ಕರ್ನಾಟಕ

ಪೊಲೀಸರಿಂದಲೇ 2.6 ಕೋಟಿ ರೂ. ಹಣ ಗೋಲ್‌ಮಾಲ್ ಮಾಡಿರುವ ಮತ್ತೊಂದು ಪ್ರಕರಣ ಬೆಳಕಿಗೆ

Pinterest LinkedIn Tumblr

noteಮೈಸೂರು, ಮಾ.6- ಕಳೆದೆರಡು ವರ್ಷಗಳ ಹಿಂದೆ ಚಿನ್ನದ ವ್ಯಾಪಾರಿಗಳಿಂದ ಪೊಲೀಸರು ವಶಪಡಿಸಿಕೊಂಡಿದ್ದ 2.2ಕೋಟಿ ರೂ. ಹಣ ವಂಚನೆ ಪ್ರಕರಣ ಇನ್ನೂ ಹಸಿಯಾಗಿರುವಾಗಲೇ ಇಲ್ಲಿನ ಎನ್.ಆರ್.ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು ದಿನಗಳ ಹಿಂದೆ ಮೋರಿಯಲ್ಲಿ ಗೋಣಿ ಚೀಲದಲ್ಲಿ ಸಿಕ್ಕಿದೆ ಎನ್ನಲಾದ 2.6 ಕೋಟಿ ರೂ. ಹಣವನ್ನು ಪೊಲೀಸರು ಗೋಲ್‌ಮಾಲ್ ಮಾಡಿರುವ ಪ್ರಕರಣ ನಡೆದಿದೆ. ಎನ್.ಆರ್.ಪೊಲೀಸ್ ಠಾಣೆ ವ್ಯಾಪ್ತಿಯ ಉನ್ನತಿನಗರದ ಉದ್ಯಾನವನದ ಬಳಿ ಸಾರ್ವಜನಿಕರು ವಾಕಿಂಗ್ ಹೋಗುವಾಗ ರಸ್ತೆ ಬದಿಯ ಮೋರಿಯಲ್ಲಿ ಗೋಣಿಚೀಲವೊಂದು ಬಿದ್ದಿತ್ತು. ಇದನ್ನು ಪರೀಕ್ಷಿಸಿದ ಸಾರ್ವಜನಿಕರು ಅದರಲ್ಲಿ ನೋಟಿನ ಕಂತೆಗಳು ಇರುವುದನ್ನು ನೋಡಿ ನಿಬ್ಬೆರಗಾದರು.

ಕೂಡಲೇ ಎಲ್ಲರೂ ಸೇರಿ ಪೊಲೀಸರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದ್ದಾರೆ. ಗರುಡ ವಾಹನದಲ್ಲಿ ಸ್ಥಳಕ್ಕೆ ಆಗಮಿಸಿದ ಎನ್.ಆರ್.ಠಾಣೆ ಪೊಲೀಸರು ಎಲ್ಲರ ಮುಂದೆಯೇ ಮಹಜರು ಮಾಡಿ ಹಣವಿದ್ದ ಚೀಲವನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲಿಗೆ ಸಾರ್ವಜನಿಕರು ಹಣ ಪೊಲೀಸರ ಕೈ ಸೇರಿತು. ಇನ್ನೇನು ಅದು ವಾರಸುದಾರರಿಗೆ ಸೇರಬಹುದು ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಕಥೆಯೇ ಬೇರೆಯಾಗಿದೆ. ಮೂರ್ನಾಜಲ್ಕು ದಿನಗಳಾದರೂ ಈ ಬಗ್ಗೆ ಪೊಲೀಸರು ಚಕಾರವೆತ್ತಿಲ್ಲ. ಆಟೋದಲ್ಲಿ ಅಥವಾ ಇನ್ನಿತರೆ ವಾಹನದಲ್ಲಿ ಯಾರಾದರೂ ಬಿಟ್ಟು ಹೋಗಿರಬಹುದು. ಠಾಣೆಗೆ ಬಂದು ಪಡೆದುಕೊಳ್ಳಬಹುದು ಎಂದು ಸಾರ್ವಜನಿಕರು ತಿಳಿದು ಕೊಂಡಿದ್ದರು. ಆದರೆ, ಈವರೆಗೂ ಯಾರೂ ಬಂದು ಹಣ ವಾಪಸ್ ಪಡೆದಿರುವ ಬಗ್ಗೆ ಮಾಹಿತಿ ಇಲ್ಲ.

ಮಹಜರು ಸಂದರ್ಭದಲ್ಲಿ ಸಹಿ ಹಾಕಿದವರು ಡಿಸಿಪಿ ಅವರನ್ನು ಕೇಳಿದರೆ ಅವರು ಈ ಬಗ್ಗೆ ನನಗೆ ಗೊತ್ತೇ ಇಲ್ಲ ಎಂದು ಹೇಳಿದ್ದಾರೆ. ಠಾಣೆ ಇನ್ಸ್‌ಪೆಕ್ಟರ್ ಕೂಡ ಇದೇ ಉತ್ತರ ನೀಡಿದ್ದಾರೆ. ಇದರಿಂದ ಸಾರ್ವಜನಿಕರಲ್ಲಿ ಅನುಮಾನ ಮೂಡಿದೆ. ಇಷ್ಟು ಪ್ರಮಾಣದ ಹಣ ಏನಾಯಿತು? ಪೊಲೀಸರೇ ಗೋಲ್‌ಮಾಲ್ ಮಾಡಿದರೇ ಎಂಬ ಬಗ್ಗೆ ಮೈಸೂರು ತುಂಬೆಲ್ಲಾ ಹರಡಿದೆ. ಕಳೆದೆರಡು ವರ್ಷಗಳ ಹಿಂದೆ ಇದೇ ರೀತಿ ಚಿನ್ನದ ವ್ಯಾಪಾರಿಗಳಿಂದ ಬಸ್‌ನಲ್ಲಿ 2.2 ಕೋಟಿ ರೂ. ಹಣವನ್ನು ವಶಡಿಸಿಕೊಳ್ಳಲಾಗಿತ್ತು. ಆದರೆ, 20 ಲಕ್ಷ ರೂ. ಎಂದು ಹೇಳಿದ್ದರು. ಈ ಪ್ರಕರಣ ತನಿಖೆಯಾದಾಗ ಹಲವು ಪೊಲೀಸ್ ಅಧಿಕಾರಿಗಳು ಅಮಾನತಾಗಬೇಕಾಗಿತ್ತು. ಇನ್ನೂ ಆ ಪ್ರಕರಣಕ್ಕೆ ಮುಕ್ತಿ ಸಿಕ್ಕಿಲ್ಲ.

ನಿನ್ನೆ ನಡೆದ ಅಧಿವೇಶನದಲ್ಲೂ ಕೂಡ ಇದರ ಬಗ್ಗೆ ಚರ್ಚೆಯಾಗಿದೆ. ಈ ಸಂದರ್ಭದಲ್ಲೇ ಮೈಸೂರಿನಲ್ಲಿ ಮತ್ತೆ ಇಷ್ಟು ಪ್ರಮಾಣದ ಹಣ ಗೋಲ್‌ಮಾಲ್ ಆಗಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

Write A Comment