ಕರ್ನಾಟಕ

ಮುಚ್ಚಳಿಕೆ ಬರೆದುಕೊಟ್ಟ ದರ್ಶನ್‌ ಹೇಳಿದ್ದೇನು …?

Pinterest LinkedIn Tumblr

darshan

ಬೆಂಗಳೂರು: ಕೌಟುಂಬಿಕ ಕಲಹ ಸಂಬಂಧ ನಟ ದರ್ಶನ್ ಕೊನೆಗೂ ಶನಿವಾರ ತ್ಯಾಗರಾಜನಗರ ಎಸಿಪಿ ಕಚೇರಿಗೆ ಹಾಜರಾಗಿ ಒಂದು ತಾಸು ವಿಚಾರಣೆ ಎದುರಿಸಿದರು. ನಂತರ ಮುಚ್ಚಳಿಕೆ ಬರೆದುಕೊಟ್ಟು ಹೊರ ಬಂದರು.

ಮತ್ತೊಂದೆಡೆ ಹಿರಿಯ ನಟ ಅಂಬರೀಷ್ ಮಧ್ಯಸ್ಥಿಕೆಯಲ್ಲಿ ಸಂಧಾನ ಪ್ರಕ್ರಿಯೆ ಬಿರುಸುಗೊಂಡಿತು. ಪತ್ನಿ ಠಾಣೆ ಮೆಟ್ಟಿಲೇರಿದ ಬಳಿಕ ಮೈಸೂರಿಗೆ ತೆರಳಿದ್ದ ದರ್ಶನ್, ಶನಿವಾರ ಬೆಳಿಗ್ಗೆ ನಗರಕ್ಕೆ ವಾಪಸಾದರು. ರಾಜರಾಜೇಶ್ವರಿನಗರದ ತಮ್ಮ ಮನೆಗೆ ಹೋಗಿ ಅಲ್ಲಿಂದ ಬೆಳಿಗ್ಗೆ 11.55ಕ್ಕೆ ಎಸಿಪಿ ಕಚೇರಿಗೆ ಬಂದರು.

‘ಬನಶಂಕರಿ ಎಸಿಪಿ ಹಾಗೂ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಇನ್‌ಸ್ಟೆಕ್ಟರ್ ವಿಚಾರಣೆ ನಡೆಸಿದರು. ಕೇಳಿದ ಪ್ರಶ್ನೆಗಳಿಗೆ ಅವರು ಸಮಾಧಾನದಿಂದಲೇ ಉತ್ತರಿಸಿದರು. ಮಾರ್ಚ್‌ 9ರಂದು ಮಗನನ್ನು ನೋಡಲು ಅಪಾರ್ಟ್‌ಮೆಂಟ್ ಬಳಿ ಹೋಗಿದ್ದು ನಿಜ. ಆದರೆ, ಪತ್ನಿಗೆ ಯಾವುದೇ ತೊಂದರೆ ಕೊಟ್ಟಿಲ್ಲವೆಂದು ಹೇಳಿದ್ದಾರೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಕುಮಾರ್ ತಿಳಿಸಿದರು.

‘ದರ್ಶನ್ ಬರುವ ವಿಷಯ ತಿಳಿದು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಎದುರು ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರು. ಹೀಗಾಗಿ ವಿಚಾರಣೆಯನ್ನು ತ್ಯಾಗರಾಜನಗರದಲ್ಲಿ ಇಟ್ಟುಕೊಂಡೆವು. ಮಾಧ್ಯಮಗಳ ಮೂಲಕ ಈ ವಿಚಾರ ತಿಳಿದುಕೊಂಡ ಜನ, ಇಲ್ಲಿಗೂ ಬಂದರು. ದರ್ಶನ್ ಅವರಿಂದ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಲಾಯಿತು’ ಎಂದು ಮಾಹಿತಿ ನೀಡಿದರು.

‘ಪತ್ನಿ ವಾಸವಾಗಿರುವ ಫ್ಲ್ಯಾಟ್‌ಗೆ ಬಾಡಿಗೆ ಕಟ್ಟುತ್ತಿರುವ ನನಗೆ ಅಲ್ಲಿಗೆ ಹೋಗುವ ಹಕ್ಕಿದೆ. ಅರ್ಧ ಗಂಟೆ ಬೆಲ್ ಮಾಡಿದರೂ ಪತ್ನಿ ಬಾಗಿಲು ತೆರೆಯಲಿಲ್ಲ. ಅದಕ್ಕೆ ಏನು ಕಾರಣ ಎಂಬುದು ನನಗೆ ಗೊತ್ತಿಲ್ಲ. ಬಾಗಿಲು ತೆಗೆದಿದ್ದರೆ ಇಷ್ಟೆಲ್ಲ ರಾದ್ಧಾಂತ ಆಗುತ್ತಿರಲಿಲ್ಲ’ ಎಂದು ದರ್ಶನ್ ಹೇಳಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Write A Comment