ಕರ್ನಾಟಕ

ಕೊಬ್ಬರಿ ಬೆಳೆಗಾರರಿಗೆ ಆನ್‌ಲೈನ್‌ನಲ್ಲಿ ಹಣ ವರ್ಗಾವಣೆ

Pinterest LinkedIn Tumblr

kobbariತಿಪಟೂರು, ಮಾ.10- ರೈತರ ಕೊಬ್ಬರಿಗೆ ಹೆಚ್ಚಿನ ಬೆಲೆ ಸಿಗುವ ನಿಟ್ಟಿನಲ್ಲಿ ಆನ್‌ಲೈನ್ ಮುಖಾಂತರ ರೈತರಿಗೆ ಹಣ ವರ್ಗಾವಣೆ ಮಾಡಲು ಕೊಬ್ಬರಿ ವರ್ತಕ ಸಂಘದ ವರ್ತಕರು ಒಪ್ಪಿಕೊಂಡಿದ್ದಾರೆ. ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿ ಆಯೋಜಿಸಿದ್ದ ಕೊಬ್ಬರಿ ಖರೀದಿಗೆ ಆನ್‌ಲೈನ್ ಮುಖಾಂತರ ಹಣ ವರ್ಗಾವಣೆಯ ಬಗ್ಗೆ ವರ್ತಕರ ಸಭೆ ನಡೆಸಿದ ಶಾಸಕ ಕೆ.ಷಡಕ್ಷರಿ, ಅನೇಕ ತೊಂದರೆಗಳಿಂದಾಗಿ ರೈತರಿಗೆ ಆನ್‌ಲೈನ್ ಮುಖಾಂತರವಾಗಿ ಹಣ ವರ್ಗಾವಣೆ ಕಾರ್ಯ ಕುಂಠಿತಗೊಂಡಿದ್ದು, ರೈತಸಂಘದ ಸದಸ್ಯರು ರೈತರ ಬಗ್ಗೆ ಸರ್ಕಾರ ಯಾವುದೇ ರೀತಿಯ ಸೌಲಭ್ಯಗಳನ್ನು ನೀಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸುತ್ತಿದ್ದಾರೆ.

ರೈತರಿಗೆ ಆನ್‌ಲೈನ್ ಮುಖಾಂತರ ಹಣ ವರ್ಗಾವಣೆಯ ಬಗ್ಗೆ ಸರಿಯಾದ ಮಾಹಿತಿಗಳು ಲಭ್ಯವಾಗದೆ ಕುಂಠಿತಗೊಂಡಿದೆ. ಶೇ.25ರಷ್ಟು ಹಣ ರೈತರಿಗೆ ಆನ್‌ಲೈನ್ ಮುಖಾಂತರ ವರ್ಗಾವಣೆಯಾದರೆ ಯಾವುದೇ ರೀತಿಯ ಮೋಸ, ವಂಚನೆಗಳು ಆಗದಂತಾಗುತ್ತದೆ. ಪ್ರಯೋಗಿಕವಾಗಿ ತಿಪಟೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪ್ರಥಮ ಬಾರಿಗೆ ಈ ಯೋಜನೆ ಪ್ರಾರಂಭಿಸಲಾಗಿದೆ ಎಂದರು. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಮಾರುಕಟ್ಟೆ ಮತ್ತು ಉಪ ಮಾರುಕಟ್ಟೆಗಳಿಗೂ ಇದನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದರು.

ವರ್ತಕ ಟಿ.ಎಸ್.ಶಿವಪ್ರಕಾಶ್ ಮಾತನಾಡಿ ರೈತರಿಗೆ ಆನ್‌ಲೈನ್ ಮುಖಾಂತರ ಹಣ ವರ್ಗಾವಣೆಗೆ ಯಾವುದೇ ಅಡ್ಡಿಯಿಲ್ಲ. ಆದರೆ ಅದನ್ನು ಶೇ.100ರಷ್ಟು ಜಾರಿಗೊಳಿಸಿದಾಗ ಎಲ್ಲರಿಗೂ ಅನುಕೂಲವಾಗುತ್ತದೆ ಎಂದರು. ಕೇಂದ್ರ ಕಚೇರಿಯ ಹೆಚ್ಚುವರಿ ನಿರ್ದೇಶಕ ಶಾಂತರಾಮ್ ಮಾತನಾಡಿ, ವರ್ತಕರು ರೈತರ ಹಣದಲ್ಲಿ ಲಾಭ ಮಾಡಿಕೊಳ್ಳುವ ಕಾಲ ಹೊರಟು ಹೋಗಿದೆ. ಪಾರದರ್ಶಕ ವ್ಯವಹಾರಕ್ಕೆ ಸಹಕರಿಸಿ. ಇಂದಿನ ದಿನಗಳಲ್ಲಿ ರೈತರ ಮಕ್ಕಳು ಸಹ ಆನ್‌ಲೈನ್ ಮುಖಾಂತರ ಹಣ ವರ್ಗಾವಣೆ ಮಾಡುತ್ತಿದ್ದಾರೆ ಎಂದು ಹೇಲಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ರೈತರು ಮತ್ತು ವರ್ತಕರು ಸಮಿತಿಯ ಎರಡು ಕಣ್ಣುಗಳಿದ್ದಂತೆ ಇಬ್ಬರಿಗೂ ಒಳ್ಳೆಯದಾಗಲು ಸಹಕಾರ ನೀಡಲಾಗುವುದು ಎಂದರು. ಕೇಂದ್ರ ಕಚೇರಿಯ ಹೆಚ್ಚುವರಿ ನಿರ್ದೇಶಕ ಶಾಂತರಾಮ್‌ರವರಿಗೆ ಸಮಿತಿಯ ವತಿಯಿಂದ ಇದೇ ವೇಳೆ ಸನ್ಮಾನಿಸಲಾಯಿತು. ಸಭೆಯಲ್ಲಿ ಜಿಲ್ಲಾ ಉಪ ನಿರ್ದೇಶಕ ಡಾ.ರಾಜಣ್ಣ, ಹೊನ್ನವಳ್ಳಿ ಜಿ.ಪಂ.ಸದಸ್ಯ ಜಿ.ನಾರಾಯಣ, ವರ್ತಕರು ಮತ್ತು ರೈತರು ಉಪಸ್ಥಿತರಿದ್ದರು.

Write A Comment