, ಅವರ ವಿರುದ್ಧ ಆಗೊಮ್ಮೆ ಈಗೊಮ್ಮೆ ಸೊಲ್ಲೆತ್ತುತ್ತಿದ್ದ ದನಿಗಳ ಸದ್ದು ಅ‌ಡಗಿದೆ. ಹಾಗಾಗಿ ಯಡಿಯೂರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಏರುವ ಕಾಲ ಸನ್ನಿಹಿತವಾಗಿದೆ.

2018ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಅಣಿಗೊಳಿಸುವ ಸಾಮರ್ಥ್ಯ ಯಡಿಯೂರಪ್ಪ ಅವರಿಗೆ ಮಾತ್ರವೇ ಇದೆ ಎಂಬ ವಾಸ್ತವ ಸ್ಥಿತಿ ಪಕ್ಷದ ಕೇಂದ್ರ ವರಿಷ್ಠರಿಗೂ ಮನವರಿಕೆಯಾಗಿದೆ. ಪಕ್ಷದ ಹಾಲಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರ ಅಧಿಕಾರಾವಧಿ ಈ ತಿಂಗಳಾಂತ್ಯಕ್ಕೆ ಪೂರ್ಣಗೊಳ್ಳಲಿದ್ದು, ತೆರವಾಗಲಿರುವ ಸ್ಥಾನವನ್ನು ಯಡಿಯೂರಪ್ಪ ಅಲಂಕರಿಸಲಿದ್ದಾರೆ.

ಯಡಿಯೂರಪ್ಪ ಅವರ ವಿರುದ್ಧದ ಆರೋಪಗಳಿಂದ ಖುಲಾಸೆಯಾಗಿ ಪಕ್ಷದ ಅಧ್ಯಕ್ಷ ಸ್ಥಾನ ಅಲಂಕರಿಸಲು ಯಾವುದೇ ಅಡ್ಡಿ ಆತಂಕಗಳಿಲ್ಲವಾಗಿದೆ.

ಅಧ್ಯಕ್ಷಗಾದಿಗೇರಲು ತೀವ್ರ ಉತ್ಸುಕತೆ ತೋರಿದ್ದ ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್, ಈಶ್ವರಪ್ಪ, ಆರ್. ಅಶೋಕ್, ಸಿ.ಟಿ. ರವಿ, ಅವರೆಲ್ಲ ಈಗ ಹಿಂದೆ ಸರಿದಿದ್ದು, ಯಡಿಯೂರಪ್ಪ ಅವರಿಗೆ ಹಾದಿ ಸುಗಮವಾಗಿದೆ.

ಅಶೋಕ್ ಬೆಂಬಲ
ಅಶೋಕ್ ಅವರಿಂದು ಬೆಳಿಗ್ಗೆ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಪಕ್ಷದ ಸಾರಥ್ಯವನ್ನು ನೀವೇ ವಹಿಸಿಕೊಳ್ಳಬೇಕು. ನಿಮಗೆ ನಮ್ಮ ಸಂಪೂರ್ಣ ಬೆಂಬಲ ಹಾಗೂ ಸಹಕಾರವಿರುತ್ತದೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಹೆಸರು ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬಂದಿತ್ತು. ಆದು ಅಷ್ಟೇ ಬೇಗನೆ ತೆರೆಮರೆಗೆ ಸರಿದಂತಾಗಿದೆ. ಯಡಿಯೂರಪ್ಪ ಅವರನ್ನು ವಿರೋಧಿಸುತ್ತಲೇ ಬಂದಿದ್ದ ಕೇಂದ್ರ ಸಚಿವ ಅನಂತ ಕುಮಾರ್ ಬಣ ಕೂಡಾ ಮೌನಕ್ಕೆ ಶರಣಾಗಿದೆ.

ದೈತ್ಯ ಶಕ್ತಿ
ರಾಜ್ಯಾದ್ಯಂತ ಪ್ರವಾಸ ಮಾಡಿ, ಪಕ್ಷದ ಸಂಘಟನೆ ಬಲಪಡಿಸುವಂತಹ ದೈತ್ಯ ಶಕ್ತಿ ಯಡಿಯೂರಪ್ಪ ಅವರಿಗೆ ಮಾತ್ರವೇ ಇದೆ ಎಂಬುದು ಹಲವು ಬಾರಿ ಸಾಬೀತಾಗಿದೆ.

ಇತ್ತೀಚೆಗೆ ವಿಧಾನಸಭೆಯ 3 ಕ್ಷೇತ್ರಗಳಿಗೆ ನಡೆದ ಉಪಚನಾವಣೆ ಹಾಗೂ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲೂ ಯಡಿಯೂರಪ್ಪ ಬಿರುಸಿನ ಪ್ರಚಾರ ಮಾಡಿ, ಪಕ್ಷದ ಗೆಲುವಿಗೆ ಅಪಾರವಾಗಿ ಶ್ರಮಿಸಿರುವುದು ಎಲ್ಲ ನಾಯಕರಿಗೆ ಮನದಟ್ಟಾಗಿದೆ.

ಯಡಿಯೂರಪ್ಪ ಅವರು ಪಕ್ಷದ ರಾಜ್ಯಾಧ್ಯಕ್ಷರಾಗಲು ಆರ್ಎಸ್ಎಸ್ ಬೆಂಬಲವೂ ಇದ್ದು, ಅಲ್ಲಿಂದ ಹಸಿರು ನಿಶಾನೆ ತೋರಿಸಲಾಗಿದೆ. ಈ ಎಲ್ಲ ಕಾರಣಗಳಿಂದಾಗಿ ಸದ್ಯದಲ್ಲೇ ಬಿಜೆಪಿ ಮುನ್ನಡೆಸುವ ಜವಾಬ್ದಾರಿ ಯಡಿಯೂರಪ್ಪ ಅವರ ಹೆಗಲೇರಲಿದೆ.

Write A Comment