ಕರ್ನಾಟಕ

ತೆರಿಗೆ ಹೆಚ್ಚಳ ವಿರೋಧಿಸಿ ಚಿನ್ನಾಭರಣ ವಹಿವಾಟು ಬಂದ್

Pinterest LinkedIn Tumblr

chinnaಬೆಂಗಳೂರು, ಮಾ. ೧೦- ಆಭರಣ ತಯಾರಕರ ಮೇಲೆ ಕೇಂದ್ರ ಸರ್ಕಾರ ವಿಧಿಸಿರುವ ಹೊಸ ತೆರಿಗೆ ವಿರೋಧಿಸಿ ಕರ್ನಾಟಕ ಜ್ಯುವೆಲಱ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ಚಿನ್ನಾಭರಣ ತಯಾರಕರು ಮತ್ತು ಮಾರಾಟಗಾರರು ಇಂದು ತಮ್ಮ ಅಂಗಡಿಗಳನ್ನು ಬಂದ್ ಮಾಡಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಜ್ಯುವೆಲಱ್ಸ್ ತಂಡದ ರೈತರು ಚಿಕ್ಕಪೇಟೆ, ಸಿಟಿ ಮಾರ್ಕೆಟ್, ಅವಿನ್ಯೂ ರಸ್ತೆ, ಮೈಸೂರು ಬ್ಯಾಂಕ್ ಮೂಲಕ ಬೈಕ್ ಱ್ಯಾಲಿ ನಡೆಸಿ, ಫ್ರೀಡಂ ಪಾರ್ಕ್‌ನಲ್ಲಿ ಸಮಾವೇಶಗೊಂಡರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಟಿ.ಎ. ಶರವಣ, ಕೇಂದ್ರ ಸರ್ಕಾರಕ್ಕೆ ಅತಿ ಹೆಚ್ಚು ಆದಾಯ ತಂದುಕೊಡುವ ಚಿನ್ನಾಭರಣ ತಯಾರಿಕಾ ವಲಯದ ಮೇಲೆ ಗದಾ ಪ್ರಹಾರ ನಡೆಸಲು ಸರ್ಕಾರ ಮುಂದಾಗಿದೆ. ಲಕ್ಷಾಂತರ ಮಂದಿ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಕೋಟ್ಯಾಂತರ ಜನರು ಜೀವನೋಪಾಯಕ್ಕೆ ಈ ಕ್ಷೇತ್ರವನ್ನು ಅವಲಂಭಿಸಿದ್ದಾರೆ. ಆದರೆ ಈ ಕ್ಷೇತ್ರದ ಸಮಸ್ಯೆಯನ್ನು ಯಾರು ಕೇಳುತ್ತಿಲ್ಲ ಎಂದು ಆರೋಪಿಸಿದರು.
ರಾಜ್ಯಸಭಾ ಸದಸ್ಯ ಉಪೇಂದ್ರ ರೆಡ್ಡಿ ಮಾತನಾಡಿ, ಚಿನ್ನಾಭರಣ ಮಾರಾಟಗಾರರ ಮೇಲೆ ತೆರಿಗೆ ವಿಧಿಸಿರುವುದರಿಂದ ತೊಂದರೆಯಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಸಂಘದ ಬೆಂಗಳೂರು ಅಧ್ಯಕ್ಷ ವೆಂಕಟೇಶ್ ಬಾಬು ಮಾತನಾಡಿ, ಪ್ರಧಾನಿಯವರು ಡಿಜಿಟಲ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ಇಂತಹ ಯೋಜನೆಗಳ ಬಗ್ಗೆ ಉದ್ದುದ್ದ ಭಾಷಣ ಮಾಡುತ್ತಾರೆ. ಆದರೆ ಚಿನ್ನಾಭರಣ ಮಾರಾಟಗಾರರ ಸಮಸ್ಯೆ ಆಲಿಸುತ್ತಿಲ್ಲ. ಈ ವಲಯದಲ್ಲಿ ಶೇ. ೮೦ ರಷ್ಟು ಮಂದಿ ಅಸಂಘಟಿತರಾಗಿದ್ದಾರೆ. ಈ ತೆರಿಗೆ ಹೆಚ್ಚಳದಿಂದ ಇವರ ಕುಟುಂಬಗಳು ನಷ್ಟಕ್ಕೊಳಗಾಗಲಿವೆ ಎಂದು ಹೇಳಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಮಾತನಾಡಿ, ಕೇಂದ್ರ ಸರ್ಕಾರ ಚಿನ್ನಾಭರಣ ತಯಾರಕರ ಮೇಲೆ ಶೇ. ೧ ರಷ್ಟು ತೆರಿಗೆ ವಿಧಿಸಿರುವುದರಿಂದ ಗ್ರಾಹಕರು ಇನ್ನು ಮುಂದೆ ೧ ಗ್ರಾಂ. ಗೆ ೩೫೦ ರೂ. ಹೆಚ್ಚುವರಿಯಾಗಿ ಪಾವತಿಸಬೇಕು. ಇದು ಹೆಚ್ಚಿನ ಗ್ರಾಹಕರಿಗೆ ತಿಳಿದಿಲ್ಲ. ಗ್ರಾಹಕರು ಕೇಂದ್ರದ ಈ ನೀತಿಯ ವಿರುದ್ಧ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿದರು.
೧೯೬೩ರಲ್ಲಿ ಚಿನ್ನಾಭರಣ ನಿಯಂತ್ರಣ ಕಾಯ್ದೆ ಜಾರಿಗೆ ಬಂದಾಗ ಚಿನ್ನಾಭರಣ ಮಾರಾಟಗಾರರು, ಕೆಲಸಗಾರರು ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗಲೂ ಅದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ಇದೆ. ಆದ್ದರಿಂದ ಕೇಂದ್ರ ಸರ್ಕಾರ ತಕ್ಷಣ ತೆರಿಗೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಇಲ್ಲದಿದ್ದರೆ ದೆಹಲಿ ಚಲೋ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ನೇಮಿಚಂದ್ರ, ರವಿ ಕುಮಾರ್, ಬಾಲಕೃಷ್ಣಮೂರ್ತಿ, ಕೋಲಾರ- ಚಿಕ್ಕಬಳ್ಳಾಪುರ ರಾಜ್ಯಾಧ್ಯಕ್ಷ ಎನ್.ಎಚ್. ರಾಜಶೇಖರ್ ಮತ್ತಿತರರು ಭಾಗವಹಿಸಿದ್ದರು.

Write A Comment