
ಬೆಂಗಳೂರು: ಸಾರಿಗೆ ಸಂಸ್ಥೆಯ ಐಷಾರಾಮಿ ಬಸ್‌ಗಳಲ್ಲಿ ಕ್ರಿಯಾತ್ಮಕ ದರಗಳ ಪದ್ಧತಿ ಜಾರಿಗೆ ತರಲು ತೀರ್ಮಾನಿಸಲಾಗಿದೆ. ಬೆಂಗಳೂರು-ಪುಣೆ, ಮುಂಬೈ, ಶಿರಡಿ ಮತ್ತು ಪಣಜಿ ಮಾರ್ಗಗಳಲ್ಲಿ ಸಂಚರಿಸುವ ಐರಾವತ ಕ್ಲಬ್ ಕ್ಲಾಸ್, ಐರಾವತ ಡೈಮಂಡ್ ಕ್ಲಾಸ್ ಮತ್ತು ಎಸಿ ಸ್ಲೀಪರ್ ಬಸ್‌ಗಳಲ್ಲಿ ಮೂರು ತಿಂಗಳಲ್ಲಿ ಪ್ರಾಯೋಗಿಕವಾಗಿ ಏರ್‌ಲೈನ್ಸ್ ಮಾದರಿಯ ಕ್ರಿಯಾತ್ಮಕ ದರ ಪದ್ಧತಿ ಜಾರಿಗೆ ತರಲಾಗುವುದು ಎಂದು ಸಾರಿಗೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಖಾಸಗಿ ಬಸ್‌ಗಳಲ್ಲಿ ಲಭ್ಯತೆಗನುಗುಣವಾಗಿ ಪ್ರಯಾಣ ದರಗಳನ್ನು ಬದಲಾಯಿಸುತ್ತಿರುತ್ತಾರೆ. ವಿಮಾನಯಾನ ಸಂಸ್ಥೆಗಳಂತೆ, ನಿಗಮದ ಬಸ್ಸುಗಳಲ್ಲೂ ದರಗಳಿಗೆ ಕ್ರಿಯಾತ್ಮಕ ಪದ್ಧತಿ ಅನ್ವಯವಾಗಲಿದೆ. ಮುಂಚಿತವಾಗಿ ಟಿಕೆಟ್ ಕಾಯ್ದಿರಿಸುವ ಪ್ರಯಾಣಿಕರಿಗೆ ಶೇಕಡಾ 20 ರಷ್ಟು ಕಡಿಮೆ ದರಗಳಲ್ಲಿ ಆಸನಗಳು ಲಭ್ಯವಾಗಲಿದೆ. ಬಸ್ಸುಗಳಲ್ಲಿ ಟಿಕೇಟ್ ಪಡೆದು ಪ್ರಯಾಣಿಸುವ ಪ್ರಯಾಣಿಕರಿಗೆ, ಮುಂಗಡ ಟಿಕೇಟ್ ಪಡೆದಿರುವ ಕೊನೆಯ ಟಿಕೇಟ್‌ನ ದರಗಳ ಸಮನಾಗಿ ಪ್ರಯಾಣದರವನ್ನು ವಿಧಿಸಲಾಗುವುದು. ಕೊನೆಯ ಟಿಕೇಟ್ ಶೇ.80 ರಷ್ಟು ದರದಲ್ಲಿ ವಿತರಣೆಯಾಗಿದ್ದಲ್ಲಿ, ಅದೇ ದರವನ್ನು (ಸಾಮಾನ್ಯ ದರಗಳಿಗಿಂತ ಕಡಿಮೆ ಅಂದರೆ ಶೇ.80 ರಷ್ಟು) ನೇರ ಟಿಕೇಟ್ ಪಡೆದು ಪ್ರಯಾಣಿಸುವ ಪ್ರಯಾಣಿಕರಿಗೆ ವಿಧಿಸಲಾಗುತ್ತದೆ.
ಕ್ರಿಯಾತ್ಮಕ ಪ್ರಯಾಣದರ ರಚನೆಯನ್ನು, ನಿಗಮದ ಆದಾಯ ಕಾರ್ಯಕ್ಷಮತೆ, ಪ್ರಯಾಣಿಕರ ಸಾಂದ್ರತೆ (ಲೋಡ್ ಪ್ಯಾಕ್ಟರ್) ಮತ್ತು ಪ್ರಯಾಣಿಕರ ಪ್ರತಿಕ್ರಿಯೆಯನ್ನಾಧರಿಸಿ ಪರಾಮರ್ಶಿಸಲಾಗುವುದು. ಪ್ರಯಾಣಿಕರು ತಮ್ಮ ಅನಿಸಿಕೆ ಸಲಹೆಗಳನ್ನು ZಡಿZಠಿZಃhoಠ್ಚಿ.ಟ್ಟಜ ಕಳುಹಿಸಲು ಕೋರಲಾಗಿದೆ.