ಬೆಂಗಳೂರು, ಮಾ. ೧೦- ಜೆಡಿಎಸ್‌ನ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ರಾಜಕೀಯದಿಂದ ನಿವೃತ್ತಿಯಾಗಬಾರದು. ಕೊನೆಯ ಉಸಿರು ಇರುವವರೆಗೂ ರಾಜಕೀಯದಲ್ಲಿ ಮುಂದುವರೆಯಲಿ. ನಿವೃತ್ತಿ ನಿರ್ಧಾರವನ್ನು ಅವರು ಬದಲಿಸಲಿ. ಇದು ಜನತಾದಳ ಕಾರ್ಯಕರ್ತರ ಪರವಾಗಿ ನನ್ನ ಮನವಿ ಎಂದು ರಾಜಕೀಯವಾಗಿ ಕುಮಾರಸ್ವಾಮಿಯವರ ಕಡು ವೈರಿ ಎಂದೇ ಗುರುತಿಸಿಕೊಂಡಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಮಾತುಗಳು.
ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿಂದು ಕಾರ್ಯಕರ್ತರ ಭೇಟಿ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ
೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರದಿದ್ದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಆಶ್ಚರ್ಯ ತರಿಸಿದೆ. ಅವರನ್ನು ನಂಬಿರುವ ಕಾರ್ಯಕರ್ತರ ಗತಿ ಏನು. ಅಧಿಕಾರ ಇರಲಿ ಇಲ್ಲದಿರಲಿ ರಾಜಕೀಯದಲ್ಲಿ ಕುಮಾರಸ್ವಾಮಿಯವರು ಮುಂದುವರೆಯಬೇಕು ಎಂದರು.
ಅಧಿಕಾರ ಇದ್ದರೆ ಮಾತ್ರ ಜನಸೇವೆ ಮಾಡಲು ಸಾಧ್ಯ ಎಂಬುದು ಸರಿಯಲ್ಲ. ಅಧಿಕಾರ ಇರಲಿ ಇಲ್ಲದಿರಲಿ ನಮ್ಮ ನಂಬಿದ ಕಾರ್ಯಕರ್ತರ ಹಿತ ಕಾಯಬೇಕು. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಸಾಕಷ್ಟು ಪ್ರಬಲವಾಗೇ ಇದೆ. ಚುನಾವಣಾ ಯಶಸ್ಸು ಸಿಗಲಿಲ್ಲ ಎಂದು ನಿವೃತ್ತಿಯಾಗುವುದು ಸರಿಯಲ್ಲ. ನಿವೃತ್ತಿಯ ನಿರ್ಧಾರವನ್ನು ಕುಮಾರಸ್ವಾಮಿ ವಾಪಸ್ ತೆಗೆದುಕೊಳ್ಳಬೇಕು. ಇದು ನನ್ನ ಮನವಿ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಪಕ್ಷದ ದಂಡನಾಯಕನಾದವನೇ ಅಧಿಕಾರ ಸಿಗಲಿಲ್ಲ ಎಂದು ನಿವೃತ್ತಿ ಘೋಷಣೆ ಮಾಡಿದರೆ ಕಾರ್ಯಕರ್ತರ ಕಥೆ ಏನು. ನಾನು ರಾಜಕೀಯವಾಗಿ ಅವರ ಜೊತೆ ಹೋರಾಟ ಮಾಡಿದ್ದೇನೆ. ಹೋರಾಟ ಮಾಡಲು ಎದುರಾಳಿ ಪ್ರಬಲವಾಗಿರಬೇಕು, ಆಗಲೇ ನಾವು ಎಚ್ಚರದಿಂದಿರಲು ಸಾಧ್ಯ ಎಂದು ಅವರು ಮಾರ್ಮಿಕವಾಗಿ ಹೇಳಿದರು.
ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ದೆಹಲಿಯಲ್ಲಿ ನಿನ್ನೆ ಪಕ್ಷದ ವರಿಷ್ಠರಿಗೆ ಸರ್ಕಾರದ ಆಡಳಿತದ ವಿರುದ್ಧ ವರದಿ ನೀಡಿದ್ದಾರೆ ಎಂಬ ಪತ್ರಿಕಾ ವರದಿಗಳನ್ನು ಅಲ್ಲಗೆಳೆದ ಅವರು, ಸರ್ಕಾರ ಉತ್ತಮವಾಗಿ ಆಡಳಿತ ಮಾಡುತ್ತಿದೆ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಹೊರತುಪಡಿಸಿ, ಕಳೆದ ೩ ವರ್ಷಗಳಲ್ಲಿ ಒಳ್ಳೆ ಕೆಲಸ ಮಾಡಿದೆ. ಈ ರೀತಿಯ ವರದಿಗಳಿಂದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗುತ್ತದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ನಾಯಕರು ಭಾಗಿ ಇಲ್ಲ
ವಕ್ಫ್ ಆಸ್ತಿ ಕಬಳಿಕೆಯಲ್ಲಿ ಯಾವುದೇ ಕಾಂಗ್ರೆಸ್ ನಾಯಕರು ಭಾಗಿಯಾಗಿಲ್ಲ. ಬಿಜೆಪಿ ಮಾಣ್ಪಾಡಿ ವರದಿಯನ್ನು ರಾಜಕೀಯವಾಗಿ ಬಳಸಿಕೊಂಡು ಕಾಂಗ್ರೆಸ್ ನಾಯಕರ ಹೆಸರಿಗೆ ಮಸಿ ಬೆಳೆಯುವ ಪ್ರಯತ್ನ ನಡೆಸಿದೆ. ವಕ್ಫ್ ಆಸ್ತಿ ಒಂದು ಗುಂಟೆಯೂ ಕಬಳಿಕೆಯಾಗಿಲ್ಲ ಎಂದರು.
ಈ ವಕ್ಫ್ ಆಸ್ತಿ ವರದಿಯನ್ನು ಈಗಾಗಲೇ ಸಚಿವ ಸಂಪುಟದಲ್ಲಿ ಇತ್ತು. ಈ ವರದಿಯಲ್ಲಿ ಹುರುಳಿಲ್ಲ ಎಂಬ ತೀರ್ಮಾನಕ್ಕೆ ಸರ್ಕಾರ ಬಂದಿದೆ ಎಂದರು.
ಕೆಪಿಸಿಸಿ ಅಧ್ಯಕ್ಷರ ರೇಸ್‌ನಲ್ಲಿ ನಾನಿಲ್ಲ. ಆ ಹುದ್ದೆ ಆಕ್ಷಾಂಕಿಯೂ ನಾನಲ್ಲ. ಈಗ ಕೊಟ್ಟಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ರಾಜ್ಯದ ವಿದ್ಯುತ್ ಪರಿಸ್ಥಿತಿಯನ್ನು ಸುಧಾರಿಸಿದರೆ ಅಷ್ಟೆ ಸಾಕು. ಇಲ್ಲೇ ಯಶಸ್ವಿಯಾಗಿ ಕೆಲಸ ಮಾಡುತ್ತೇನೆ ಎಂದರು.