
ಬೆಂಗಳೂರು: ತ್ಯಾಗರಾಜನಗರ ಪೊಲೀಸರಿಗೆ ದರ್ಶನ್ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ‘ಮಾರ್ಚ್ 9ರ ಸಂಜೆ ಏಳು ಗಂಟೆಗೆ ಮಗ ವಿನೀಶ್ನನ್ನು ನೋಡಲು ಅಪಾರ್ಟ್ಮೆಂಟ್ ಬಳಿ ಹೋಗಿದ್ದೆ. ಪತ್ನಿ ವಾಸವಿರುವ ಫ್ಲ್ಯಾಟ್ ಸಂಖ್ಯೆ 4154ಗೆ ಹೋಗುತ್ತಿದ್ದಾಗ ನನ್ನನ್ನು ತಡೆದ ಭದ್ರತಾ ಸಿಬ್ಬಂದಿ, ಮೇಲೆ ಹೋಗದಂತೆ ಸೂಚಿಸಿದರು’ ಎಂದು ಅದರಲ್ಲಿ ಬರೆದಿದ್ದಾರೆ.
‘ಮಗನನ್ನು ನೋಡಿಕೊಂಡು ವಾಪಸ್ ಹೋಗುತ್ತೇನೆ ಎಂದು ಲಿಫ್ಟ್ನಲ್ಲಿ ಮಹಡಿಗೆ ಹೋದೆ. ಹಲವು ಸಲ ಬೆಲ್ ಮಾಡಿದರೂ ಪತ್ನಿ ಬಾಗಿಲು ತೆಗೆಯಲಿಲ್ಲ. ವಾಪಸ್ ಹೊರಡುವಾಗ ಪುನಃ ಬಂದ ಕಾವಲುಗಾರ, ಮನೆಯಲ್ಲಿ ಯಾರೂ ಇಲ್ಲ ಎಂದು ಹೇಳಿದರೂ ಏಕೆ ಬಂದಿರಿ ಎಂದು ಕೇಳಿದ. ಆಯಿತು ಪಕ್ಕಕ್ಕೆ ನಿಂತುಕೊಳ್ಳಿ ಎಂದು ಹೊರಟು ಹೋದೆ’.
‘ಆ ದಿನ ನಾನು ಪತ್ನಿಯನ್ನು ಮುಖಾಮುಖಿ ಭೇಟಿಯಾಗಲಿಲ್ಲ. ಇದು ನಮ್ಮ ಕುಟುಂಬದ ಸಮಸ್ಯೆ ಆಗಿರುವುದರಿಂದ ಹಿರಿಯರು ಹಾಗೂ ಚಿತ್ರರಂಗದ ಗಣ್ಯರು ಸೇರಿ ಮಾತನಾಡಿ ಬಗೆಹರಿಸಿಕೊಳ್ಳುತ್ತೇವೆ’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. ಅಂಬರೀಷ್ ಸಂಧಾನ: ಪೊಲೀಸ್ ವಿಚಾರಣೆ ಮುಗಿಸಿಕೊಂಡು ನೇರವಾಗಿ ಅಂಬರೀಷ್ ಮನೆಗೆ ತೆರಳಿದ ದರ್ಶನ್, ಒಂದು ಗಂಟೆಗೂ ಹೆಚ್ಚು ಕಾಲ ಅವರ ಮುಂದೆ ಅಳಲು ತೋಡಿಕೊಂಡರು. ‘ಮಗನನ್ನು ನೋಡಲು ಬಿಡದೆ ನನ್ನಿಂದ ದೂರ ಮಾಡಲು ಪತ್ನಿ ಪ್ರಯತ್ನಿಸುತ್ತಿದ್ದಾಳೆ’ ಎಂದು ಅವರು ಗದ್ಗದಿತರಾದರು ಎಂದು ಗೊತ್ತಾಗಿದೆ.
ಗಲಾಟೆ ಮುಂದುವರಿಸಿಕೊಂಡು ಹೋಗದೇ ಕಲಹವನ್ನು ಇಲ್ಲಿಗೇ ನಿಲ್ಲಿಸುವಂತೆ ದರ್ಶನ್ಗೆ ಸಲಹೆ ನೀಡಿರುವ ಅಂಬರೀಷ್, ‘ಭಾನುವಾರ ಅಥವಾ ಸೋಮವಾರ ದಂಪತಿಯನ್ನು ಮುಖಾಮುಖಿ ಕೂಡಿಸಿ, ಕಲಹವನ್ನು ಕೊನೆಗಾಣಿಸುತ್ತೇನೆ’ ಎಂದು ಸುದ್ದಿಗಾರರಿಗೆ ತಿಳಿಸಿದರು. ಸಂಧಾನದ ವೇಳೆ ನಟಿ ಪೂಜಾ ಗಾಂಧಿ ಸಹ ಇದ್ದರು. ‘ಬೇರೆ ಕೆಲಸದ ನಿಮಿತ್ತ ಅಂಬರೀಷ್ ಮನೆಗೆ ಬಂದಿದ್ದೆ’ ಎಂದು ಅವರು ಹೇಳಿದರು.
ಪ್ರಕರಣ ಮುಕ್ತಾಯ
‘ದರ್ಶನ್ ವಿರುದ್ಧ ದೂರು ನೀಡಿದ್ದ ವಿಜಯಲಕ್ಷ್ಮಿ ಹಾಗೂ ಸೆಕ್ಯುರಿಟಿ ಗಾರ್ಡ್ ದೇವರಾಜ್ ಅವರ ವಿಚಾರಣೆಯನ್ನೂ ನಡೆಸುತ್ತೇವೆ. ಅವರ ಹೇಳಿಕೆ ಪಡೆದುಕೊಂಡ ಬಳಿಕ ಪ್ರಕರಣ ಮುಕ್ತಾಯಗೊಳಿಸುತ್ತೇವೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ಕುಮಾರ್ ತಿಳಿಸಿದ್ದಾರೆ.