ಕರ್ನಾಟಕ

ಸಚಿವ ಕೆ.ಜೆ.ಜಾರ್ಜ್ ಅವರು ಉಳಿಸಿಕೊಂಡಿರುವ ತೆರಿಗೆ ಮೊತ್ತ ಬರೋಬ್ಬರಿ 15 ಕೋಟಿ ರೂ…!

Pinterest LinkedIn Tumblr

hilton

ಬೆಂಗಳೂರು: ಸಾರ್ವಜನಿಕರಿಂದ ಕಡ್ಡಾಯವಾಗಿ ತೆರಿಗೆ ವಸೂಲು ಮಾಡಬೇಕು. ಬಿಬಿಎಂಪಿ ಅಧಿಕಾರಿಗಳು ತಿಂಗಳಾಂತ್ಯದೊಳಗೆ ಬಾಕಿ ಇರುವ 505 ಕೋಟಿ ರೂ. ವಸೂಲಿ ಮಾಡದಿದ್ದರೆ, ತಲೆ ದಂಡ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿರುವ ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರೇ ಬಾಕಿ ಉಳಿಸಿಕೊಂಡಿರುವ ತೆರಿಗೆ ಮೊತ್ತ ಬರೋಬ್ಬರಿ 15 ಕೋಟಿ ರೂ…! ಇದು ಚಲ್ಲಘಟ್ಟ ಗ್ರಾಮದಲ್ಲಿರುವ ಜಾರ್ಜ್ ಒಡೆತನದ ಹಿಲ್ಟನ್ ಕಟ್ಟಡಕ್ಕೆ ಪಾವತಿಸಬೇಕಾದ ತೆರಿಗೆ ಮೊತ್ತ.

ಕಳೆದ 2011ರಲ್ಲಿ ಹಿಲ್ಟನ್ ಕಟ್ಟಡ ಕಟ್ಟಲು ಒ.ಸಿ ಪಡೆದ ಜಾರ್ಜ್ ಸಾಹೇಬ್ರು ಕಳೆದ ಐದು ತಿಂಗಳಿನಿಂದಲೂ ಬಿಬಿಎಂಪಿಗೆ ನಯಾಪೈಸೆ ತೆರಿಗೆಯನ್ನು ಪಾವತಿಸಿಲ್ಲ. 41,634 ಸುತ್ತಳತೆಯಲ್ಲಿ ನಿರ್ಮಿಸಲಾಗಿರುವ ಈ ಬೃಹತ್ ಕಟ್ಟಡ 14,850 ಸುತ್ತಳತೆಯ ಕಾರು ಪಾರ್ಕಿಂಗ್ ಹೊಂದಿದೆ. 2011ರಲ್ಲಿ ನಿರ್ಮಿಸಿದ ಈ ಕಟ್ಟಡವನ್ನು ಉದ್ಘಾಟನೆ ಮಾಡಿದ್ದು ಸ್ವತಃ ಮುಖ್ಯಮಂತ್ರಿಗಳೇ ಎಂಬುದು ಇಲ್ಲಿ ಉಲ್ಲೇಖಾರ್ಹ. ಪ್ರತಿ ವರ್ಷ ಈ ಕಟ್ಟಡಕ್ಕೆ ಸುಮಾರು 2 ಕೋಟಿ ತೆರಿಗೆ ಪಾವತಿಸಬೇಕು. ಒಂದು ವೇಳೆ ನಿಗದಿತ ವೇಳೆಗೆ ತೆರಿಗೆ ಪಾವತಿಸದಿದ್ದರೆ ಶೇ.2ರಷ್ಟು ದಂಡ ಕಟ್ಟುವುದು ಕಡ್ಡಾಯ.

ಆದರೆ ಜಾರ್ಜ್ ಸಾಹೇಬರು 2011ರಿಂದ 2016ವರೆಗೂ ಈ ಕಟ್ಟಡದ ತೆರಿಗೆ ಪಾವತಿಸಿಲ್ಲ. ಹೀಗಾಗಿ ಬರೋಬ್ಬರಿ 12,57,93,334 ರೂ. ತೆರಿಗೆ ಪಾವತಿಸಬೇಕಿದೆ. ಈ ಮೊತ್ತಕ್ಕೆ ಶೇ.2 ರಷ್ಟು ದಂಡ ವಿಧಿಸಿದರೆ ಸುಮಾರು 15 ಕೋಟಿ ರೂ.ಗಳಷ್ಟು ತೆರಿಗೆ ಪಾವತಿಸಬೇಕಿದೆ. ಇತ್ತೀಚೆಗೆ ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಹಮ್ಮಿಕೊಂಡಿದ್ದ ವಿಶೇಷ ತೆರಿಗೆ ವಸೂಲಾತಿ ಆಂದೋಲನದಲ್ಲಿ ಪಾಲ್ಗೊಂಡಿದ್ದ ಜಾರ್ಜ್ ಅವರು ಸಾರ್ವಜನಿಕರು ಕಡ್ಡಾಯವಾಗಿ ತೆರಿಗೆ ಪಾವತಿಸಲೇಬೇಕು ಎಂದು ಕಟ್ಟಪ್ಪಣೆ ಹೊರಡಿಸಿದ್ದರು.

ಮಾರ್ಚ್ ಅಂತ್ಯದ ವೇಳೆಗೆ ಬಾಕಿ ಇರುವ 505 ಕೋಟಿ ರೂ.ಗಳನ್ನು ವಸೂಲಿ ಮಾಡದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಗುಡುಗಿದ್ದರು. ಆದರೆ ಅದೇ ಸಚಿವರು ಕಳೆದ ಐದು ವರ್ಷಗಳಿಂದ 15 ಕೋಟಿ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿರುವುದು ಇದೀಗ ದಾಖಲೆ ಸಮೇತ ಬಹಿರಂಗಗೊಂಡಿದೆ. ಸಚಿವರ ಈ ವರ್ತನೆ ನೋಡಿದರೆ ವೇದಾಂತ ಹೇಳೋಕೆ ಬದನೆಕಾಯಿ ತಿನ್ನೋಕೆ ಅನ್ನೋ ಗಾದೆಯಂತಿದೆ ಎಂದು ಬೆಂಗಳೂರು ನಾಗರಿಕರು ಮಾತನಾಡಿಕೊಳ್ಳುತ್ತಿದ್ದಾರೆ.

Write A Comment